ತಿರುವನಂತಪುರಂ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2025ರ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 19 ಸಿನಿಮಾಗಳ ಪ್ರದರ್ಶನಕ್ಕೆ (IFFK 2025 Row) ಅನುಮತಿ ನಿರಾಕರಿಸಿದ್ದು, ಇದೀಗ ಕೇರಳ ಸರ್ಕಾರ ಅದರ ಪ್ರದರ್ಶನಕ್ಕೆ ಸಜ್ಜಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತಿಕ್ಕಾಟದ ಕುರಿತು ಸಂಸದ ಶಶಿ ತರೂರ್ ಮಾತನಾಡಿದ್ದಾರೆ. 19 ಚಲನಚಿತ್ರಗಳ ಪ್ರದರ್ಶನವನ್ನು ನಿರ್ಬಂಧಿಸುವ ಕೇಂದ್ರದ ನಿರ್ಧಾರವನ್ನು ಅವರು ಟೀಕಿಸಿದ್ದಾರೆ.
ಪ್ರದರ್ಶನಕ್ಕೆ ಅನುಮತಿ ಪಡೆಯದ ಚಲನಚಿತ್ರಗಳ ಮೂಲ ಪಟ್ಟಿ ತುಂಬಾ ಉದ್ದವಾಗಿದೆ ಎಂದು ತರೂರ್ ಹೇಳಿದ್ದಾರೆ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಧ್ವನಿ ವಿನ್ಯಾಸಕ ಮತ್ತು ಉತ್ಸವದ ಅಧ್ಯಕ್ಷರಾದ ರೆಸುಲ್ ಪೂಕುಟ್ಟಿ ಅವರ ಕೋರಿಕೆಯ ಮೇರೆಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ನಂತರ ಹಲವು ಚಲನಚಿತ್ರಗಳಿಗೆ ಅನುಮತಿ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ. ಬಳಿ ಬೀಫ್ ಎಂಬ ಚಿತ್ರವಿದೆ. ಅದು ಗೋಹತ್ಯೆಯ ಬಗ್ಗೆ ಅಲ್ಲ. ವಾಸ್ತವವಾಗಿ ಇದು ಒಬ್ಬ ರ‍್ಯಾಪ್ ಕಲಾವಿದನ ಬಗ್ಗೆ. ಅವರು ಆ ಶೀರ್ಷಿಕೆಯನ್ನು ನೋಡಿದ ಕಾರಣ ಅದನ್ನು ನಿಷೇಧಿಸಿದರು. ನಮ್ಮ ಅಧಿಕಾರಿಗಳು ಹೆಚ್ಚು ಪರಿಷ್ಕೃತ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು ಏಕೆಂದರೆ ಭಾರತದ ಇಮೇಜ್ ಅಪಾಯದಲ್ಲಿದೆ ಎಂದು ತರೂರ್ ಹೇಳಿದ್ದಾರೆ.
ಚಲನಚಿತ್ರೋತ್ಸವ ಡಿಸೆಂಬರ್ 12ರಂದು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಪ್ರಾರಂಭಗೊಂಡಿದ್ದು, ಡಿಸೆಂಬರ್ 19ರಂದು ಕೊನೆಗೊಳ್ಳಲಿದೆ. ಚಲನಚಿತ್ರೋತ್ಸವವನ್ನು ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ ಆಯೋಜಿಸುತ್ತದೆ. ಇದು ರಾಜ್ಯದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗೆ ವರದಿ ಮಾಡುವ ಸ್ವಾಯತ್ತ ಸಂಸ್ಥೆಯಾಗಿದೆ. ಈ ವಾರ್ಷಿಕ ಕಾರ್ಯಕ್ರಮಕ್ಕೆ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಾರೆ. 2025ರ 30ನೇ ಆವೃತ್ತಿಯಲ್ಲಿ 13,000ಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಹಲವು ಚಲನಚಿತ್ರಗಳಲ್ಲಿ ಪ್ಯಾಲೇಸ್ಟಿನಿಯನ್ ಕೃತಿಗಳು, ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಹಿಂದೆ ಪ್ರದರ್ಶಿಸಲಾದ ಶೀರ್ಷಿಕೆಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗಾಗಲೇ ಲಭ್ಯವಿರುವ ಚಲನಚಿತ್ರಗಳು ಸೇರಿವೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವುಗಳ ಪ್ರದರ್ಶನಕ್ಕೆ ಅಗತ್ಯವಾದ ಕಡ್ಡಾಯ ವಿನಾಯಿತಿ ಪ್ರಮಾಣಪತ್ರಗಳನ್ನು ನಿರಾಕರಿಸಿತ್ತು.
ಸಿಎಂ ಒಪ್ಪಿಗೆ
ಕೇಂದ್ರ ಸರ್ಕಾರದ ಈ ನಿಯಮವನ್ನು ಸಿಎಂ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ. ಸಂಘ ಪರಿವಾರದ ಕಾರ್ಯಸೂಚಿಯ ಭಾಗವಾಗಿ ಅನೇಕ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರದ ಒಪ್ಪಿಗೆಗಾಗಿ ಕಾಯದೆ ಎಲ್ಲಾ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ IFFK 2025 ರ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ.