ನವದೆಹಲಿ, ಮಾ. 10: ಭಾರತ ರತ್ನ (Bharat Ratna) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ನಿಂತಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಕುಳಿತಿದ್ದರು ಎಂದು ಆರೋಪಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಬಿಜೆಪಿ ತೀವ್ರವಾಗಿ ತಿರುಗೇಟು ನೀಡಿದೆ. ತೃಣಮೂಲ ಕಾಂಗ್ರೆಸ್ (Trinamool Congress) ಸುಳ್ಳು ಸುದ್ದಿಗಳನ್ನು ಹರಡುವ ಕಾರ್ಖಾನೆಯಾಗಿದ್ದು, ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ರಾಷ್ಟ್ರಪತಿ ಕಚೇರಿಯ ಘನತೆಗೆ ಧಕ್ಕೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. 2024ರ ಮಾರ್ಚ್‌ನಲ್ಲಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಾಗ ಅಧಿಕೃತ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು ಮತ್ತು ಆ ಗೌರವದ ಕ್ಷಣವನ್ನು ಟಿಎಂಸಿ ಉದ್ದೇಶಪೂರ್ವಕವಾಗಿ ತಿರುಚುತ್ತಿದೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಪ್ರಧಾನಿ ಮೋದಿ ಬುಡಕಟ್ಟು ಸಮುದಾಯದ ನಾಯಕಿಯನ್ನು ಮತ್ತು ಭಾರತದ ಸಂವಿಧಾನವನ್ನು ಗೌರವಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. ಇತ್ತೀಚೆಗೆ ಉತ್ತರ ಬಂಗಾಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ್ದರು. ಅಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದ ಅವ್ಯವಸ್ಥೆಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ಕಾರ್ಯಕ್ರಮದ ಸ್ಥಳ ಬದಲಾವಣೆ ಮತ್ತು ಮುಖ್ಯಮಂತ್ರಿ ಹಾಗೂ ಸಚಿವರ ಅನುಪಸ್ಥಿತಿಯ ಬಗ್ಗೆ ರಾಷ್ಟ್ರಪತಿ ಮುರ್ಮು ಸ್ವತಃ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮತಾ, ಅದು ಖಾಸಗಿ ಆಯೋಜಕರು ನಡೆಸಿದ ಕಾರ್ಯಕ್ರಮವಾಗಿದ್ದು ರಾಜ್ಯ ಸರ್ಕಾರದ ನೇರ ಆಯೋಜನೆಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯ ಪೋಸ್ಟ್:
ಈ ಪ್ರೋಟೋಕಾಲ್ ಉಲ್ಲಂಘನೆಯನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸಮಗ್ರ ವರದಿ ಕೇಳಿದೆ. ರಾಷ್ಟ್ರಪತಿಯ ಆಗಮನದ ವೇಳೆ ಮುಖ್ಯಮಂತ್ರಿ ಅಥವಾ ಹಿರಿಯ ಅಧಿಕಾರಿಗಳು ಹಾಜರಿಲ್ಲದಿರುವುದು 'ಬ್ಲೂ ಬುಕ್' ನಿಯಮಗಳ ಉಲ್ಲಂಘನೆಯೇ ಎಂಬ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ವಿವರಣೆ ಕೋರಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಬೆಳವಣಿಗೆಯನ್ನು ದುರದೃಷ್ಟಕರ ಎಂದು ಕರೆದಿದ್ದಾರೆ.
ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್
ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಈ ವಿವಾದವು ಬಿಜೆಪಿ ಮತ್ತು ಟಿಎಂಸಿ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ರಾಷ್ಟ್ರಪತಿಯ ಭೇಟಿಯ ಸಮಯದ ಭದ್ರತಾ ಶಿಷ್ಟಾಚಾರಗಳ ಬಗ್ಗೆ ಈಗ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.