ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ನೇಮಕ; ನಾಳೆ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

Samrat Choudhary: ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್‌ ಕುಮಾರ್‌ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದೀಗ ನೂತನ ಮುಖ್ಯಮಂತ್ರಿ ಘೋಷಣೆಯಾಗಿದೆ. ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ನಾಳೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಂಗ್ರಹ ಚಿತ್ರ

ಪಟನಾ: 10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್‌ ಕುಮಾರ್‌ (Nitish Kumar) ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದೀಗ ನೂತನ ಮುಖ್ಯಮಂತ್ರಿ ಘೋಷಣೆಯಾಗಿದೆ. ಬಿಜೆಪಿಯ (Samrat Choudhary) ಸಾಮ್ರಾಟ್ ಚೌಧರಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಚೌಧರಿ ಅವರು ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬಿಜೆಪಿ ನಾಯಕರಾಗಿದ್ದಾರೆ.

ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಸಾಮ್ರಾಟ್‌ ಚೌಧರಿ ಹಿಂದುಳಿದ ವರ್ಗ (ಒಬಿಸಿ) ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರು. ಹಿಂದುಳಿದ ಜಾತಿಗಳಲ್ಲಿ, ಯಾದವರ ನಂತರ ಕುಶ್ವಾಹ ಸಮುದಾಯವು ಅತಿ ದೊಡ್ಡದಾಗಿದೆ. ಸಾಮ್ರಾಟ್‌ ಚೌಧರಿ ಅವರು ನಿತೀಶ್‌ಕುಮಾರ್‌ ಅವರ ಮಾಜಿ ಆಪ್ತ ಶಕುನಿ ಚೌಧರಿ ಅವರ ಪುತ್ರ. 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಒಬಿಸಿಗೆ ಸೇರಿದ ಚೌಧರಿ ಅವರು ಪ್ರಸ್ತುತ ತಾರಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಕಾರ‍್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸಾಮ್ರಾಟ್‌ ಚೌಧರಿ ಯಾರು?

ಸಾಮ್ರಾಟ್ ಚೌಧರಿ ಅವರು ನವೆಂಬರ್ 16, 1968 ರಂದು ಮುಂಗೇರ್ ಜಿಲ್ಲೆಯ ಲಖನ್‌ಪುರ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಕುನಿ ಚೌಧರಿ ಏಳು ಬಾರಿ ಶಾಸಕ ಮತ್ತು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಾಮ್ರಾಟ್‌ ಬಾಲ್ಯದಿಂದಲೇ ರಾಜಕೀಯವನ್ನು ನೋಡಿಕೊಂಡು ಬೆಳೆದವರು. ಅವರ ತಾಯಿ ಪಾರ್ವತಿ ದೇವಿ ಕೂಡ ತಾರಾಪುರದಿಂದ ಶಾಸಕಿಯಾಗಿ ಸೇವೆ ಸಲ್ಲಿಸಿದ್ದರು.

ಮುಂಗೇರ್‌ನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಸಾಮ್ರಾಟ್‌, ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಆ ಬಳಿಕ ಸಕ್ರಿಯವಾಗಿ ರಾಜಕೀಯವಾಗಿ ತೊಡಗಿಕೊಂಡಿದ್ದರು. 1990 ರ ದಶಕದಲ್ಲಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಮೇ 19, 1999 ರಂದು, ಅವರು ರಾಬ್ರಿ ದೇವಿ ಸರ್ಕಾರದಲ್ಲಿ ಕೃಷಿ ಸಚಿವರಾದರು. 2000 ರಲ್ಲಿ, ಅವರು ಪರ್ಬಟ್ಟಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

2010 ರಲ್ಲಿ, ಚೌಧರಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕಗೊಂಡರು. 2017 ರಲ್ಲಿ ಔಪಚಾರಿಕವಾಗಿ ಬಿಜೆಪಿ ಸೇರಿದ ಸಾಮ್ರಾಟ್‌, 2018 ರಲ್ಲಿ ರಾಜ್ಯ ಉಪಾಧ್ಯಕ್ಷರಾದರು. 2020 ರಲ್ಲಿ, ಅವರು ಬಿಜೆಪಿ ಕೋಟಾದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದರು. 2022 ರಲ್ಲಿ, ಅವರು ಬಿಹಾರ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾದರು, ಸಂಘಟನೆ ಮತ್ತು ಶಾಸಕಾಂಗ ಎರಡರಲ್ಲೂ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡರು.

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ; ನಾಳೆ ಹೊಸ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ

ಆಗಸ್ಟ್ 2022 ರಲ್ಲಿ ನಿತೀಶ್ ಕುಮಾರ್ ಮಹಾಘಟಬಂಧನ್ ಜೊತೆ ಸರ್ಕಾರ ರಚಿಸಿದಾಗ, ಬಿಜೆಪಿಗೆ ಬಲಿಷ್ಠ ಮತ್ತು ಆಕ್ರಮಣಕಾರಿ ನಾಯಕನ ಅಗತ್ಯವಿತ್ತು. ಅಮಿತ್ ಶಾ ಅವರು ಸಾಮ್ರಾಟ್ ಚೌಧರಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದರು. ಜನವರಿ 2024 ರಲ್ಲಿ, ಅವರು ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾದರು ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದರು. ಇದೀಗ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Vishakha Bhat Heggar

View all posts by this author