ನವದೆಹಲಿ: ವಿವಾದಿತ ಭೋಜಶಾಲಾ ಕಮಲ್ ಮೌಲಾ ಮಸೀದಿಗೆ (Bhojshala-Kamal Maula Mosque ) ಸಂಬಂಧಿಸಿ ಮುಸ್ಲಿಂ ಸಮುದಾಯದ (Muslim community) ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್ (Supreme Court) ಒಪ್ಪಿಗೆ ನೀಡಿದೆ. ಮಧ್ಯಪ್ರದೇಶದ (Madhya Pradesh) ಧಾರ್ ಜಿಲ್ಲೆಯ ( Dhar district) ಭೋಜಶಾಲಾ ಕಮಲ್ ಮೌಲಾ ಮಸೀದಿ ಸಂಕೀರ್ಣ ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ (Madhya Pradesh high court) ಮೇ 15 ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಭೋಜಶಾಲಾ ಕಮಲ್ ಮೌಲಾ ಮಸೀದಿಗೆ ಸಂಬಂಧಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ದಶಕದ ಹಿಂದೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ ಆದೇಶದಿಂದ ಮುಸ್ಲಿಂ ಸಮುದಾಯಕ್ಕೆ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಯಾಯಿತು.
ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ ಮುಸ್ಲಿಂ ಮುಖಂಡರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
“ಹಿಂದೂ ರಾಷ್ಟ್ರದ ಕಲ್ಪನೆಗೆ ಭಯಪಡುವ ಅಗತ್ಯವಿಲ್ಲ”: ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಬಾಬಾ ರಾಮ್‌ದೇವ್
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹ್ನಾ ಅವರನ್ನು ಒಳಗೊಂಡ ಪೀಠಕ್ಕೆ ಮುಸ್ಲಿಂ ಮೇಲ್ಮನವಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಹುಜೆಫಾ ಅಹ್ಮದಿ ಮತ್ತು ವಕೀಲ ನಿಜಾಮ್ ಪಾಷಾ ಅವರು ಈ ಕುರಿತು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅರ್ಜಿಯಲ್ಲಿರುವ ಲೋಪಗಳನ್ನು ತೆಗೆದು ಹಾಕುವಂತೆ ವಕೀಲರಿಗೆ ತಿಳಿಸಿದರು. ಅಲ್ಲದೆ ಶೀಘ್ರದಲ್ಲೇ ಪೀಠದ ಮುಂದೆ ಇದನ್ನು ಪ್ರಸ್ತುತ ಪಡಿಸುವುದಾಗಿ ತಿಳಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಂರಕ್ಷಿತ ಸ್ಮಾರಕವಾಗಿರುವ ಭೋಜಶಾಲಾ ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯ ಎಂದು ಹಿಂದೂ ಸಮುದಾಯ ಹೇಳಿಕೊಂಡಿದ್ದು, ಇದು 11 ನೇ ಶತಮಾನದ ರಚನೆಯಾಗಿರುವ ಕಮಲ್ ಮೌಲಾ ಮಸೀದಿ ಎಂದು ಮುಸ್ಲಿಂ ಸಮುದಾಯ ವಾದಿಸುತ್ತಿದೆ. ಈ ಕುರಿತು ತೀರ್ಪಿಗಾಗಿ ಎರಡು ಕಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಅರ್ಜಿಯನ್ನು ಆಲಿಸದೆ ಯಾವುದೇ ಮೇಲ್ಮನವಿಯ ಬಗ್ಗೆ ವಿಚಾರಣೆ ನಡೆಸಿ ಆದೇಶ ನೀಡಬಾರದು ಎಂದು ಹಿಂದೂ ಮುಖಂಡರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಎರಡೂ ಪಕ್ಷಗಳನ್ನು ಆಲಿಸಿದ ಬಳಿಕವೇ ತೀರ್ಪು ನೀಡಲಿದೆ.