ಕೋಲ್ಕತಾ, ಸೆ. 7: ಪಶ್ಚಿಮ ಬಂಗಾಳ ಸರ್ಕಾರವು (West Bengal government) ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ಪ್ರಕಟಿಸಿದ ಸಾಂಪ್ರದಾಯಿಕ ಹತ್ತು ಕೈಗಳ ಬದಲಿಗೆ ಹನ್ನೊಂದು ಕೈಗಳನ್ನು ಹೊಂದಿರುವ ದುರ್ಗಾ ದೇವಿಯನ್ನು (Durga Puja 2026) ಚಿತ್ರಿಸುವ ಜಾಹೀರಾತು ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಬಿಜೆಪಿಯು ಹಿಂದೂ ಧರ್ಮಗ್ರಂಥಗಳನ್ನು ಅಪಹಾಸ್ಯ ಮಾಡುತ್ತಿದೆ ಎಂದು ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಆರೋಪಿಸಿವೆ. ಹಿಂದೂ ಪವಿತ್ರ ಗ್ರಂಥಗಳ ಪ್ರಕಾರ, ದುರ್ಗಾ ದೇವಿಗೆ ಹತ್ತು ತೋಳುಗಳಿದ್ದು, ದಶಭುಜ ರೂಪದಲ್ಲಿ ಪೂಜಿಸಲಾಗುತ್ತದೆ. ಆದರೆ ಮಿಲನ್ ಮೇಳದಲ್ಲಿ ಹಮ್ಮಿಕೊಳ್ಳಲಾಗಿರುವ 2026ರ ದುರ್ಗಾಪೂಜೆಗೆ ಸಂಬಂಧಿಸಿದ ಸರ್ಕಾರದ ಅಧಿಕೃತ ಜಾಹೀರಾತಿನಲ್ಲಿ ದೇವಿಯನ್ನು ಹನ್ನೊಂದು ತೋಳುಗಳೊಂದಿಗೆ ತೋರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಂಗಾಳ ಮುಖ್ಯಮಂತ್ರಿ ಸುವೇಂದು ಅದಿಕಾರಿ ಭಾಗವಹಿಸುವ ನಿರೀಕ್ಷೆಯಿದ್ದು, ಜಾಹೀರಾತಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
ಪುರಾಣಗಳಿಗೆ ಹೊಂದಿಕೆಯಾಗದ ದೇವಿಯ ಹೆಚ್ಚುವರಿ ತೋಳು ಮತ್ತು ಆಯುಧದ ಈ ಚಿತ್ರಣವು ತೀವ್ರ ವಿವಾದವನ್ನು ಹುಟ್ಟುಹಾಕಿದ್ದು, ರಾಜಕೀಯ ಪಕ್ಷಗಳು ಈ ಜಾಹೀರಾತಿನ ಹಿಂದಿನ ಬಿಜೆಪಿಯ ಉದ್ದೇಶಗಳನ್ನು ಪ್ರಶ್ನಿಸಿವೆ. ತೃಣಮೂಲ ಕಾಂಗ್ರೆಸ್ (TMC) ಶಾಸಕ ಕುನಾಲ್ ಘೋಷ್ ಈ ಜಾಹೀರಾತಿನ ಕುರಿತು ತೀವ್ರ ವ್ಯಂಗ್ಯಭರಿತ ಕಾಮೆಂಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಶಾಸಕ ಕುನಾಲ್ ಘೋಷ್ ಅವರ ಎಕ್ಸ್ ಪೋಸ್ಟ್:
“ಯಾವುದೇ ಹೊಸ ಥೀಮ್‌ಗಳಿಗೆ ಅವಕಾಶವಿಲ್ಲ, ಸಾಂಪ್ರದಾಯಿಕ ಚಿತ್ರಣವನ್ನು ವಿಕೃತಗೊಳಿಸಲು ಅನುಮತಿಯಿಲ್ಲ ಎಂದು ಹೇಳುತ್ತಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ನಾನು ನೋಡಿದ್ದೇನೆ. ಹೀಗಿರುವಾಗ, ಸರ್ಕಾರಿ ಜಾಹೀರಾತಿನಲ್ಲಿ ದುರ್ಗಾ ಮಾತೆಗೆ 11 ತೋಳುಗಳು ಬಂದಿದ್ದು ಹೇಗೆ? ಯಾವ ಗ್ರಂಥದ ಆಧಾರದ ಮೇಲೆ ದಶಭುಜೆಯು (ಹತ್ತು ತೋಳುಗಳ ದೇವಿ) ಏಕಾದಶ-ಭುಜೆಯಾಗಿ (ಹನ್ನೊಂದು ತೋಳುಗಳ ದೇವಿ) ರೂಪಾಂತರಗೊಂಡಿದ್ದಾಳೆ?” ಎಂದು ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.
ಕಠಿಣ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಜತೆ ಇದ್ದರು: ಮಹುವಾ ಮೊಯಿತ್ರಾ
ಶಾಸ್ತ್ರೋಕ್ತ ಸಂಪ್ರದಾಯಗಳ ಉಲ್ಲಂಘನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿವೆ. ಇನ್ನು ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, “ಮಾತೆ ದುರ್ಗಾದೇವಿಯು ಈಗ ಇನ್ನಷ್ಟು ಶಕ್ತಿಶಾಲಿಯಾಗಿದ್ದಾಳೆ. ನಾನು ಇನ್ನೂ ಜಾಹೀರಾತನ್ನು ನೋಡಿಲ್ಲ. ಏಜೆನ್ಸಿಯೊಂದು ತಪ್ಪು ಮಾಡಿದ್ದು, ಇದನ್ನು ರಾಜಕಾರಣಗೊಳಿಸುವುದು ಸರಿಯಲ್ಲ. ತಪ್ಪನ್ನು ಸರಿಪಡಿಸಲಾಗುವುದು” ಎಂದು ತಿಳಿಸಿದ್ದಾರೆ.
“ಅದ್ಭುತವಾದ ಸರ್ಕಾರಿ ಜಾಹೀರಾತು! ಇಲ್ಲಿ, ದುರ್ಗಾ ಮಾತೆಗೆ ಹನ್ನೊಂದು ತೋಳುಗಳಿವೆ. ದೇವರು ಅಸುರನನ್ನು ಕೊಲ್ಲಲು ದುರ್ಗಾಗೆ ಹತ್ತು ಕೈಗಳಲ್ಲಿ ಆಯುಧಗಳನ್ನು ದಯಪಾಲಿಸಿದ್ದರು. ಈ ಮಧ್ಯೆ, ಬಿಜೆಪಿ ಸರ್ಕಾರವು ದೇವತೆಗೆ ಹೆಚ್ಚುವರಿ ತೋಳನ್ನು ಉಡುಗೊರೆಯಾಗಿ ನೀಡಿದೆ” ಎಂದು ಸಿಪಿಎಂ ನಾಯಕ ಶತರೂಪ್ ಘೋಷ್ ಟೀಕಿಸಿದ್ದಾರೆ.