KY Nanjegowda: ಕಾಂಗ್ರೆಸ್ ಶಾಸಕ ನಂಜೇಗೌಡಗೆ ಇಡಿ ಶಾಕ್; 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ED: ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರಿಗೆ ಸೇರಿದ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿಕೊಂಡಿದೆ. 2023ರಲ್ಲಿ ನಡೆದ ಕೋಮುಲ್ ನೇಮಕಾತಿ ಹಗರಣ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮಾಲೂರು ಶಾಸಕ ಕೆ.ವೈ. ನಂಜೇಗೌಡ.

ಬೆಂಗಳೂರು: ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ (K.Y.Nanjegowda) ಅವರಿಗೆ ಜಾರಿ ನಿರ್ದೇಶನಾಲಯ (ED) ಶಾಕ್ ಕೊಟ್ಟಿದೆ. ಅವರ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಕೆ.ವೈ.ನಂಜೇಗೌಡ ಹಾಗೂ ಇತರರಿಗೆ ಸೇರಿದ ಒಟ್ಟು 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. 2023ರಲ್ಲಿ ನಡೆದ ಕೋಮುಲ್ ನೇಮಕಾತಿ ಹಗರಣ ಸಂಬಂಧ 1.32 ಕೋಟಿ ರೂ. ಮೌಲ್ಯದ ಸ್ಥಿರ-ಚರಾಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಇಡಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ʼʼ2023ರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ (KOMUL) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯ ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರ 1.32 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆʼʼ ಎಂದು ಎಕ್ಸ್‌ನಲ್ಲಿ ತಿಳಿಸಲಾಗಿದೆ.
ಇಡಿಯ ಎಕ್ಸ್ ಪೋಸ್ಟ್:
ED, Bengaluru Zonal Office has provisionally attached immovable and moveable properties of Malur Congress MLA K Y Nanjegowda and others worth Rs. 1.32 Crore (approx.) on 16.07.2025 in a money laundering case related to Kolar-Chikkaballapura District Co-operative Milk Producers’…
— ED (@dir_ed) July 17, 2025
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ 2023ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ಮತ್ತು ಪ್ರಭಾವ ಬಳಸಿಕೊಂಡು ಅವ್ಯವಹಾರ ಮಾಡಲಾಗಿದ್ದು, ಶಾಸಕ ಕೆ.ವೈ. ನಂಜೇಗೌಡ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜೇಗೌಡ ಅವರ ಮನೆ, ಕಚೇರಿ, ಸೇರಿದಂತೆ ಹಲವೆಡೆ ಇಡಿ ದಾಳಿ ನಡೆಸಿ, ಪರಿಶೀಲಿಸಿದ್ದು, ಮಹತ್ವದ ದಾಖಲೆ ವಶಪಡಿಸಿಕೊಂಡಿದೆ. ಕೋಮುಲ್ ನೇಮಕಾತಿಯಲ್ಲಿ ಹಗರಣದಲ್ಲಿ ಸುಮಾರು 75 ಅಭ್ಯರ್ಥಿಗಳಿಂದ ಹಣ ಪಡೆಯಲಾಗಿದೆ ಎನ್ನುವ ಬಗ್ಗೆಯೂ ದೂರು ಕೇಳಿ ಬಂದಿತ್ತು.
ಈ ಸುದ್ದಿಯನ್ನೂ ಓದಿ: Actress Ranya Rao Case: ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ರೇಗಾಡಿದ್ದ ನಂಜೇಗೌಡ
ಕೋಲಾರ: ಕೆಲವು ದಿನಗಳ ಹಿಂದೆ ನಂಜೇಗೌಡ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ರೇಗಾಡಿ ರಂಪ ಉಂಟು ಮಾಡಿದ್ದರು. ಕೋಲಾರ ನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೋಮುಲ್ ಚುನಾವಣೆ ವೇಳೆ ಮಾಲೂರು ಶಾಸಕ ಹಾಗೂ ಪೊಲೀಸರ ನಡುವೆ ಭಾರಿ ಹೈಡ್ರಾಮಾ ನಡೆದಿತ್ತು. ಈ ವೇಳೆ ಪೊಲೀಸರ ವಿರುದ್ಧ ನಂಜೇಗೌಡ ಅವರು ರೇಗಾಡಿದ್ದು, ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕೋಮುಲ್ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ನಂಜೇಗೌಡ, 3 ಬಸ್ಗಳಲ್ಲಿ ಮತದಾರರನ್ನು ಕರೆತಂದಿದ್ದರು. ಆದರೆ ಕಾಣೆಯಾಗಿರುವ ಮತದಾರರ ಬಗ್ಗೆ ಹೇಳಿಕೆ ಪಡೆಯಲು ಪೊಲೀಸರು ಮುಂದಾದಾಗ ಅವರನ್ನು ಶಾಸಕ ನಂಜೇಗೌಡ ತಡೆದಿದ್ದು, ʼʼನೀವು ಅವರೊಂದಿಗೆ ಏನೂ ಮಾತನಾಡುವುದು ಬೇಡ, ಯಾವ ಹೇಳಿಕೆಯನ್ನೂ ಪಡೆಯೋದು ಬೇಡʼʼ ಎಂದು ಹೇಳಿದ್ದರು..
ʼʼಶಾಸಕನ ಮೇಲೆಯೇ ನೀವು ರಾಜಕೀಯ ಮಾಡ್ತೀರಾ?ʼʼ ಎಂದು ಪೊಲೀಸರ ವಿರುದ್ಧ ಕಿಡಿಕಾರಿದ್ದರು. ಈ ವೇಳೆ ಪೊಲೀಸರು ನಿಮ್ಮ ಮುಂದೆಯೇ ಹೇಳಿಕೆ ದಾಖಲು ಮಾಡಿಕೊಳ್ಳುತ್ತೇವೆ ಎಂದರೂ ಶಾಸಕ, ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದರು. ಬೇತಮಂಗಲ ಪೊಲೀಸ್ ಠಾಣೆ ಸಿಪಿಐ ಮೇಲೆ ಶಾಸಕ ನಂಜೇಗೌಡ ರೇಗಾಡಿದ್ದು, ಕೋಲಾರ ಸರ್ಕಲ್ ಇನ್ಸ್‌ಪೆಕ್ಟರ್ ಸದಾನಂದ ಅವರಿಗೂ ʼʼನೀನು ಹೋಗುʼʼ ಎಂದು ಏಕವಚನದಲ್ಲಿ ಹೇಳಿದ್ದರು.