ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇನ್ಮುಂದೆ ರಕ್ತದಾನಿಗಳಿಗೆ ಸಿಗಲಿದೆ 'ಡಿಜಿಟಲ್ ಐಡಿ': ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್‌

ತುರ್ತು ಸಂದರ್ಭಗಳಲ್ಲಿ ರಕ್ತದ ಅಭಾವ ತಡೆಯಲು ಮತ್ತು ರಕ್ತದಾನಿಗಳ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಲು ಕೇಂದ್ರ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಇದರಂತೆ ಪ್ರತಿಯೊಬ್ಬ ರಕ್ತದಾನಿಗೂ ಪ್ರತ್ಯೇಕ 'ಡಿಜಿಟಲ್ ಐಡೆಂಟಿಟಿ' ಅಥವಾ ಯೂನಿಕ್ ಐಡಿ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರಿಗೆ ಹಾಗೂ ರಕ್ತದಾನಿಗಳಿಗೆ ಸಿಗಲಿರುವ ಮಹತ್ವದ ಪ್ರಯೋಜನಗಳ ಪೂರ್ಣ ವಿವರ ಇಲ್ಲಿದೆ.

ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ರಕ್ತದ ಅಭಾವವನ್ನು ನೀಗಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರಕ್ತದ ಗುಂಪನ್ನು (Blood Group) ತಕ್ಷಣವೇ ಪತ್ತೆಹಚ್ಚಲು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಯೋಜನೆಯೊಂದನ್ನು ರೂಪಿಸುತ್ತಿದೆ. ಈ ಯೋಜನೆಯಡಿ ರಕ್ತದಾನಿಗಳಿಗೆ ಕೇಂದ್ರೀಕೃತ ಡಿಜಿಟಲ್ ಗುರುತಿನ ಚೀಟಿ (Digital Identity) ಅಥವಾ ಯುನಿಕ್ ಐಡಿ ನೀಡಲು ನಿರ್ಧರಿಸಲಾಗಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ ಈ ಡಿಜಿಟಲ್ ಐಡಿ ವ್ಯವಸ್ಥೆಯು ರಕ್ತದಾನ ಮತ್ತು ರಕ್ತ ನಿಧಿಗಳ ನಿರ್ವಹಣೆಯಲ್ಲಿ ಭಾರಿ ಬದಲಾವಣೆ ತರಲಿದೆ.

ಏನಿದು 'ಡಿಜಿಟಲ್ ಐಡೆಂಟಿಟಿ' ಯೋಜನೆ?

ಪ್ರಸ್ತುತ ರಕ್ತದಾನಿಗಳು ಬೇರೆ ಬೇರೆ ರಕ್ತದಾನ ಶಿಬರಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ರಕ್ತ ನೀಡಿದಾಗ ಪ್ರತ್ಯೇಕ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ. ಇನ್ನುಮುಂದೆ, ಹೊಸ ಯೋಜನೆಯ ಪ್ರಕಾರ, ಪ್ರತಿಯೊಬ್ಬ ಸಕ್ರಿಯ ರಕ್ತದಾನಿಗೂ ಆಧಾರ್‌ ಅಥವಾ ಡಿಜಿಟಲ್ ಆರೋಗ್ಯ ಕಾರ್ಡ್ ಮಾದರಿಯಲ್ಲಿ ವಿಶಿಷ್ಟ ಡಿಜಿಟಲ್ ಐಡಿ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ 'ಇ-ರಕ್ತಕೋಶ್' ಪೋರ್ಟಲ್ ಜೊತೆಗೆ ಈ ಡಿಜಿಟಲ್ ಐಡಿಯನ್ನು ಜೋಡಿಸಲಾಗುತ್ತದೆ. ರಕ್ತದಾನಿಯ ರಕ್ತದ ಗುಂಪು, ಕೊನೆಯ ಬಾರಿಗೆ ರಕ್ತ ನೀಡಿದ ದಿನಾಂಕ, ಆರೋಗ್ಯ ಸ್ಥಿತಿ ಹಾಗೂ ಲಭ್ಯತೆಯ ವಿವರಗಳು ಡಿಜಿಟಲ್ ರೂಪದಲ್ಲಿ ದಾಖಲಾಗುತ್ತವೆ.

ರಕ್ತದ ಗುಂಪು ಪತ್ತೆ ಮತ್ತು ಟ್ರ್ಯಾಕಿಂಗ್‌ ಸುಲಭವಾಗುವುದು ಹೇಗೆ?

  • ಒಬ್ಬ ವ್ಯಕ್ತಿ ರಕ್ತದಾನ ಮಾಡಿದ ನಂತರ ಮತ್ತೆ ರಕ್ತ ನೀಡಲು ಕನಿಷ್ಠ 90 ದಿನಗಳ (3 ತಿಂಗಳ) ಅಂತರವಿರಬೇಕು. ಡಿಜಿಟಲ್‌ ಐಡಿ ಇರುವುದರಿಂದ ರಕ್ತದಾನಿಯು ಕೊನೆಯ ದಾನದ ದಿನಾಂಕ ತಕ್ಷಣ ಸಿಗಲಿದ್ದು, ಅವಧಿಗೂ ಮುನ್ನ ಮತ್ತೆ ರಕ್ತ ನೀಡುವುದನ್ನು ತಡೆಯಬಹುದು. ಇದು ದಾನಿಯ ಆರೋಗ್ಯದ ದೃಷ್ಟಿಯಿಂದಲೂ ಸುರಕ್ಷಿತ.
  • ಯಾವುದೇ ಆಸ್ಪತ್ರೆಯಲ್ಲಿ ಅಪರೂಪದ ರಕ್ತದ ಗುಂಪು ಅಗತ್ಯವಿದ್ದಾಗ ಹತ್ತಿರದಲ್ಲಿ ಲಭ್ಯವಿರುವ ನೋಂದಾಯಿತ ರಕ್ತದಾನಿಗಳನ್ನು ಡಿಜಿಟಲ್‌ ಸಿಸ್ಟಮ್‌ ಮೂಲಕ ತಕ್ಷಣವೇ ಸಂಪರ್ಕಿಸಬಹುದು. ಉದಾಹರಣೆಗೆ- 0-Negative, AB-Negative ರಕ್ತದಾನಿಗಳನ್ನು ಪತ್ತಹಚ್ಚುವುದು.
  • ಕೆಲವೊಮ್ಮೆ ಆರೋಗ್ಯ ಸಮಸ್ಯೆಯಿರುವವರು ಅಥವಾ ರಕ್ತಹೀನತೆಯಿಂದ ಬಳಲುತ್ತಿರುವವರು ರಕ್ತದಾನ ಮಾಡುವುದನ್ನು ತಡೆಯಲು ಮತ್ತು ಒಂದಕ್ಕಿಂತ ಹೆಚ್ಚು ಕಡೆ ತಪ್ಪು ಮಾಹಿತಿ ನೀಡುವುದನ್ನು ತಡೆಯಲು ಈ ಐಡಿ ನೆರವಾಗುತ್ತದೆ.
  • ಸಾರ್ವಜನಿಕರು ಹಾಗೂ ಆಸ್ಪತ್ರೆಗಳು ಇ-ರಕ್ತಕೋಶ್ ಪ್ಲಾಟ್‌ಫಾರ್ಮ್ ಮೂಲಕ ಯಾವ ರಕ್ತನಿಧಿಯಲ್ಲಿ ಎಷ್ಟು ಯೂನಿಟ್ ರಕ್ತ ಲಭ್ಯವಿದೆ ಎಂಬುದನ್ನು ನೇರವಾಗಿ ವೀಕ್ಷಿಸಬಹುದು.

ರಕ್ತದಾನಿಗಳಿಗೆ ಸಿಗುವ ಪ್ರಯೋಜನಗಳೇನು?

ಡಿಜಿಟಲ್ ಐಡೆಂಟಿಟಿ ಯೋಜನೆಯು ರಕ್ತದಾನಿಗಳಿಗೆ ರಕ್ತದಾನದ ಡಿಜಿಟಲ್‌ ಪ್ರಮಾಣಪತ್ರ ನೀಡುತ್ತದೆ. ಪ್ರತಿಯೊಂದು ರಕ್ತದಾನದ ನಂತರ ಮೊಬೈಲ್‌ನಲ್ಲೇ ಡಿಜಿಟಲ್ ಸರ್ಟಿಫಿಕೇಟ್ ಲಭ್ಯವಾಗಲಿದೆ. ರಕ್ತದಾನದ ವೇಳೆ ನಡೆಸಲಾಗುವ ಹಿಮೋಗ್ಲೋಬಿನ್, ರಕ್ತದೊತ್ತಡ ಮುಂತಾದ ಆರಂಭಿಕ ತಪಾಸಣೆಗಳ ಮಾಹಿತಿ ಡಿಜಿಟಲ್ ಪ್ರೊಫೈಲ್‌ನಲ್ಲಿ ಇರಲಿದೆ. ರಕ್ತದಾನಿ ಅಥವಾ ಅವರ ಕುಟುಂಬದ ಸದಸ್ಯರಿಗೆ ಭವಿಷ್ಯದಲ್ಲಿ ರಕ್ತದ ಅಗತ್ಯ ಬಿದ್ದಾಗ ಆದ್ಯತೆಯ ಆಧಾರದ ಮೇಲೆ ರಕ್ತ ಸಿಗಲು ಸಹಾಯವಾಗಲಿದೆ.

ರಕ್ತಕ್ಕೆ ರಕ್ತವೇ ಪರ್ಯಾಯ - ರಕ್ತದಾನದಿಂದ ಜೀವ ಉಳಿಸಲು ಸಾಧ್ಯ: ಡಾ‌.ಕರುಂಬಯ್ಯ 

ದೇಶಾದ್ಯಂತ ಇರುವ ಇಲ್ಲಾ ಸರ್ಕಾರಿ ಮತ್ತು ಖಾಸಗಿ ರಕ್ತನಿಧಿಗಳನ್ನು ಒಂದೇ ಡಿಜಿಟಲ್‌ ನೆಟ್‌ವರ್ಕ್‌ ಅಡಿಯಲ್ಲಿ ತರಲಾಗುತ್ತಿದ್ದು, ಶೀಘ್ರದಲ್ಲೇ ಈ ಡಿಜಿಟಲ್‌ ಐಡಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಆಪ್‌ಗಳ ಮೂಲಕವೇ ರಕ್ತದಾನಿಗಳು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಜೀವ ಕಳೆದುಕೊಳ್ಳುವ ಪರಿಸ್ಥಿತಿಯನ್ನು ತಪ್ಪಿಸಲು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಈ ಡಿಜಿಟಲ್ ಐಡಿ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ.

Vishakha Bhat Heggar

View all posts by this author