ರಾಯ್ಪುರ್: ದುರ್ಗ ಜಿಲ್ಲೆಯ ಭಿಲೈನಲ್ಲಿರುವ ಬಘೇಲ್ (Bhupesh Baghel) ನಿವಾಸದ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯ ನಂತರ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಾಘೇಲ್ ಅವರನ್ನು ಬಂಧಿಸಲಾಗಿದೆ. ಹಗರಣದ ಆದಾಯವನ್ನು ಪಡೆದವರಲ್ಲಿ ಚೈತನ್ಯ ಹೆಸರು ಕೂಡ ಕೇಳಿ ಬಂದಿತ್ತು. ನಂತರ ಅವರ ವಿರುದ್ಧ ಪ್ರಬಲ ಸಾಕ್ಷಿ ದೊರಕಿದೆ ಎಂದು ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಹೊಸ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ ಭಿಲಾಯಿ ಪಟ್ಟಣದಲ್ಲಿರುವ ಚೈತನ್ಯ ಬಘೇಲ್ ಅವರ ಮನೆಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇ.ಡಿ ಶೋಧ ನಡೆಸಿತ್ತು. ಛತ್ತೀಸ್‌ಗಢದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಶುಕ್ರವಾರ ಕೊನೆಯ ದಿನವಾಗಿದೆ. ಇದೇ ವೇಳೆ ಜಾರಿ ನಿರ್ದೇಶನಾಲಯ ಮಾಜಿ ಸಿಎಂ ಮನೆ ಮೇಲೆ ದಾಳಿ ನಡೆಸಿದ್ದು, 'ತನ್ನ ಭಿಲಾಯಿ ನಿವಾಸವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಲುಪಿದ್ದಾರೆ' ಎಂದು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.
ಈ ಸುದ್ದಿಯನ್ನೂ ಓದಿ: KY Nanjegowda: ಕಾಂಗ್ರೆಸ್ ಶಾಸಕ ನಂಜೇಗೌಡಗೆ ಇಡಿ ಶಾಕ್; 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಇಡಿ ವಿರುದ್ಧ ಹರಿಹಾಯ್ದ ಭೂಪೇಶ್ ತಮ್ಮ ಯಜಮಾನನನ್ನು ಮೆಚ್ಚಿಸಲು, ಮೋದಿ ಮತ್ತು ಶಾ ಅವರು ಇಡಿಯನ್ನು ನನ್ನ ಮನೆಗೆ ಕಳುಹಿಸಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ಇದು ತಮ್ಮ ಮಗನಿಗೆ ನೀಡಿದ 'ಹುಟ್ಟುಹಬ್ಬದ ಉಡುಗೊರೆ' ಎಂದು ಬೇಸರ ಹೊರಹಾಕಿದ್ದಾರೆ. ಈ ಹಿಂದೆ ಐದು ವರ್ಷಗಳ ಕಾಲ ಭೂಪೇಶ್ ಬಘೇಲ್ ಅವರು ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಬಹುಕೋಟಿ ರೂ. ಮೊತ್ತದ ಮದ್ಯ ಹಗರಣ ನಡೆದಿದೆ ಎನ್ನಲಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಭಾರಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಹಗರಣದಿಂದಾಗಿ ಮದ್ಯದ ಸಿಂಡಿಕೇಟ್‌ನ ಫಲಾನುಭವಿಗಳ ಜೇಬಿಗೆ ಬರೋಬ್ಬರಿ 2,100 ಕೋಟಿ ರೂ.ಗಳಿಗೂ ಆದಾಯ ಬಂದಿದೆ. ಇದು ಅಕ್ರಮ ಆದಾಯ ಎಂಬುದು ಜಾರಿ ನಿರ್ದೇಶನಾಲ ಹೇಳಿದೆ.