ಶ್ರೀನಗರ, ಜ. 31: ಉಗ್ರ ಧಮನಕ್ಕೆ ಆರಂಭಿಸಿರುವ ಆಪರೇಷನ್ ಟ್ರಾಶಿ-I (Operation Trashi-I) 14ನೇ ದಿನಕ್ಕೆ ಕಾಲಿಟ್ಟಿದ್ದು, ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಶನಿವಾರ (ಜನವರಿ 31) ಬೆಳಗ್ಗೆ 5.40ಕ್ಕೆ ಭಾರತೀಯ ಯೋಧರು ಉಗ್ರರ ಅಡುಗುತಾಣವನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದ್ದು, ಉಗ್ರರನ್ನು ಸುತ್ತುವರಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
2 ವಾರಗಳಿಂದ ಡೋಗ್ಲಾಮ್ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿದ ನಂತರ, ಪಾಕಿಸ್ತಾನ ಮೂಲದ ಕಮಾಂಡರ್‌ಗಳಾದ ಸೈಫುಲ್ಲಾ ಮತ್ತು ಆದಿಲ್ ಸೇರಿದಂತೆ ಅನೇಕ ಭಯೋತ್ಪಾದಕರು ಅಡಗಿಕೊಂಡಿರುವುದನ್ನು ಪತ್ತೆಹಚ್ಚಿದ ಭದ್ರತಾ ಪಡೆಗಳು ಎನ್‌ಕೌಂಟರ್ ಪ್ರಾರಂಭಿಸಿದವು.
ಮೊದಲು ದಾಳಿ ಆರಂಭಿಸಿದ ಉಗ್ರರು
ಭದ್ರತಾ ಪಡೆಗಳ ಮೇಲೆ ಮೊದಲು ಭಯೋತ್ಪಾದಕರು ದಾಳಿ ನಡೆಸುವ ಮೂಲಕ ಎನ್‌ಕೌಂಟರ್ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ತೀವ್ರ ಗುಂಡಿನ ಚಕಮಕಿ ಮುಂದುವರಿದಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಕನಿಷ್ಠ ಮೂವರು ಉಗ್ರರು ಅಡಗಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್:
ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವ ಉದ್ದೇಶದಿಂದ ಆಪರೇಷನ್ ಟ್ರಾಶಿ-I ಆರಂಭಿಸಲಾಗಿದೆ. ಜನವರಿ 18ರಿಂದ ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಟಿಯಾಗಿ ನಡೆಸುತ್ತಿರುವ ಈ ಕಾರ್ಯಾಚರಣೆ ಉಗ್ರರು ಅಡಗುತಾಣವನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದೆ.
"ಆಪರೇಷನ್ ಟ್ರಾಶಿ-Iರ ಭಾಗವಾಗಿ ಡೋಲ್ಗಾಮ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭಯೋತ್ಪಾದಕರ ಚಟುವಟಿಕೆಯ ಮಾಹಿತಿಗಳನ್ನು ಒದಗಿಸಲು ಗುಪ್ತಚರ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ" ಎಂದು ವೈಟ್ ನೈಟ್ ಕಾರ್ಪ್ಸ್‌ನ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಜಮ್ಮು ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್; ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಡಿಸೆಂಬರ್ 18ರಂದು, ಕಿಶ್ತ್ವಾರ್‌ನ ಚತ್ರೂ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಏಳು ಯೋಧರು ಗಾಯಗೊಂಡಿದ್ದರು. ಅಂದಿನಿಂದ ಬೃಹತ್ ಕಾರ್ಯಾಚರಣೆ ನಡೆಯುತ್ತಿದ್ದು, ಸೇನೆ ಮತ್ತು ಪೊಲೀಸರ ಹಿರಿಯ ಅಧಿಕಾರಿಗಳು ಈ ಪ್ರದೇಶದ ಕಡಿದಾದ ಮತ್ತು ಅಪಾಯಕಾರಿ ಪರ್ವತಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಾರ್ಯಾಚರಣೆಯ ಭಾಗವಾಗಿ ಡ್ರೋನ್, ಸ್ನಿಫರ್ ಡಾಗ್ ಮತ್ತು ಹೆಲಿಕಾಪ್ಟರ್‌ಗಳನ್ನು ಸಹ ನಿಯೋಜಿಸಲಾಗಿದೆ. ಈಗಾಗಲೇ6 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ನೈಸರ್ಗಿಕ ಗುಹೆಗಳೇ ಅಡಗುತಾಣ
ಸೈಫುಲ್ಲಾ ಮತ್ತು ಆದಿಲ್ 2 ವರ್ಷಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ನೈಸರ್ಗಿಕ ಗುಹೆಗಳು ಮತ್ತು ಬಂಕರ್‌ಗಳನ್ನು ಉಗ್ರರು ಅಡಗುತಾಣಗಳಾಗಿ ಬಳಸುತ್ತಿದ್ದಾರೆ. ಇತ್ತೀಚೆಗೆ ಸಿಂಗ್‌ಪೋರಾದಲ್ಲಿ ಭಯೋತ್ಪಾದಕ ಅಡಗುತಾಣವನ್ನು ಭೇದಿಸಲಾಗಿತ್ತು. ಅಲ್ಲಿ ಆಹಾರ ದಾಸ್ತಾನು ಕಂಡು ಬಂದಿದ್ದವು.
ಇನ್ನು ಜನವರಿ 23ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕನನ್ನು ಹೊಡೆದುರುಳಿಸಿತ್ತು. ಸತ್ತ ಭಯೋತ್ಪಾದಕನ್ನು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ, ಪಾಕಿಸ್ತಾನ ನಿವಾಸಿ ಉಸ್ಮಾನ್ ಎಂದು ಗುರುತಿಸಲಾಗಿದೆ. ಬಿಲ್ಲಾವರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಈ ಮಹತ್ವದ ಬೆಳವಣಿಗೆ ಸಂಭವಿಸಿತ್ತು.