ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಮಾಡಿದ ಪಾಪಕ್ಕೆ ತಕ್ಕ ಶಿಕ್ಷೆʼʼ: ಮಗನ ಮುಖ ನೋಡಲು ನಿರಾಕರಿಸಿದ ಎನ್‌ಕೌಂಟರ್‌ನಲ್ಲಿ ಸತ್ತ ಬರುಯಿಪುರ್ ಹತ್ಯಾಚಾರಿಯ ತಾಯಿ

Baruipur Case: ಪಶ್ಚಿಮ ಬಂಗಾಳದ ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡಲ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತಿದ್ದಾನೆ. ಮಗನ ಕ್ರೂರ ಕೃತ್ಯದಿಂದ ಆಘಾತಗೊಂಡ ತಾಯಿ, "ಅವನು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯೇ ಇದು" ಎಂದು ಹೇಳಿ ಆತನ ಶವವನ್ನು ಸ್ವೀಕರಿಸಲು ಹಾಗೂ ಮುಖ ನೋಡಲು ನಿರಾಕರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಘಟನೆಯ ಬಳಿಕ ಹಿಂಸಾಚಾರವೂ ನಡೆದಿತ್ತು.

ಅಪರಾಧಿ ಪ್ರಭಾಸ್ ಮೊಂಡಲ್ ಮತ್ತು ಆತನ ತಾಯಿ

ಕೋಲ್ಕತಾ, ಜು. 8: ಪಶ್ಚಿಮ ಬಂಗಾಳದ ಬರುಯಿಪುರ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಅಪರಾಧಿಗಳಲ್ಲಿ ಒಬ್ಬನಾದ ಪ್ರಭಾಸ್ ಮೊಂಡಲ್ (Prabhas Mondal) ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತಿದ್ದಾನೆ. ಆತನ ಈ ಕ್ರೂರ ಕೃತ್ಯದಿಂದ ಆಘಾತಗೊಂಡಿರುವ ಹೆತ್ತ ತಾಯಿಯೇ ಮಗನ ಶವವನ್ನು ಪಡೆದುಕೊಳ್ಳಲು ಮತ್ತು ಆತನ ಮುಖ ನೋಡಲು ನಿರಾಕರಿಸಿದ್ದಾರೆ. "ತಾನು ಮಾಡಿದ ಪಾಪಕ್ಕೆ ಆತನಿಗೆ ತಕ್ಕ ಶಾಸ್ತಿಯೇ ಆಗಿದೆ" ಎಂದು ಆತನ ತಾಯಿ ಆಕ್ರೋಶ ಹೊರ ಹಾಕಿದ್ದಾರೆ.

ಸ್ಥಳ ಮಹಜರು ನಡೆಸುವಾಗ ಆರೋಪಿ ಪ್ರಭಾಸ್ ಮೊಂಡಲ್ ಪೊಲೀಸರ ಬಂದೂಕನ್ನು ಕಸಿದುಕೊಂಡು ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದು, ಆತ ಮೃತಪಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಗನ ಸಾವಿನ ಸುದ್ದಿ ತಿಳಿಸಲು ಪೊಲೀಸರು ಆತನ ಮನೆಗೆ ಬಂದಾಗ, "ನನಗೆ ಆತನ ಮುಖ ನೋಡಲು ಇಷ್ಟವಿಲ್ಲ. ಶವವನ್ನು ಪಡೆಯಲು ಕುಟುಂಬದಿಂದ ಯಾರೂ ಬರುವುದಿಲ್ಲ" ಎಂದು ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಗ ತೀವ್ರ ಮಾದಕ ವ್ಯಸನಿಯಾಗಿದ್ದ ಮತ್ತು ತಾನು ಹೇಳಿದ ಮಾತನ್ನು ಕೇಳುತ್ತಿರಲಿಲ್ಲ ಎಂದು ಅವರು ಈ ಹಿಂದೆ ಅಳಲು ತೋಡಿಕೊಂಡಿದ್ದರು.

₹ 10,000 ಹಣದಾಸೆಗೆ ಬಾಲಕಿಯನ್ನು ಕರೆತಂದಿದ್ದ ಆರೋಪಿ

ಪೊಲೀಸ್ ತನಿಖೆಯ ಪ್ರಕಾರ, ಜುಲೈ 4ರಂದು ಈ ಅಪ್ರಾಪ್ತ ಬಾಲಕಿಯನ್ನು ಪ್ರಭಾಸ್ ಆಮಿಷವೊಡ್ಡಿ ಕರೆತಂದಿದ್ದ. ಈ ಕೃತ್ಯಕ್ಕಾಗಿ ಪ್ರಮುಖ ಆರೋಪಿ ಆನಂದ ಸರ್ದಾರ್ ಆತನಿಗೆ ₹ 10,000 ಕೊಡುವುದಾಗಿ ಭರವಸೆ ನೀಡಿದ್ದ. ಬಾಲಕಿಯನ್ನು ಉಳಿದ ಇಬ್ಬರು ಆರೋಪಿಗಳು ಇದ್ದ ಶೆಡ್‌ಗೆ ಕರೆದೊಯ್ದು ಈ ಘೋರ ಕೃತ್ಯ ಎಸಗಲಾಗಿತ್ತು. ಜುಲೈ 5ರಂದು ಸೂರ್ಯಪುರ ಹಾತ್ ಪ್ರದೇಶದ ಕೊಳವೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು.

ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬರುಯಿಪುರ್-ಜೋಯನಗರ ರಸ್ತೆಯನ್ನು ತಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದರು. ಈ ವೇಳೆ ಉದ್ರಿಕ್ತ ಜನಸಮೂಹವು ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯ ಮೇಲೆ 26 ವರ್ಷದ ಯುವಕನೊಬ್ಬನನ್ನು ಹೊಡೆದು ಕೊಂದಿತ್ತು. ಆದರೆ ನಂತರದ ತನಿಖೆಯಲ್ಲಿ ಆ ಯುವಕ ನಿರಪರಾಧಿ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾಸ್ ಮೊಂಡಲ್, ಕಬೀರ್ ಮುಲ್ಲಾ, ಆನಂದ್ ಸರ್ದಾರ್ ಮತ್ತು ದಿವಾಕರ್ ಸರ್ದಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಎಂ ಸುವೇಂದು ಅಧಿಕಾರಿ ಭೇಟಿ, ತನಿಖೆಗೆ ಆದೇಶ

ಘಟನೆಯ ನಂತರ ಕಾನೂನು ಸುವ್ಯವಸ್ಥೆ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಎಂ ಸುವೇಂದು ಅಧಿಕಾರಿ, ಮೃತ ಬಾಲಕಿ ಮತ್ತು ಲಿಂಚಿಂಗ್‌ಗೆ ಒಳಗಾದ ನಿರಪರಾಧಿ ಯುವಕನ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. "ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ ಮತ್ತು ರೈಲ್ವೆ ಹಳಿಗಳನ್ನು ಕಿತ್ತೆಸೆದ ಸುಮಾರು 200 ಜನರನ್ನು ಗುರುತಿಸಲಾಗಿದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಘಟನೆಯ ಕುರಿತು 72 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕ (DGP) ಸಿದ್ಧನಾಥ್ ಗುಪ್ತಾ ಅವರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.