ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಲ್ಮಾನ್‌ ಖಾನ್‌ ಬಳಿಕ ಬಾಲಿವುಡ್ ನಟ ಅಮೀರ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ: ಸೋಷಿಯಲ್‌ ಮೀಡಿಯಾ ಪೋಸ್ಟ್ ಮೂಲಕ ಧಮ್ಕಿ

Aamir Khan Receives Threat: ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಬೆದರಿಕೆ ಹಾಕಿದೆ. ಅಮೀರ್ ಖಾನ್ ದೇಶದಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಗುಂಪು ಆರೋಪಿಸಿದ್ದು, ಇದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದೆ.

ಬಾಲಿವುಡ್ ನಟ ಅಮೀರ್ ಖಾನ್ (ಸಂಗ್ರಹ ಚಿತ್ರ)

ನವದೆಹಲಿ, ಜು. 18: ಇತ್ತೀಚೆಗೆ ಮೂರನೇ ಬಾರಿಗೆ ವಿವಾಹವಾದ ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi gang) ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಅರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಸೇರಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಅಮೀರ್ ಖಾನ್ ದೇಶದಲ್ಲಿ ಲವ್ ಜಿಹಾದ್ ಪ್ರಚಾರ ಮಾಡುತ್ತಿದ್ದಾರೆ ಎಂದು ಗುಂಪು ಆರೋಪಿಸಿದ್ದು, ಇದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದೆ. “ನಾನು, ಅರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ (ಲಾರೆನ್ಸ್ ಬಿಷ್ಣೋಯ್ ಗ್ರೂಪ್), ಅಮೀರ್ ಖಾನ್ ಅವರಂತಹ ಸೆಲೆಬ್ರಿಟಿಗಳು ನಮ್ಮ ದೇಶದಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಅದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ನಾವು ಈ ವ್ಯಕ್ತಿಯನ್ನು ಸಹಿಸುವುದಿಲ್ಲ. ಶೀಘ್ರದಲ್ಲೇ ಅವನು ಪರಿಣಾಮ ಎದುರಿಸಬೇಕಾಗುತ್ತದೆ. ಇದು ಸನಾತನ ಧರ್ಮ ಮತ್ತು ರಾಷ್ಟ್ರದ ವಿರುದ್ಧವಾಗಿದೆ” ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಲಾಗಿದೆ.

“ನಮ್ಮ ಸಹೋದರರು, ಸಹೋದರಿಯರು ಮತ್ತು ದೇಶದ ನಾಗರಿಕರಿಗೆ ನಾವು ಭರವಸೆ ನೀಡುತ್ತೇವೆ. ಇಂತಹ ನಾಚಿಕೆಗೇಡಿತನದ ಕೃತ್ಯಗಳನ್ನು ಪ್ರೋತ್ಸಾಹಿಸುವವರ ವಿರುದ್ಧ ನಮ್ಮದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಖ್ಯಾತಿ ಅಥವಾ ಸ್ಟಾರ್‌ಡಮ್‌ನ ಹೆಸರಿನಲ್ಲಿ ಇಂತಹ ಕೃತ್ಯಗಳಿಗೆ ಉತ್ತೇಜನ ನೀಡುತ್ತಿರುವವರ ಬಾಯಿಯನ್ನು ಮುಚ್ಚಿಸಲಾಗುವುದು” ಎಂದು ಹೇಳಿದೆ.

ಯುಎಸ್- ಕೆನಡಾ ಗಡಿ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊರ್ವ ಸದಸ್ಯನ ಅರೆಸ್ಟ್‌

ಕಳೆದ ತಿಂಗಳು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ 13 ವರ್ಷದ ಬಾಲಕಿಯ ಅಪಹರಣ, ಕಳ್ಳ ಸಾಗಣೆ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆಯೂ ದರೋಡೆಕೋರರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದು, ಆಡಳಿತದ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ.

“ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಮುಗ್ಧ ಹುಡುಗಿಯ ಮೇಲೆ ನಡೆದ ಭಯಾನಕ ಅಪರಾಧವನ್ನೂ ನಾವು ಉಲ್ಲೇಖಿಸಲು ಬಯಸುತ್ತೇವೆ. ಆಡಳಿತವು ಶ್ಲಾಘನೀಯ ಕೆಲಸ ಮಾಡಿದೆ. ಆದರೆ ಕೆಲವು ರಾಜಕೀಯ ನಾಯಕರು ಕೆಲವು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮ ಮೊದಲ ಮತ್ತು ಅಂತಿಮ ಎಚ್ಚರಿಕೆ. ಆ ಮುಗ್ಧ ಹುಡುಗಿಯ ವಿರುದ್ಧದ ಅಪರಾಧದಲ್ಲಿ ಶೇಕಡಾ ಒಂದರಷ್ಟು ಭಾಗಿಯಾದ ಮತ್ತು ಕಾನೂನಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಯಾರೇ ಆಗಿದ್ದರೂ ಅವರಿಗೆ ನಾವು ಶಿಕ್ಷೆ ವಿಧಿಸುತ್ತೇವೆ. ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಜಕೀಯ ನಾಯಕರು ತಕ್ಷಣವೇ ಮಧ್ಯ ಪ್ರವೇಶಿಸುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಅವರು ಅದೇ ಗತಿಯನ್ನು ಎದುರಿಸಬೇಕಾಗುತ್ತದೆ” ಎಂದು ಅದು ಹೇಳಿದ್ದಾರೆ.

ಸಲ್ಮಾನ್ ಖಾನ್‌ಗೆ ಹಲವು ಬಾರಿ ಬೆದರಿಕೆ

ಇನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವು ವರ್ಷಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. 2022ರಲ್ಲಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯ ಹೊಣೆ ಹೊತ್ತ ನಂತರ ಜಗಜ್ಜಾಹೀರಾದ ಈ ಗ್ಯಾಂಗ್, 1998ರ ಸೆಪ್ಟೆಂಬರ್‌ನಲ್ಲಿ ಜೋಧ್‌ಪುರ ಬಳಿಯ ಮಥಾನಿಯಾದ ಬವಾದ್‌ನಲ್ಲಿ 'ಹಮ್ ಸಾಥ್ ಸಾಥ್ ಹೇ' ಹಿಂದಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕೃಷ್ಣಮೃಗಗಳನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಹತ್ಯೆ ಮಾಡಲು ಬಯಸಿರುವುದಾಗಿ ಹೇಳಿದೆ.

2024ರ ಏಪ್ರಿಲ್ ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು. 2023ರ ಅಕ್ಟೋಬರ್‌ನಲ್ಲಿ ಬಾಂದ್ರಾದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಕೊಂದಿರುವುದಾಗಿ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು.