Black Forest operation: ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆ- 31 ನಕ್ಸಲರ ಎನ್‌ಕೌಂಟರ್
ಮಾವೋವಾದಿಗಳ (Naxal Encounter) ಸಂಪೂರ್ಣ ನಿಯಂತ್ರಣದಲ್ಲಿದ್ದ ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿರುವ ಕರ್ರೆಗುತ್ತಲು ಬೆಟ್ಟಗಳಲ್ಲಿ ನಡೆಸಿದ ಮೂರು ವಾರಗಳ ಬೃಹತ್ ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆಯಲ್ಲಿ 31 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಸುಮಾರು 26,000 ಭದ್ರತಾ ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಕಪ್ಪು ಬೆಟ್ಟ ಎಂದೇ ಕುಖ್ಯಾತಿ ಪಡೆದಿರುವ ಕರ್ರೆಗುತ್ತಲು ಬೆಟ್ಟಗಳು ಒಂದು ಕಾಲದಲ್ಲಿ ಮಾವೋವಾದಿಗಳ ಸಂಪೂರ್ಣ ನಿಯಂತ್ರಣದಲ್ಲಿತ್ತು.


ಛತ್ತೀಸ್‌ಗಢ: ಮಾವೋವಾದಿಗಳ (Naxal encounter) ಸಂಪೂರ್ಣ ನಿಯಂತ್ರಣದಲ್ಲಿದ್ದ ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿರುವ (Chhattisgarh-Telangana) ಕರ್ರೆಗುತ್ತಲು ಬೆಟ್ಟಗಳಲ್ಲಿ (Karreguttalu hills ) ನಡೆಸಿದ ಮೂರು ವಾರಗಳ ಬೃಹತ್ ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆಯಲ್ಲಿ (Black Forest operation) 31 ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಸುಮಾರು 26,000 ಭದ್ರತಾ ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಕಪ್ಪು ಬೆಟ್ಟ ಎಂದೇ ಕುಖ್ಯಾತಿ ಪಡೆದಿರುವ ಕರ್ರೆಗುತ್ತಲು ಬೆಟ್ಟಗಳು ಒಂದು ಕಾಲದಲ್ಲಿ ಮಾವೋವಾದಿಗಳ ಸಂಪೂರ್ಣ ನಿಯಂತ್ರಣದಲ್ಲಿತ್ತು. 60 ಕಿ.ಮೀ. ವ್ಯಾಪಿಸಿರುವ ಬೆಟ್ಟಗಳ ಈ ಪ್ರದೇಶವು 700- 900 ಮೀಟರ್ ಎತ್ತರವನ್ನು ಹೊಂದಿದೆ. ಇಲ್ಲಿಗೆ ಯಾವುದೇ ರಸ್ತೆಗಳಿಲ್ಲ ಎಂದು ಭದ್ರತಾ ಪಡೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆ ಮೇ 11ರಂದು ಮುಕ್ತಾಯಗೊಳಿಸಲಾಯಿತು. ಈ ಬೆಟ್ಟಗಳಲ್ಲಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ 1, ಡಿಕೆಎಸ್‌ಜೆಡ್‌ಸಿ, ಟಿಎಸ್‌ಸಿ ಮತ್ತು ಸಿಆರ್‌ಸಿ ಸೇರಿದಂತೆ ಹಲವಾರು ನಕ್ಸಲ್ ತಂಡಗಳು ಕಾರ್ಯನಿರ್ವಹಿಸುತ್ತಿದ್ದವು. ಈ ತಂಡಗಳ ಪ್ರಧಾನ ಕಚೇರಿ ಈ ಬೆಟ್ಟದಲ್ಲಿದ್ದು, ಅದನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಂಪು ಭಯೋತ್ಪಾದನೆಯ ಆಳ್ವಿಕೆಗೆ ಒಳಗಾಗಿದ್ದ ಬೆಟ್ಟಗಳಲ್ಲಿ ಈಗ ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿವೆ. ಇದು ಈವರೆಗಿನ ಅತಿದೊಡ್ಡ ಕಾರ್ಯಾಚರಣೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಭದ್ರತಾ ಪಡೆಗಳ ಈ ಯಶಸ್ಸು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಅಶಾಂತಿಯನ್ನು ಬೇರುಸಹಿತ ನಿರ್ಮೂಲನೆ ಮಾಡುವ ನಮ್ಮ ಅಭಿಯಾನವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತೋರಿಸುತ್ತದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸಲು ಮತ್ತು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಆರ್‌ಪಿಎಫ್ ಮಹಾನಿರ್ದೇಶಕ ಜಿಪಿ ಸಿಂಗ್, ಇದು ನಕ್ಸಲರ ಮುಖ್ಯ ಗುಹೆಯಾಗಿತ್ತು. ಸುಮಾರು 300- 350 ಜನರು ಇಲ್ಲಿ ನೆಲೆಸಿದ್ದರು. ಇದು ಭದ್ರತಾ ಪಡೆಗಳಿಗೆ ನಿಷೇಧಿತ ಪ್ರದೇಶವಾಗಿತ್ತು. ಈ ಕಾರ್ಯಾಚರಣೆ ವೇಳೆ ಕೇಂದ್ರ ಮತ್ತು ರಾಜ್ಯಗಳ ಸಿಬ್ಬಂದಿ ಬೆಟ್ಟಗಳ ಮೇಲೆ ಹೆಲಿಪ್ಯಾಡ್ ಅನ್ನು ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ವಾಯುಪಡೆ (IAF) ಬೆಂಬಲದೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಸುಮಾರು 250 ಗುಹೆಗಳಲ್ಲಿ ಮಾವೋವಾದಿಗಳು ಶಸ್ತ್ರಾಸ್ತ್ರ ಸಿದ್ಧಪಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಬೆಟಾಲಿಯನ್ 1 ರ ನಾಲ್ಕು ತಾಂತ್ರಿಕ ತಂಡಗಳು, ಉತ್ಪಾದನಾ ಸೌಲಭ್ಯಗಳಿಗೆ ವಿದ್ಯುತ್ ಒದಗಿಸುವ ಜನರೇಟರ್, ಬಂದೂಕುಗಳು, ಗ್ರೆನೇಡ್‌ಗಳು ಮತ್ತು ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಒಬ್ಬರು ತಿಳಿಸಿದ್ದಾರೆ.
ಬೆಟ್ಟಗಳಾದ್ಯಂತ ಸುಮಾರು 450 ಸುಧಾರಿತ ಸ್ಫೋಟಕ ಸಾಧನಗಳನ್ನು ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಈ ಕಾರ್ಯಾಚರಣೆ ವೇಳೆ ಹದಿನೈದು ಪತ್ತೆಯಾಗದ ಸಾಧನಗಳು ಸ್ಫೋಟಗೊಂಡವು. 18 ಸಿಬ್ಬಂದಿ ಗಾಯಗೊಂಡಿದ್ದಾರೆ. ಸುಮಾರು 12,000 ಕೆ.ಜಿ. ಪಡಿತರ ಸಾಮಗ್ರಿ ಸೇರಿದಂತೆ ಪ್ರಚಾರಕ್ಕಾಗಿ ಬಳಸುವ ಮುದ್ರಕಗಳು , 818 ಬ್ಯಾರೆಲ್ ಗ್ರೆನೇಡ್ ಲಾಂಚರ್ ಶೆಲ್‌ಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಗುಹೆಗಳಲ್ಲಿ ಶಸ್ತ್ರಾಸ್ತ್ರ ತಯಾರಿಕೆಗಾಗಿ ನಾಲ್ಕು ಮಾವೋವಾದಿ ತಾಂತ್ರಿಕ ಘಟಕಗಳು, ಔಷಧ, ಪ್ರಥಮ ಚಿಕಿತ್ಸಾ ಕಿಟ್‌ಗಳು, ನಕ್ಸಲ್ ಸಮವಸ್ತ್ರಗಳನ್ನು ಹೊಲಿಯಲು ಹೊಲಿಗೆ ಯಂತ್ರಗಳು ಮತ್ತು 1,100 ಬಿಯರ್ ಬಾಟಲಿಗಳನ್ನು ಪತ್ತೆಯಾಗಿವೆ. ಈವರೆಗೆ ಗುರುತಿಸಲಾಗಿರುವ 28 ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪಿಕೊಂಡಿದ್ದು, ಇವರು ವಿವಿಧ ರಾಜ್ಯ ಪೊಲೀಸ್ ಪಡೆಗಳು ಘೋಷಿಸಿರುವ 1.72 ಕೋಟಿ ರೂ. ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹಿರಿಯ ಮಾವೋವಾದಿ ಸದಸ್ಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಸಿಆರ್‌ಪಿಎಫ್ ಮುಖ್ಯಸ್ಥ ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷದಿಂದಲೇ ಇಲ್ಲಿ ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ನಕ್ಸಲರು ತಪ್ಪಿಸಿಕೊಳ್ಳದಂತೆ ಕೆರಗುಟ್ಟಲು ಬೆಟ್ಟಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಕಡಿತಗೊಳಿಸಿದ್ದರು. ಸುಮಾರು 21 ದಿನಗಳ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳಿಗೆ ಕರಡಿಗಳು ಕೂಡ ಎದುರಾಗಿದ್ದವು ಎಂದು ಅವರು ಹೇಳಿದರು.
ಇದನ್ನೂ ಓದಿ: Balochistan independence: ಪಾಕ್‌ಗೆ ಮರ್ಮಾಘಾತ; ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ
2026ರ ಮಾರ್ಚ್ 31ರೊಳಗೆ ನಕ್ಸಲ್ ಹಿಂಸಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ ಗಡುವು ವಿಧಿಸಿದೆ. ಈ ವೇಳೆಗೆ ದೇಶವು ನಕ್ಸಲ್ ಮುಕ್ತವಾಗುವಂತೆ ನೋಡಿಕೊಳ್ಳಲು ಸರ್ಕಾರದ ಸಹಾಯದೊಂದಿಗೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಕಳೆದ ವರ್ಷ 280 ಹಾಗೂ ಈ ವರ್ಷದಲ್ಲಿ ಈವರೆಗೆ 197 ನಕ್ಸಲರು ಸಾವನ್ನಪ್ಪಿದ್ದಾರೆ.
ನಕ್ಸಲರ ವಿರೋಧಿ ಕಾರ್ಯಾಚರಣೆ ತೀವ್ರವಾಗಿರುವ ಬೆನ್ನಲ್ಲೇ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯ ಮೇಲೆ 16 ನಾಗರಿಕರನ್ನು ನಕ್ಸಲರು ಕೊಂದಿದ್ದಾರೆ. 2025ರ ಮೊದಲ ಐದು ತಿಂಗಳಲ್ಲಿ ಇಪ್ಪತ್ತು ಭದ್ರತಾ ಸಿಬ್ಬಂದಿಯನ್ನು ಕೂಡ ಕೊಲ್ಲಲಾಗಿದೆ.