ಪಟನಾ: ಬಿಹಾರದ ಚುನಾವಣೆಯ ಫಲಿತಾಂಶ (Bihar Election Result 2025) ಇಂದು ಹೊರ ಬೀಳಲಿದ್ದು, ಅಂಚೆ ಮತ ಎಣಿಕೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟ ಭಾರೀ ಮುನ್ನಡೆಯನ್ನು ಸಾಧಿಸಿದೆ. ಚುನಾವಣಾ ಪೂರ್ವ ಸಮೀಕ್ಷೆಯು ಎನ್‌ಡಿಎ ಗೆಲುವನ್ನು ಸೂಚಿಸಿದ್ದವು. ಆರಂಭಿಕ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 122 ಸ್ಥಾನಗಳಲ್ಲಿ ಮುಂದಿದ್ದರೆ, ಮಹಾಘಟಬಂಧನ 82 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ (Tejaswi Yadav) ಅವರು ರಾಘೋಪುರ ವಿಧಾನಸಭೆಯಲ್ಲಿ ಮುನ್ನಡೆಯಲ್ಲಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಟಿಕೆಟ್‌ನಲ್ಲಿ ಚುನಾವಣಾ ಕಣಕ್ಕಿಳಿದಿರುವ ಗಾಯಕಿ ಮೈಥಿಲಿ ಠಾಕೂರ್ ಅವರು ಅಲಿನಗರದಲ್ಲಿ ಮುನ್ನಡೆಯಲ್ಲಿದ್ದಾರೆ.
ಎಕ್ಸಿಟ್‌ಪೋಲ್ ಹೇಳಿದ್ದೇನು?
ನವೆಂಬರ್ 6 ಮತ್ತು 11 ರಂದು ನಡೆದ 243 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯವು ಐತಿಹಾಸಿಕವಾಗಿ ಶೇ. 67.13 ರಷ್ಟು ಮತದಾನ ಮಾಡಿದೆ. ಬಹುತೇಕ ಎಕ್ಸಿಟ್ ಪೋಲ್‌ಗಳು ಜೆಡಿಯು ಸಹ ಸೇರಿರುವ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ಭವಿಷ್ಯ ನುಡಿದಿವೆ. ತೇಜಸ್ವಿ ಯಾದವ್ ಈ ಭವಿಷ್ಯವಾಣಿಗಳನ್ನು ತಳ್ಳಿಹಾಕಿ ಮಹಾಘಟಬಂಧನ್ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Bihar Election Results 2025 LIVE: ಬಿಹಾರ ಚುನಾವಣೆ ಮತ ಎಣಿಕೆ ಫಲಿತಾಂಶ: ಕ್ಷಣಕ್ಷಣದ ಸುದ್ದಿ
ಎನ್‌ಡಿಎ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಅಧಿಕಾರಕ್ಕೆ ಬರುವ ಸೂಚನೆ ನೀಡಿವೆ. ಅದಾಗ್ಯೂ ವಿಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ ತೀವ್ರ ಪೈಪೋಟಿ ಒಡ್ಡಲಿದೆ ಎಂದು ತಿಳಿಸಿದೆ. ಎನ್‌ಡಿಎಗೆ ಗರಿಷ್ಠ 167 ತನಕ ಸೀಟ್ ಸಿಗುವ ಸಾಧ್ಯತೆ ಇದೆ. ಬಿಹಾರದಲ್ಲಿ ಸರಳ ಬಹುಮತಕ್ಕೆ 122 ಸೀಟ್ ಅಗತ್ಯವಾಗಿದ್ದು, 2020ರಲ್ಲಿ ಎನ್‌ಡಿಎ 125 ಕಡೆಗಳಲ್ಲಿ ಜಯಗಳಿಸಿತ್ತು. ಈ ಬಾರಿ ಭಾರಿ ನಿರೀಕ್ಷೆಯೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿ ಯಾವುದೇ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
2020 ರ ಚುನಾವಣೆಯಲ್ಲಿ, NDA ವಿಧಾನಸಭೆಯಲ್ಲಿ ಬಹುಮತ ಗಳಿಸಿತು. 125 ಸ್ಥಾನಗಳನ್ನು ಗೆದ್ದಿತು, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದಾಗ್ಯೂ, ಆಗಸ್ಟ್ 2022 ರಲ್ಲಿ, ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ RJD-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಜೊತೆ ಸರ್ಕಾರ ರಚಿಸಿದ್ದರು.