ನವದೆಹಲಿ: ವಾರದಲ್ಲಿ ಐದು ದಿನಗಳ ಕೆಲಸದ ನಿಯಮ ಜಾರಿಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ (Bank strike today) ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿಯೂ ಬ್ಯಾಂಕ್ ಶಾಖೆಗಳ ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗಲಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ.
ಪ್ರಮುಖ ಬೇಡಿಕೆಗಳೇನು?
5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ: ಎಲ್ಲಾ ಶನಿವಾರಗಳನ್ನು ಬ್ಯಾಂಕ್‌ಗಳಿಗೆ ಸಂಪೂರ್ಣ ರಜೆ ಎಂದು ಘೋಷಿಸಬೇಕು. ಆರ್‌ಬಿಐ (RBI), ಎಲ್‌ಐಸಿ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಂತೆ ವಾರಕ್ಕೆ 5 ದಿನಗಳ ಕೆಲಸದ ನಿಯಮ ತರಬೇಕು. ಇದಕ್ಕಾಗಿ ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ನೌಕರರು ಸಿದ್ಧರಿದ್ದಾರೆ ಎಂದು ಯೂನಿಯನ್ ತಿಳಿಸಿದೆ.
ಪಿಎಲ್‌ಐ (PLI) ಯೋಜನೆಯ ವಿರೋಧ: ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಪರಿಷ್ಕೃತ 'ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ' (Performance Linked Incentive) ಯೋಜನೆಯು ಕೇವಲ ಹಿರಿಯ ಅಧಿಕಾರಿಗಳಿಗೆ ಮಾತ್ರ ಲಾಭದಾಯಕವಾಗಿದ್ದು, ಸಾಮಾನ್ಯ ನೌಕರರ ನಡುವೆ ತಾರತಮ್ಯ ಉಂಟುಮಾಡುತ್ತದೆ ಎಂಬುದು ಇವರ ವಾದ.
ಪಿಂಚಣಿ ಪರಿಷ್ಕರಣೆ: ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸುವುದು, ನಿವೃತ್ತ ನೌಕರರಿಗೆ ಪಿಂಚಣಿ ನವೀಕರಿಸುವುದು ಮತ್ತು ಏಕರೂಪದ ತುಟ್ಟಿಭತ್ಯೆ (DA) ನೀಡುವುದು.
ಸಿಬ್ಬಂದಿ ನೇಮಕಾತಿ: ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಕ್ಲರ್ಕ್ ಮತ್ತು ಇತರ ಸಿಬ್ಬಂದಿಗಳ ಹುದ್ದೆಗಳಿಗೆ ಸೂಕ್ತ ನೇಮಕಾತಿ ಮಾಡಿಕೊಳ್ಳುವ ಮೂಲಕ ಹೆಚ್ಚುತ್ತಿರುವ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು.
ನಾಲ್ಕು ದಿನ ಬ್ಯಾಂಕ್ ಸೇವೆ ಇರಲ್ಲ
ಶುಕ್ರವಾರದ ಬ್ಯಾಂಕ್ ಮುಷ್ಕರದ ಬಳಿಕ ಸೆಪ್ಟೆಂಬರ್ 12ರಂದು ಎರಡನೇ ಶನಿವಾರ ಇರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ನಂತರ ಸೆಪ್ಟೆಂಬರ್ 13ರಂದು ಭಾನುವಾರವಾಗಿದ್ದು, ಅಂದು ಸಹ ಬ್ಯಾಂಕ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದಾದ ಬಳಿಕ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೆ.20ರಿಂದ 108 ಆಂಬುಲೆನ್ಸ್ ಸೇವೆ ಬಂದ್; ಸಿಬ್ಬಂದಿಗಳಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ
ಎಟಿಎಂ, ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುವ ಸಾಧ್ಯತೆ ಇದೆ. ಆದರೂ ಚೆಕ್ ಕ್ಲಿಯರೆನ್ಸ್ ಹಾಗೂ ಶಾಖೆಯಲ್ಲಿ ನಡೆಯುವ ಕೆಲವು ಸೇವೆಗಳು ಮುಷ್ಕರ ಮತ್ತು ಸತತ ರಜೆಗಳಿಂದ ವಿಳಂಬವಾಗಬಹುದು.