ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼತಂದೆ ಯಾರೆಂದು ತಾಯಿ ಬಳಿ ಕೇಳಿʼʼ: ತಮಿಳುನಾಡು ಸಿಎಂ ವಿಜಯ್‌ ಟೀಕಿಸುವ ಭರದಲ್ಲಿ ನಾಲಗೆ ಹರಿಯಬಿಟ್ಟ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

CM Vijay: ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ವಿವಾದ ಮೈಮೇಲೆ ಎಳದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಟೀಕಿಸುವ ವೇಳೆ ತಾಯಿಯ ಬಗ್ಗೆ ವೈಯಕ್ತಿಕ ಹೇಳಿಕೆ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸೇರಿ ಹಲವು ನಾಯಕರು ಹೇಳಿಕೆಯನ್ನು ಖಂಡಿಸಿ, ರಾಜಕೀಯದಲ್ಲಿ ಸಭ್ಯತೆ ಕಾಪಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ವಿಜಯ್ (ಸಂಗ್ರಹ ಚಿತ್ರ)

ಚೆನ್ನೈ, ಆ. 15: ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ (Nainar Nagenthran) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Joseph Vijay) ಅವರನ್ನು ಟೀಕಿಸುವ ವೇಳೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಚೆನ್ನೈಯ ಬಿಜೆಪಿ ರಾಜ್ಯ ಕಚೇರಿ ಕಮಲಾಲಯಂನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗೇಂದ್ರನ್, ʼʼವಿಜಯ್ ವಿಧಾನಸಭೆಯಲ್ಲಿ ‘ತಂದೆ ಎಲ್ಲಿದ್ದಾರೆ?’ ಎಂಬ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ಉತ್ತರ ಸಿಗುವುದಿಲ್ಲ. ತಂದೆ ಎಲ್ಲಿದ್ದಾರೆ ಎಂದು ತಿಳಿಯಬೇಕಾದರೆ ವಿಧಾನಸಭೆಯಲ್ಲಿ ಹುಡುಕಬೇಡಿ, ಮನೆಗೆ ಹೋಗಿ ತಾಯಿಯನ್ನು ಕೇಳಿ” ಎಂದು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ವಿಜಯ್ ಈ ಹಿಂದೆ ವಿಧಾನಸಭೆಯಲ್ಲಿ ‘ಕುಟ್ಟಿ ಕಥೆ’ (ಚಿಕ್ಕ ಕಥೆ) ಹೇಳುವ ಮೂಲಕ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡಿದ್ದರು. 2026ರ ಏಪ್ರಿಲ್ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲಿನ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ವಿಶೇಷವಾಗಿ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಸೋತಿರುವುದನ್ನು ಉಲ್ಲೇಖಿಸಿ ವಿಜಯ್ ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಸ್ಟಾಲಿನ್, ತಾವು ವಿಧಾನಸಭೆಯಲ್ಲಿಲ್ಲದಿದ್ದರೂ ಜನರ ಹೃದಯದಲ್ಲಿದ್ದೇನೆ ಎಂದು ತಿರುಗೇಟು ನೀಡಿದ್ದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ವಿವಾದಾತ್ಮಕ ಹೇಳಿಕೆ:



ನಾಗೇಂದ್ರನ್ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ವಿರೋಧ

ನಾಗೇಂದ್ರನ್ ಅವರ ಹೇಳಿಕೆಗೆ ಸಚಿವ ಎ. ರಾಜಮೋಹನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅದನ್ನು ಅಸಭ್ಯ ಮತ್ತು ಸೂಕ್ತವಲ್ಲದ ಹೇಳಿಕೆ ಎಂದು ಟೀಕಿಸಿದ್ದಾರೆ. ರಾಜಕೀಯ ಪ್ರಚೋದನೆಗಳು ಅಥವಾ ವೈಯಕ್ತಿಕ ಟೀಕೆಗಳ ನಡುವೆಯೂ ವಿಜಯ್ ತಮ್ಮ ಸಹೋದ್ಯೋಗಿಗಳು ರಾಜಕೀಯ ಸಭ್ಯತೆ ಕಾಪಾಡಿಕೊಳ್ಳಬೇಕು ಎಂದು ನಿರಂತರವಾಗಿ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ನಾಗೇಂದ್ರನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವುದು ಮತ್ತು ರಾಜಕೀಯ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಭಾಗವಾದರೂ, ನಾಯಕರ ಕುಟುಂಬದ ಬಗ್ಗೆ, ಅದರಲ್ಲೂ ತಾಯಿಯ ಕುರಿತು ವೈಯಕ್ತಿಕ ದಾಳಿ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಇಂತಹ ಹೇಳಿಕೆಗಳು ರಾಜಕೀಯ ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿದ್ದು, ಹಿಂದುಳಿದ ಹಾಗೂ ತೃತೀಯ ದರ್ಜೆಯ ರಾಜಕೀಯ ಎಂದು ಅಣ್ಣಾಮಲೈ ಟೀಕಿಸಿದ್ದಾರೆ. ಇಂತಹ ರಾಜಕೀಯ ಸಂಸ್ಕೃತಿಯನ್ನು ಯುವ ಪೀಳಿಗೆಯಲ್ಲಿ ಬೆಳೆಸಬಾರದು ಎಂದೂ ಅವರು ಹೇಳಿದ್ದಾರೆ.