ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಸ್ಮರಣೀಯವಾಗಿಸಲು ಬಿಜೆಪಿ ಯೋಜನೆ; 1 ತಿಂಗಳ ಜನಸಂಪರ್ಕ ಯಾತ್ರೆಗೆ ಸಿದ್ಧತೆ

BJP Plans Outreach Yatra: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ದೇಶಾದ್ಯಂತ ಜನಸಂಪರ್ಕ ಯಾತ್ರೆ ನಡೆಸಲು ಬಿಜೆಪಿ ಮುಂದಾಗಿದೆ. ಗುಜರಾತ್‌ನ ವಡ್ನಗರದಿಂದ ಉತ್ತರ ಪ್ರದೇಶದ ವಾರಣಾಸಿ ತನಕ ನಡೆಯುವ ಈ ಯಾತ್ರೆ ಪ್ರಧಾನಿ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಪ್ರಾರಂಭವಾಗುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಗಾಂಧಿನಗರ, ಸೆ. 1: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಜನ್ಮದಿನದಂದು ದೇಶಾದ್ಯಂತ ಜನಸಂಪರ್ಕ ಯಾತ್ರೆ ನಡೆಸಲು ಬಿಜೆಪಿ (BJP) ಯೋಜನೆ ರೂಪಿಸಿದೆ. ಮೋದಿ ಅವರ ಜನ್ಮಸ್ಥಳವಾದ ಗುಜರಾತ್‌ನ ವಡ್ನಗರದಿಂದ ಅವರ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿವರೆಗೆ ಮಹತ್ವಾಕಾಂಕ್ಷೆಯ ಒಂದು ತಿಂಗಳ ಅಭಿಯಾನವನ್ನು ಪ್ರಾರಂಭಿಸಲು ಬಿಜೆಪಿ ಯೋಜನೆ ರೂಪಿಸಿದೆ.

ವಡ್ನಗರ ಟು ವಾರಣಸಿ ಯಾತ್ರೆ (Vadnagar To Varanasi Yatra) ಎಂದು ಹೆಸರಿಸಲಾದ ಈ ಅಭಿಯಾನವು ಪ್ರಧಾನಿ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಪಕ್ಷದ ಆಡಳಿತದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ಬಿಜೆಪಿಯ ಒಂದು ಪ್ರಮುಖ ಸಾಂಸ್ಥಿಕ ಕಾರ್ಯಕ್ರಮವಾಗಿ ಬಿಂಬಿಸಲಾಗುವುದು ಎನ್ನಲಾಗಿದೆ.

ಅಂದಹಾಗೆ, ವಡ್ನಗರ ಮತ್ತು ವಾರಣಾಸಿ ಎರಡೂ ಕಡೆಯಿಂದಲೂ ಒಂದೇ ದಿನ ಹತ್ತು ತಂಡಗಳು ಪ್ರಯಾಣ ಬೆಳೆಸಲಿವೆ. ವಾರಣಾಸಿಯಿಂದ ಹೊರಡುವ ತಂಡಗಳು ವಿವಿಧ ರಾಜ್ಯಗಳ ಮೂಲಕ ಪ್ರಯಾಣಿಸಿ ಕೊನೆಗೆ ವಡ್ನಗರ ತಲುಪಲಿದೆ. ಹಾಗೆಯೇ ವಡ್ನಗರದಿಂದ ಹೊರಡುವ ತಂಡಗಳು ಒಂದು ತಿಂಗಳ ಪ್ರಯಾಣದ ಕೊನೆಯಲ್ಲಿ ವಾರಣಾಸಿ ತಲುಪಲಿವೆ.

"ವಿದೇಶ ಪ್ರಯಾಣ ಬೇಡ, ಚಿನ್ನ ಖರೀದಿ ಮಾಡಬೇಡಿ"; GDP ಏರಿದರೂ ಸ್ವದೇಶಿ ಮಂತ್ರ ಪಠಿಸಿದ ಮೋದಿ

ಈ ತಂಡಗಳು ಪ್ರತಿದಿನ ಸುಮಾರು 100 ಕಿ.ಮೀ. ಪ್ರಯಾಣಿಸಲಿವೆ ಎಂದು ಹೇಳಲಾಗಿದೆ. ಈ ಯಾತ್ರೆಯಲ್ಲಿ ಬೈಕ್‌, ಬಸ್‌ ಮುಂತಾದ ವಾಹನಗಳ ಜತೆಗೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಯಾತ್ರೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಜನಪರ ಯೋಜನೆಗಳ ಮಾಹಿತಿ ನೀಡಿ ಸಾರ್ವಜನಿಕರೊಂದಿಗೆ ಸಂವಹನ ನಡೆಸಲಿದೆ.

ಮೂಲಗಳ ಪ್ರಕಾರ, ಪ್ರತಿ ತಂಡ 10ಕ್ಕೂ ಹೆಚ್ಚು ಬೈಕ್ ಸವಾರರನ್ನು ಒಳಗೊಂಡಿರುತ್ತದೆ. ಜತೆಗೆ ಬಿಜೆಪಿ ಕಾರ್ಯಕರ್ತರು ಪಟ್ಟಣಗಳು, ಹಳ್ಳಿಗಳು ಮತ್ತು ಜಿಲ್ಲೆಗಳ ಮೂಲಕ ಪ್ರಯಾಣಿಸುತ್ತಾರೆ. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ದೈನಂದಿನ ಸಾರ್ವಜನಿಕ ಸಂಪರ್ಕ. ಪ್ರತಿದಿನ ಸುಮಾರು 100 ಕಿ.ಮೀ. ಕ್ರಮಿಸಿದ ನಂತರ, ಬಿಜೆಪಿ ಕಾರ್ಯಕರ್ತರು ನಿಗದಿಪಡಿಸಿದ ಸ್ಥಳಗಳಲ್ಲಿ ಉಳಿಯುತ್ತಾರೆ. ಈ ವೇಳೆ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಲಿದ್ದಾರೆ.

ಈ ಯಾತ್ರೆಯು ಬಿಜೆಪಿಗೆ ತನ್ನ ರಾಜಕೀಯ ಸಂದೇಶವನ್ನು ಜನರಿಗೆ ತಲುಪಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ತಿಂಗಳ ಅವಧಿಯ ಈ ಪ್ರಯಾಣದ ಉದ್ದಕ್ಕೂ ಪಕ್ಷದ ಕಾರ್ಯಕರ್ತರು ಜನರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಡ್ನಗರ ಮತ್ತು ವಾರಣಾಸಿಯ ಆಯ್ಕೆಯು ಬಿಜೆಪಿಗೆ ಅತ್ಯಂತ ಪ್ರಮುಖವಾಗಿದೆ. ವಡ್ನಗರವು ಪ್ರಧಾನಿ ಮೋದಿ ಅವರ ಜನ್ಮಸ್ಥಳವಾಗಿದ್ದರೆ, ವಾರಣಾಸಿಯು 2014ರಿಂದ ಅವರ ರಾಜಕೀಯ ಭದ್ರಕೋಟೆಯಾಗಿದೆ. ಈ ಯಾತ್ರೆಯು ಉಭಯ ಸ್ಥಳಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವುದರ ಜತೆಗೆ ಪಕ್ಷದ ಸಾಂಸ್ಥಿಕ ಸಂಪರ್ಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ಪಕ್ಷದ ನಾಯಕರ ನಂಬಿಕೆ. ಒಟ್ಟಿನಲ್ಲಿ ಈ ಜನ ಸಂಪರ್ಕ ಅಭಿಯಾನವು ಮುಂಬರುವ ದಿನಗಳಲ್ಲಿ ಬಿಜೆಪಿಯ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.