ಭೋಪಾಲ್, ಜೂ. 29: ಮಧ್ಯ ಪ್ರದೇಶದ ಭೋಪಾಲ್ ನಗರದ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ (Giribala Singh) ಅವರ ನಿವಾಸಕ್ಕೆ ಕಳ್ಳರು ನುಗ್ಗಿ ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಕೆಲವು ಪ್ರಮುಖ ದಾಖಲೆಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದೆ. ಪ್ರಸ್ತುತ ಗಿರಿಬಾಲಾ ಸಿಂಗ್ ಮತ್ತು ಅವರ ಪುತ್ರ ಸಮರ್ಥ್ ಸಿಂಗ್ (Samarth Singh) ಟ್ವಿಶಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಈ ಕಳ್ಳತನ ನಡೆದಿದೆ.
ಜೂನ್ 27ರ ರಾತ್ರಿ ನಡೆದ ಈ ಘಟನೆಯಲ್ಲಿ, ಆರು ಮಂದಿ ಕಳ್ಳರು ಮನೆಯ ಹಿಂಭಾಗದಿಂದ ಒಳನುಗ್ಗಿದ್ದಾರೆ. ಅವರಲ್ಲಿ ನಾಲ್ವರು ಮೊದಲ ಮಹಡಿಗೆ ಪ್ರವೇಶಿಸಿ ಕಳವು ನಡೆಸಿದರೆ, ಇನ್ನಿಬ್ಬರು ಮನೆಯ ಹೊರಭಾಗದಲ್ಲಿ ಕಾವಲು ನಿಂತಿದ್ದರು ಎಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ.
ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೆಲವು ದಾಖಲೆಗಳನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ, ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡ ಅವರ ಚಲನವಲನವನ್ನು ಗಮನಿಸಿದೆ. ಪೊಲೀಸರು ಬೆನ್ನಟ್ಟಿದ ವೇಳೆ ಕಳ್ಳರು ಪ್ರತಿರೋಧ ತೋರಿಸಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಆತಂಕಗೊಂಡ ಕಳ್ಳರು ಕದ್ದ ವಸ್ತುಗಳಿದ್ದ ಬ್ಯಾಗ್‌ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಬೆನ್ನಟ್ಟಿದರೂ ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಗ್‌ನಿಂದ ಚಿನ್ನದ ಹಾರ, ಬೆಳ್ಳಿ ವಸ್ತುಗಳು, ಕೆಲವು ದಾಖಲೆಗಳು, ಬಟ್ಟೆಗಳು ಹಾಗೂ ಗುಲೇಲ್ ಸೇರಿ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ವೇಳೆ ಗಿರಿಬಾಲಾ ಸಿಂಗ್ ಅವರ ಸಹೋದರ ಹಾಗೂ ನಿವೃತ್ತ ಕರ್ನಲ್ ರಣವೀರ್ ಸಿಂಗ್ ಭದೋರಿಯಾ ಮನೆಯಲ್ಲಿ ಮಲಗಿದ್ದು, ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಮನೆಯಲ್ಲಿ ಇದೇ ವರ್ಷದ ಮೇ 12ರಂದು 33 ವರ್ಷದ ಟ್ವಿಶಾ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಉತ್ತರ ಪ್ರದೇಶದ ನೋಯ್ಡಾ ನಿವಾಸಿಯಾಗಿದ್ದು, 2025ರ ಡಿಸೆಂಬರ್‌ಲ್ಲಿ ಗಿರಿಬಾಲಾ ಸಿಂಗ್ ಅವರ ಪುತ್ರ ಸಮರ್ಥ್ ಸಿಂಗ್‌ನನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಟ್ವಿಶಾ ಅವರ ಪೋಷಕರು ಆರೋಪಿಸಿದ್ದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಹಾಗೂ ಅವರ ಪುತ್ರ ಸಮರ್ಥ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಇಬ್ಬರೂ ಪ್ರಸ್ತುತ ಭೋಪಾಲ್ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಟ್ವಿಶಾ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ನಡೆಸುತ್ತಿದೆ.
ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪರಾರಿಯಾಗಿರುವ ಕಳ್ಳರ ಗುರುತು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.