ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುತ್ತುಗೋಡೆ ಇಲ್ಲ, ಶೌಚಾಲಯವಿಲ್ಲ: ಕಾರಣ ನೀಡಿ ಶಾಲೆಗೆ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಣೆ; ಲಿಂಗ ತಾರತಮ್ಯದ ಬಗ್ಗೆ ಆಕ್ರೋಶ

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಶೌಚಾಲಯ ಮತ್ತು ಸುತ್ತುಗೋಡೆ ಇಲ್ಲ ಎಂಬ ಕಾರಣ ನೀಡಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಕ್ರಮ ಲಿಂಗ ತಾರತಮ್ಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣದ ಹಕ್ಕು ಉಲ್ಲಂಘನೆ ಆರೋಪದಡಿ ತನಿಖೆ ಆರಂಭವಾಗಿದೆ.

ಸಾಂದರ್ಭಿಕ ಚಿತ್ರ

ಲಖನೌ, ಏ. 22: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸರ್ಕಾರಿ ಅನುದಾನಿತ ಕಾಲೇಜೊಂದರಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶ ನಿರಾಕರಿಸುತ್ತಿರುವ ಘಟನೆ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಕೇವಲ ಮೂಲಸೌಕರ್ಯದ ಕೊರತೆಯನ್ನು ನೆಪವಾಗಿಟ್ಟುಕೊಂಡು ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಝಿಂಕು ಲಾಲ್ ತ್ರಿವೇಣಿ ರಾಮ್ ಚೌಧರಿ ಇಂಟರ್ ಕಾಲೇಜ್‌ (Jhinku Lal Triveni Ram Chaudhary Inter College)ನಲ್ಲಿ ಈ ಘಟನೆ ನಡೆದಿದ್ದು, ಇದು ಶಿಕ್ಷಣ ವ್ಯವಸ್ಥೆಯಲ್ಲಿನ ಲಿಂಗ ತಾರತಮ್ಯದ ಕರಾಳ ಮುಖವನ್ನು ಎತ್ತಿ ತೋರಿಸಿದೆ.

1957ರಿಂದಲೂ ಸಹ-ಶಿಕ್ಷಣ ಸಂಸ್ಥೆಯಾಗಿ ಯಶಸ್ವಿಯಾಗಿ ನಡೆಯುತ್ತಿದ್ದ ಈ ಕಾಲೇಜು, ಈಗ ಇದ್ದಕ್ಕಿದ್ದಂತೆ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಲು ನಿರಾಕರಿಸುತ್ತಿದೆ. ಪ್ರಾಂಶುಪಾಲ ಅಜ್ಞಾರಾಮ್ ಚೌಧರಿ ಅವರ ಪ್ರಕಾರ, ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ ಮತ್ತು ಕಾಲೇಜಿನ ಸುತ್ತಲೂ ಭದ್ರತೆಯ ಕಾಂಪೌಂಡ್ ಗೋಡೆ ಇಲ್ಲ. ಈ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಪ್ರವೇಶ ನೀಡುವುದಿಲ್ಲ ಎಂದು ಅವರು ಹಠ ಹಿಡಿದಿದ್ದಾರೆ. ಆದರೆ ಈ ವಾದವನ್ನು ಪೋಷಕರು ಮತ್ತು ಸ್ಥಳೀಯರು ಬಲವಾಗಿ ವಿರೋಧಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ವಿದ್ಯಾರ್ಥಿನಿಯರನ್ನು ದುಬಾರಿ ಶುಲ್ಕವಿರುವ ಹತ್ತಿರದ ಖಾಸಗಿ ಶಾಲೆಗಳಿಗೆ ತಳ್ಳುವ ಹುನ್ನಾರ ಎಂದು ಅವರು ಆರೋಪಿಸಿದ್ದಾರೆ.

ವಿಡಿಯೊ ಇಲ್ಲಿದೆ:



ವಿಭಿನ್ನ ಪ್ರತಿಭಟನೆ ಮತ್ತು ತನಿಖೆ

ಈ ತಾರತಮ್ಯದ ವಿರುದ್ಧ ಆಕ್ರೋಶಗೊಂಡ ಪೋಷಕರೊಬ್ಬರು ತಮ್ಮ ಮಗಳಿಗೆ ಪ್ರವೇಶ ಸಿಗದಿದ್ದಾಗ, ಸಾಂಕೇತಿಕವಾಗಿ ಶಾಲೆಗೆ 'ಶೌಚಾಲಯದ ಪೀಠವನ್ನು' (Toilet seat) ಹೊತ್ತು ತಂದು ಪ್ರತಿಭಟನೆ ನಡೆಸಿದ್ದಾರೆ. ಶಾಲೆಯಲ್ಲಿ ಸೌಲಭ್ಯವಿಲ್ಲದಿದ್ದರೆ ನಾವು ತಂದುಕೊಡುತ್ತೇವೆ, ಆದರೆ ಶಿಕ್ಷಣ ನಿರಾಕರಿಸಬೇಡಿ ಎಂಬ ಅವರ ಈ ನಡೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ನಾಗಾ-ಕುಕಿ ಗುಂಪುಗಳ ನಡುವೆ ಭೀಕರ ಸಂಘರ್ಷ

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಶಾಲೆಗಳ ನಿರೀಕ್ಷಕ ಸಂಜಯ್ ಸಿಂಗ್ ಅವರು ಕಾಲೇಜು ಆಡಳಿತ ಮಂಡಳಿಗೆ ನೊಟೀಸ್‌ ಜಾರಿ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಪ್ರವೇಶ ನಿರಾಕರಿಸುವುದು 'ಶಿಕ್ಷಣದ ಹಕ್ಕು' ಕಾಯ್ದೆಯ ಉಲ್ಲಂಘನೆಯಾಗಿದ್ದು, ಕೂಡಲೇ ಮೂಲ ಸೌಕರ್ಯ ಸರಿಪಡಿಸಿ ದಾಖಲಾತಿ ಪ್ರಕ್ರಿಯೆ ಆರಂಭಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಘಟನೆಯು ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ದಯನೀಯ ಸ್ಥಿತಿಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ.