Next BJP President: ಈ ಮಾಸಾಂತ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ; ಸಚಿವ ಸಂಪುಟಕ್ಕೂ ಸರ್ಜರಿ
BJP Leadership: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆಗೆ ಕಾಲ ಸನ್ನಿಹಿತವಾಗಿದೆ. ಈ ತಿಂಗಳ ಕೊನೆಯಲ್ಲಿ ಬಿಜೆಪಿ ಅಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಕೇಂದ್ರ ಕ್ಯಾಬಿನೆಟ್‌ಗೂ ಸರ್ಜರಿ ನಡೆಯಲಿದೆ ಎನ್ನಲಾಗಿದೆ. ಪ್ರಧಾನಿ ಮೋದಿ ಏ. 22-23ರಂದು ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಆದ್ದರಿಂದ ಅವರು ಭಾರತಕ್ಕೆ ಮರಳಿದ ನಂತರವೇ ಬಿಜೆಪಿ ಅಧ್ಯಕ್ಷರ ಪ್ರಕ್ರಿಯೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಬಿಜೆಪಿ ಧ್ವಜ.

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ (BJP President) ಹೆಸರು ಘೋಷಣೆಗೆ ಕಾಲ ಸನ್ನಿಹಿತವಾಗಿದೆ. ಈ ತಿಂಗಳ ಕೊನೆಯಲ್ಲಿ ಬಿಜೆಪಿ ಅಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ (Next BJP President). ಜತೆಗೆ ಕೇಂದ್ರ ಕ್ಯಾಬಿನೆಟ್‌ಗೂ ಸರ್ಜರಿ ನಡೆಯಲಿದೆ ಎನ್ನಲಾಗಿದೆ. ಎನ್‌ಡಿಎ (NDA) ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ, ಶಿವಸೇನೆ ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದು, ಈ ಪಕ್ಷಗಳ ಹೊಸ ಮುಖಗಳು ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಸತತವಾಗಿ ಎನ್‌ಡಿಎ ಗದ್ದುಗೆಗೆ ಏರುವಲ್ಲಿ ಪ್ರಮುಖ ಪಾತ್ರವಹಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda) ಅವರ ಅಧಿಕಾರಾವಧಿ ಕಳೆದ ವರ್ಷವೇ ಪೂರ್ಣಗೊಂಡಿದ್ದು, 2024ರ ಜೂನ್‌ನಲ್ಲಿ ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿತ್ತು. ಹೀಗಾಗಿ ಈ ತಿಂಗಳು ಕೇಸರಿ ಪಕ್ಷ ಹೊಸ ಅಧ್ಯಕ್ಷರನ್ನು ನೇಮಿಸಲಿದ್ದು, ಅದಕ್ಕಾಗಿ ಕಸರತ್ತು ನಡೆಸುತ್ತಿದೆ. ಸಮರ್ಥ ನಾಯಕರನ್ನು ಆಯ್ಕೆ ಮಾಡಲು ಮುಂದಾಗಿದೆ.
ಈ ಸುದ್ದಿಯನ್ನೂ ಓದಿ: BJP Leadership: ಹೊಸ ನಾಯಕತ್ವ ಹುಟ್ಟುಹಾಕಲು ಬಿಜೆಪಿ ಸಜ್ಜು; ಯಾರಾಗ್ತಾರೆ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷ?
ಯಾರಾಗ್ತಾರೆ ಮುಂದಿನ ಅಧ್ಯಕ್ಷ?
ಯಾರಾಗ್ತಾರೆ ಬಿಜೆಪಿಯ ಮುಂದಿನ ರಾಷ್ಟ್ರೀಯ ಅಧ್ಯಕ್ಷ ಎನ್ನುವ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈ ಬಗ್ಗೆ ಕೆಲವೊಂದಿಷ್ಟು ಮಂದಿಯ ಹೆಸರು ಚರ್ಚೆಯಲ್ಲಿದೆ. ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದ್ರ ಯಾದವ್ ಹೆಸರು ಚಾಲ್ತಿಯಲ್ಲಿದೆ. ಮುಂದಿನ ವಾರ ಬಿಜೆಪಿ ಈ ಬಗ್ಗೆ ಆರ್‌ಎಸ್‌ಎಸ್ ಮುಖಂಡರ ಅಭಿಪ್ರಾಯವನ್ನು ಕೇಳಲಿದೆ ಎಂದು ಮೂಲಗಳು ತಿಳಿಸಿವೆ. ಈ ವಾರಾಂತ್ಯದ ವೇಳೆಗೆ ಬಿಜೆಪಿ ತನ್ನ ರಾಜ್ಯ ಘಟಕಗಳ ಮರುಸಂಘಟನೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಬಿಜೆಪಿ ರಾಷ್ಟ್ರ ಅಧ್ಯಕ್ಷರ ನೇಮಕಾತಿಗೆ ಮುಂಚಿತವಾಗಿ ಪಕ್ಷವು 4-5 ರಾಜ್ಯಗಳ ಅಧ್ಯಕ್ಷರನ್ನು ಘೋಷಿಸಲಿದೆ.
ಹೊಸ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಗೆ ಬಿಜೆಪಿ ಮುಂದಿನ ವಾರ ಅಧಿಸೂಚನೆ ಹೊರಡಿಸಲಿದೆ. ಇದರ ನಂತರ ನಾಮನಿರ್ದೇಶನ ಪ್ರಕ್ರಿಯೆ ನಡೆಯುತ್ತದೆ. ಬವಳಿಕ ಸರ್ವಾನುಮತದಿಂದ ಬಿಜೆಪಿ ಅಧ್ಯಕ್ಷರನ್ನು ಹೆಸರನ್ನು ಘೋಷಿಸಲಾಗುತ್ತದೆ. ನಿರೀಕ್ಷೆಯಂತೆ ಕೇಂದ್ರ ಸಚಿವರೊಬ್ಬರನ್ನು ಮುಂದಿನ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ, ಅದು ಕ್ಯಾಬಿನೆಟ್‌ನಲ್ಲಿ ಮತ್ತೊಂದು ಖಾಲಿಯಾಗಲಿದೆ. ಅದನ್ನೂ ಕೂಡಲೇ ಭರ್ತಿ ಮಾಡಲಾಗುತ್ತದೆ.
ಮೈತ್ರಿಕೂಟದಿಂದ ಬೇಡಿಕೆ
ಮಹಾರಾಷ್ಟ್ರ ಗೆಲುವಿನ ನಂತರ ಕೇಂದ್ರ ಸರ್ಕಾರದಲ್ಲಿ ಪೂರ್ಣ ಕ್ಯಾಬಿನೆಟ್ ಸ್ಥಾನಕ್ಕಾಗಿ ಎನ್‌ಸಿಪಿ ಮತ್ತು ಶಿವ ಸೇನೆ ಎರಡೂ ಆಗ್ರಹಿಸುತ್ತಿವೆ. ಬಿಹಾರ ಚುನಾವಣೆ ಹಿನ್ನಲೆಯಲ್ಲಿ ಉಪೇಂದ್ರ ಕುಶ್ವಾಹ ಅವರಂತಹ ಬಿಹಾರದ ಮಿತ್ರಪಕ್ಷಗಳ ಸದಸ್ಯರಿಗೆ ಬಿಜೆಪಿ ಕ್ಯಾಬಿನೆಟ್‌ನಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಈ ಸಂಪುಟ ವಿಸ್ತರಣೆ ಮೋದಿ 3.0 ಸರ್ಕಾರ ಜೂನ್‌ನಲ್ಲಿ ಪ್ರಥಮ ವಾರ್ಷಿಕೋತ್ಸವ ಆಚರಿಸುವ ಮೊದಲು ನಡೆಯಲಿದೆ.
ಪ್ರಧಾನಿ ಮೋದಿ ಏ. 22-23ರಂದು ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಆದ್ದರಿಂದ ಅವರು ಭಾರತಕ್ಕೆ ಮರಳಿದ ನಂತರವೇ ಬಿಜೆಪಿ ಅಧ್ಯಕ್ಷರ ಪ್ರಕ್ರಿಯೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಕಳೆದ ಕೆಲವು ದಿನಗಳಿಂದ ಸರ್ಕಾರದ ಉನ್ನತ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ಬಿಜೆಪಿ ಅಧ್ಯಕ್ಷರ ಆಯ್ಕೆ, ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಮಾತುಕತೆ ನಡೆಯುತ್ತಿದೆ.