ʼರಾಷ್ಟ್ರ ರಾಜಕಾರಣದ ಗಾಳಿ ಯಾವ ಕಡೆಗೆ ಬೀಸುತ್ತದೆ ಎಂಬುದನ್ನು ಎಲ್ಲರಿಗಿಂತ ಮೊದಲು ನಿತೀಶ್ ಕುಮಾರ್ ಅರ್ಥ ಮಾಡಿಕೊಳ್ಳುತ್ತಾರೆʼ ಎಂಬ ಮಾತಿದೆ. ಅದು ಬಹಳಷ್ಟು ಸಲ ನಿಜವಾಗಿದೆ. ದೇಶದಲ್ಲಿ ಯಾವ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಎಲ್ಲರಿಗಿಂತ ಮೊದಲು ಊಹಿಸಿ, ಆ ಒಕ್ಕೂಟದ ಜೊತೆಗೆ ಹೋಗುವ ನಿತೀಶ್ ಕುಮಾರ್ (Nitish kumar) ಅವರ ಚಾಣಾಕ್ಷತನ ಅವರಿಗೆ ಎಂದೂ ಕೈಕೊಟ್ಟಿಲ್ಲ. ಚಾಣಕ್ಯ ಎಂಬ ಬಿರುದು ಯಾರಿಗಾದರೂ ಸಲ್ಲುವುದಿದ್ದರೆ ಅದು ನಿತೀಶ್ ಅವರಿಗೆ. ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿಯೂ (Bihar Election 2025 Results) ಇದು ನಿಜವಾಗಿದೆ. ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿರುವ ನಿತೀಶ್‌ಗೆ ನಿರಾಶೆಯಾಗಿಲ್ಲ. ಇಪ್ಪತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನಿತೀಶ್, ಒಂಬತ್ತನೇ ಬಾರಿಗೆ ಸಿಎಂ ಗದ್ದುಗೆಯೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಬಿಹಾರವನ್ನು ಅತಿ ಹೆಚ್ಚು ಕಾಲ ಆಳಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪಕ್ಷ ಎಂದಿಗೂ ಸ್ವಂತವಾಗಿ ಸರಕಾರ ರಚಿಸುವಷ್ಟು ಬಹುಮತವನ್ನು ಅಲ್ಲಿ ಗಳಿಸಿಲ್ಲ. ಆದರೆ ತಮ್ಮ ರಾಜಕೀಯ ಕುಶಾಗ್ರಮತಿ, ಚಾಣಾಕ್ಷತನದಿಂದಾಗಿ ಅಧಿಕಾರದಲ್ಲಿರುವ ನಿತೀಶ್‌ಗೆ ಈಗ 74 ವರ್ಷ. ಆಗಾಗ ಮಿತ್ರಪಕ್ಷಗಳನ್ನು ಬದಲಾಯಿಸಿದ್ದಾರೆ. ಆದರೆ ಹೆಚ್ಚು ಕಾಲ ಬಿಜೆಪಿ ಜೊತೆಗೆ ಇದ್ದಾರೆ. ಗಾಳಿ ಯಾವ ಕಡೆಗೆ ಬೀಸುತ್ತದೋ ಆ ಕಡೆಗೆ ಹೋಗಬಲ್ಲ ನಿತೀಶ್, 2013ರಲ್ಲಿ ಲೋಕಸಭೆ ಚುನಾವಣೆಗೆ ಮೊದಲು, ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿಯಾಗುವುದನ್ನು ಆಕ್ಷೇಪಿಸಿ ಬಿಜೆಪಿ ಜೊತೆಗೆ ಸಂಬಂಧ ಕಡಿದುಕೊಂಡಿದ್ದರು. "ಮಿಟ್ಟಿ ಮೇ ಮಿಲ್ ಜಾಯೇಂಗೆ ಮಗರ್ ಬಿಜೆಪಿ ಕೆ ಸಾಥ್ ನಹೀಂ ಜಾಯೇಂಗೆ" (ಮಣ್ಣಲ್ಲಿ ಮಣ್ಣಾಗುತ್ತೇನೆ, ಆದರೆ ಬಿಜೆಪಿ ಜೊತೆಗೆ ಹೋಗುವುದಿಲ್ಲ) ಎಂದಿದ್ದರು. ಆದರೆ ಅದರ ಬಳಿಕ ಮೂರು ಬಾರಿ ಎನ್‌ಡಿಎ ಸೇರಿದ್ದಾರೆ. ಮೋದಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ.
ಬಿಹಾರದ ರಾಜಧಾನಿ ಪಟ್ನಾ ಸಮೀಪದ ಭಕ್ತಿಯಾರ್‌ಪುರದಲ್ಲಿ ಮಾರ್ಚ್ 1, 1951ರಲ್ಲಿ ನಿತೀಶ್ ಕುಮಾರ್ ಜನಿಸಿದರು. ಇವರ ತಂದೆ ಕವಿರಾಜ ಲಖನ್ ಸಿಂಗ್ ಮತ್ತು ತಾಯಿ ಪರಮೇಶ್ವರಿ ದೇವಿ. ಪಟ್ನಾದ ಬಿಹಾರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದ ನಿತೀಶ್, ಜಯಪ್ರಕಾಶ್ ನಾರಾಯಣರ ಅನುಯಾಯಿಯಾಗಿ 1974- 76ರ ಅವಧಿಯಲ್ಲಿ ನಡೆದ ಬಿಹಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿdರು. ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರದ ಮೀಸಾ ಕಾಯ್ದೆಯಡಿ ಬಂಧಿತರಾಗಿದ್ದರು. 1985ರಲ್ಲಿ ಪ್ರಥಮ ಬಾರಿ ಬಿಹಾರ ವಿಧಾನಸಭೆಗೆ ಆಯ್ಕೆಯಾದ ನಿತೀಶ್, 1987ರಲ್ಲಿ ಯುವ ಲೋಕದಳದ ಅಧ್ಯಕ್ಷರಾಗಿ ಆಯ್ಕೆಯಾದರು. 1989ರಲ್ಲಿ ಬಿಹಾರ ಜನತಾದಳದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್, ಅದೇ ವರ್ಷ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾದರು. 1990ರಲ್ಲಿ ಮೊದಲ ಬಾರಿ ಕೇಂದ್ರ ಮಂತ್ರಿಯಾಗಿ ಆಯ್ಕೆಯಾಗಿ ಕೃಷಿ ಮತ್ತು ಸಹಕಾರ ಖಾತೆಯನ್ನು ನಿರ್ವಹಿಸಿದರು.
1991ರಲ್ಲಿ 10ನೆ ಲೋಕಸಭೆಗೆ ಮರುಚುನಾಯಿತರಾದ ನಿತೀಶ್, ಜನತಾದಳದ ರಾಷ್ಟ್ರಮಟ್ಟದ ಕಾರ್ಯದರ್ಶಿ ಮತ್ತು ಲೋಕಸಭೆಯಲ್ಲಿ ಜನತಾದಳದ ಉಪ ನಾಯಕರಾದರು. 1995ರಲ್ಲಿ ಮಂಡಲ್ ಅಲೆ ಉತ್ತುಂಗದಲ್ಲಿದ್ದಾಗ ಜಾರ್ಜ್ ಫರ್ನಾಂಡಿಸ್ ಜೊತೆ ಸೇರಿಕೊಂಡ ನಿತೀಶ್ ಕುಮಾರ್, ಸಮತಾ ಪಕ್ಷವನ್ನು ಸ್ಥಾಪಿಸಿದರು. ಅದು ನಂತರ ಸಂಯುಕ್ತ ಜನತಾ ದಳವಾಗಿ ರೂಪಾಂತರಗೊಂಡು ಕೇಂದ್ರದಲ್ಲಿ ಮತ್ತು 2005ರಿಂದ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿತು. 1998- 2000ದ ಅವಧಿಯಲ್ಲಿ ಕೆಂದ್ರ ಮಂತ್ರಿಮಂಡಲದಲ್ಲಿ ರೈಲು, ರಸ್ತೆ ಸಾರಿಗೆ ಮತ್ತು ಕೃಷಿ ಖಾತೆಗಳನ್ನು ನಿರ್ವಹಿಸಿದರು. 2001ರಲ್ಲಿ ಕೇವಲ 7 ದಿನಗಳ ಕಾಲ ಬಿಹಾರದ ಮುಖ್ಯಮಂತ್ರಿಯಾದರು. ಅದೇ ವರ್ಷ ಮತ್ತೆ ಕೇಂದ್ರ ಸಂಪುಟ ಸೇರಿದ ನಿತೀಶ್, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಮಂತ್ರಿಮಂಡಲದಲ್ಲಿ 2001ರಿಂದ 2004ರ ವರೆಗೆ ಕೇಂದ್ರ ರೈಲು ಮಂತ್ರಿಯಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲು ಕಂಡರೂ, ನಿತೀಶ್ 6ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಸಂಸತ್ತಿನಲ್ಲಿ ಸಂಯುಕ್ತ ಜನತಾದಳದ ನಾಯಕರಾದರು. ನವೆಂಬರ್ 2005ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನೆಡೆಗೆ ಕೊಂಡೊಯ್ದು ಲಾಲೂ ಪ್ರಸಾದ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದ 15 ವರ್ಷದ ಆಡಳಿತವನ್ನು ಕೊನೆಗೊಳಿಸಲು ಕಾರಣಕರ್ತರಾದರು. ನವೆಂಬರ್ 24, 2005ರಂದು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: Nitish Kumar: ಐದು ಬಾರಿ ಬಿಹಾರವನ್ನಾಳಿದ ನಿತೀಶ್ ಕುಮಾರ್ ರಾಜಕೀಯ ಜೀವನ ಹೇಗಿದೆ? ನಡೆದು ಬಂದ ದಾರಿ ಗೊತ್ತಾ?
ಮುಖ್ಯಮಂತ್ರಿಯಾಗಿ ಅವರ ಮೊದಲ ಐದು ವರ್ಷಗಳು ಸುಧಾರಣೆಯ ಕಾಲವಾಗಿದ್ದವು. ಅದಕ್ಕೂ ಹಿಂದಿನ ಲಾಲು ಆಡಳಿತವನ್ನು ಜಂಗಲ್ ರಾಜ್ ಎಂದು ಕರೆಯಲಾಗಿತ್ತು. ಅದು ಕೊಲೆ ಸುಲಿಗೆ ಅಪಹರಣಗಳಿಗೆ ಕುಖ್ಯಾತವಾಗಿತ್ತು. ರಾಜ್ಯದಲ್ಲಿ ನಿತೀಶ್ ಕಾನೂನು ಮತ್ತು ಸುವ್ಯವಸ್ಥೆ ಪುನಃಸ್ಥಾಪನೆಗೆ ಕಾರಣರಾದರು. ಕುರ್ಮಿ ಸಮುದಾಯದ ನಾಯಕರಾದ ನಿತೀಶ್, ಯಾದವರನ್ನು ಹೊರತುಪಡಿಸಿ ಮೇಲ್ಜಾತಿಗಳು ಹಾಗೂ ಹಿಂದುಳಿದ ಸಮುದಾಯದವರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಸಫಲರಾದದ್ದು ಬಿಹಾರ ರಾಜಕೀಯದ ಒಂದು ಮೇಜರ್ ಬೆಳವಣಿಗೆ. ಹಿಂದುತ್ವ ರಾಜಕಾರಣದ ಜೊತೆಗೆ ಆಗಾಗ ಹೋದರೂ ಕಟು ಹಿಂದುತ್ವವಾದಿಯಾಗಲಿಲ್ಲ. ಹೀಗಾಗಿ ಎಲ್ಲ ಪಕ್ಷಗಳಲ್ಲಿಯೂ ಮಿತ್ರರನ್ನು ಹಾಗೂ ಎಲ್ಲ ಸಮುದಾಯಗಳ ಮತದಾರರನ್ನು ಕಾಯ್ದುಕೊಂಡರು.
2010ರ ನವೆಂಬರ್ 26ರಂದು ಮೂರನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಮೂರನೇ ಬಾರಿ ಸಿಎಂ ಆಗಿ ಪೂರ್ಣಾವಧಿ ಪೂರೈಸಲಿಲ್ಲ. 2013ರಲ್ಲಿ ಬಿಜೆಪಿಯೊಂದಿಗೆ ಬೇರ್ಪಟ್ಟ ನಂತರ, ಬಹುಮತಕ್ಕೆ ಕೆಲವೇ ಸದಸ್ಯರ ಕೊರತೆಯಿದ್ದ ಜೆಡಿ(ಯು)ಗೆ ಕಾಂಗ್ರೆಸ್ ಮತ್ತು ಸಿಪಿಐನಂತಹ ಪಕ್ಷಗಳಿಂದ ಹೊರಗಿನ ಬೆಂಬಲ ದೊರೆಯಿತು. ಜೊತೆಗೆ ಆರ್‌ಜೆಡಿಯ ಅತೃಪ್ತ ಬಣ ಸಹ ಬೆಂಬಲ ನೀಡಿತು. ಆದರೆ ಒಂದು ವರ್ಷದ ನಂತರ, ಲೋಕಸಭಾ ಚುನಾವಣೆಯಲ್ಲಿ ಜೆಡಿ(ಯು) ಸೋಲಿನ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದರು. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಅವರು ಬಂಡಾಯವೆದ್ದ ಜೇತನ್ ರಾಮ್ ಮಾಂಝಿ ಅವರನ್ನು ಸೋಲಿಸಿ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ವಹಿಸಿಕೊಂಡರು. ಈ ಬಾರಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ನಿಂದ ಸಾಕಷ್ಟು ಬೆಂಬಲ ಪಡೆದರು.
ಜೆಡಿಯು, ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆಯಾಗಿ ಅಸ್ತಿತ್ವಕ್ಕೆ ಬಂದ ಮಹಾಮೈತ್ರಿಕೂಟ 2015ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ 2015ರ ನವೆಂಬರ್ 20ರಂದು ಅಧಿಕಾರಕ್ಕೇರಿದರು. ಉಪ ಮುಖ್ಯಮಂತ್ರಿಯಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದರು. ಆದರೆ ಕೇವಲ ಎರಡು ವರ್ಷಗಳಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಭ್ರಷ್ಟಾಚಾರದ ಕಳಂಕದ ವಿರುದ್ಧ ನಿತೀಶ್ ನಿಲುವು ತೆಗೆದುಕೊಂಡರು. ಆರ್‌ಜೆಡಿಯಿಂದ ಬೇರ್ಪಟ್ಟು 2017ರಲ್ಲಿ ಎನ್‌ಡಿಎಗೆ ಮರಳಿದರು. 2020ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿದ್ದರು.
ಇದನ್ನೂ ಓದಿ: Bihar Election Result 2025: ಎನ್‌ಡಿಎ ಭಾರೀ ಮುನ್ನಡೆ; JDU ಕಮಾಲ್, ನಿತೀಶ್ ಸಿಎಂ ಆಗೋದು ಫಿಕ್ಸ್!
ಐದು ವರ್ಷಗಳ ನಂತರ ಅವರು ಮತ್ತೆ ಬಿಜೆಪಿಯ ಬಗ್ಗೆ ಭ್ರಮನಿರಸನಗೊಂಡರು. 2020ರ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ತಮ್ಮ ಲೋಕ ಜನಶಕ್ತಿ ಪಕ್ಷದ ಟಿಕೆಟ್‌ಗಳಲ್ಲಿ ಅನೇಕ ಬಿಜೆಪಿ ಬಂಡುಕೋರರನ್ನು ಕಣಕ್ಕಿಳಿಸಿದಾಗ ಜೆಡಿಯು ಸೋಲಿಗೆ ಬಿಜೆಪಿಯೇ ಕಾರಣ ಎಂದು ದೂಷಿಸಿದರು. ಆಗಸ್ಟ್ 2022ರ ಹೊತ್ತಿಗೆ ಅವರು ಮಹಾಘಟಬಂಧನ್‌ಗೆ ಮರಳಿದರು. ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಮತ್ತೆ ಸರಕಾರ ರಚಿಸಿದರು.
2024ರಲ್ಲಿ ಮತ್ತೆ ಬದಲಾಗಿರುವ ರಾಜಕೀಯ ಗಾಳಿಯನ್ನು ಅರ್ಥ ಮಾಡಿಕೊಂಡ ನಿತೀಶ್ ಕುಮಾರ್, ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು, ತಾನು ಈ ಅವಧಿಯ್ಲಿ ಟೀಕಿಸುತ್ತಿದ್ದ ಮೋದಿ ಜೊತೆಗೇ ಮತ್ತೆ ಹೋದರು. ಈ ಸಂದರ್ಭದಲ್ಲಿ ಅವರು ಬಿಜೆಪಿ ಜೊತೆಗೆ ಹೆಚ್ಚಿನ ಸೀಟುಗಳನ್ನು ಹಂಚಿಕೊಳ್ಳಬೇಕಾಯಿತು. 2025ರ ಮಾರ್ಚ್‌ನಲ್ಲಿ ಒಂಬತ್ತನೇ ಬಾರಿಗೆ ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು ನಿತೀಶ್. ಇದೀಗ 2025ರ ಚುನಾವಣೆಯಲ್ಲಿ ಎನ್‌ಡಿಎಯನ್ನು ಮತ್ತೆ ಬಹುಮತದತ್ತ ಕರೆದೊಯ್ದಿದ್ದಾರೆ. ಬಿಜೆಪಿಯ ಜೊತೆಗೆ ಸಮಾನ ಕ್ಷೇತ್ರಗಳನ್ನು ಹಂಚಿಕೊಂಡಿರುವ ನಿತೀಶ್, ಸಿಎಂ ಸ್ಥಾನವನ್ನು ಬಿಟ್ಟುಕೊಡುವ ಯಾವುದೇ ಇರಾದೆ ಹೊಂದಿಲ್ಲ ಎಂಬುದು ಖಚಿತ.
ನಿತೀಶ್ ಕುಮಾರ್ ಅವರ ಆಡಳಿತದ ಬಗ್ಗೆ ಆಡಳಿತ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಮಹಿಳಾ ಮತದಾರರು ಈ ಬಾರಿ ಜೆಡಿಯು ಕೈ ಹಿಡಿದಿದ್ದಾರೆ. ಮಹಿಳಾ ಪರವಾದ ಅನೇಕ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಅವರು ಮಹಿಳೆಯರ ಮತಗಳನ್ನು ಸೆಳೆದುಕೊಂಡಿದ್ದಾರೆ. ಜೊತೆಗೆ ಬಿಜೆಪಿ ಮೇಲ್ವರ್ಗದ ಹಾಗೂ ಜೆನ್ ಝಿ ಮತಗಳನ್ನು ಸೆಳೆದಿದೆ. ಹೀಗಾಗಿ ಆಡಳಿತ ವಿರೋಧಿ ಅಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನಬಹುದು.