ಭುವನೇಶ್ವರ: ಕೇಂದ್ರೀಯ ವಿದ್ಯಾಲಯ -3ರ ಮುಂಭಾಗದಲ್ಲಿ ಬಾಂಬ್ ಸ್ಫೋಟಗೊಂಡ (Bomb Explosion) ಆಘಾತಕಾರಿ ಘಟನೆ ಒಡಿಶಾದ ಭುವನೇಶ್ವರದಲ್ಲಿ (Bhubaneswar) ನಡೆದಿದೆ. ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಶಾಲೆಯ ಮುಖ್ಯ ದ್ವಾರದ ಬಳಿ ಸ್ಫೋಟ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸ್ಥಳಕ್ಕೆ ತಲುಪಿದೆ. ಮಂಚೇಶ್ವರ ಪೊಲೀಸರು ಸಹ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಶಂಕಿತರು ಅಥವಾ ಅನುಮಾನಾಸ್ಪದ ಚಲನವಲನಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದ ಅನೇಕ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಶಾಲೆಯ ಗೇಟ್ ಸಂಖ್ಯೆ 3 ರ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಅಪರಿಚಿತ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ. ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
10 ನವೆಂಬರ್ 2025ರಂದು ದೆಹಲಿಯ ಹೃದಯಭಾಗದಲ್ಲಿ, ಐತಿಹಾಸಿಕ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ದೇಶವನ್ನು ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಉಗ್ರರು ಕೆಲ ಮಹತ್ವ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೈಶ್-ಸಂಬಂಧಿತ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಭಾರತದ ಹಲವಾರು ನಗರಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಿತ್ತು ಎಂದು ತಿಳಿದು ಬಂದಿದೆ.
ಫರಿದಾಬಾದ್ ಅಲ್ ಪಲಾಹ್ ವಿವಿ ಪಕ್ಕದ ಮದ್ರಸಾಕ್ಕೂ ವ್ಯಾಪಿಸಿದ ದೆಹಲಿ ಬಾಂಬ್ ಸ್ಫೋಟದ ತನಿಖೆ
ಈ ಸಂಬಂಧ ಮತ್ತಷ್ಟು ತನಿಖೆ ನಡೆಸಲಾಗುತ್ತಿದ್ದು, ಹೆಚ್ಚು ಹೆಚ್ಚು ವಿಚಾರಗಳು ಬಹಿರಂಗವಾಗುತ್ತಿದೆ. ಆತ್ಯಾಹುತಿ ಬಾಂಬ್ ದಾಳಿ ನಡೆಸಿದ್ದ ವೈದ್ಯ ಉಮರ್ ಉನ್ ನಬಿ, ಭಯೋತ್ಪಾದನೆಗೆ ರಹಸ್ಯ 'ಮೊಬೈಲ್ ವರ್ಕ್‌ಸ್ಟೇಷನ್' ಹೊಂದಿದ್ದ ಎಂದು ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್‌ನ ಇತರ ಉಗ್ರರು ಹೇಳಿದ್ದಾರೆ. ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ತನ್ನ ಕ್ಯಾಂಪಸ್ ಕೋಣೆಯಲ್ಲಿಯೇ ರಾಸಾಯನಿಕ ಸಂಯುಕ್ತದ ಸಣ್ಣ ಪರೀಕ್ಷೆಯನ್ನು ಉಮರ್ ಉನ್ ನಬಿ ನಡೆಸಿದ್ದ. ನಂತರ ಅದನ್ನು ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸಲು ಬಳಸಿದ್ದಾನೆ ಎಂದು ಬಂಧಿತ ಭಯೋತ್ಪಾದಕ ಶಂಕಿತ ಮುಜಾಮಿಲ್ ಶಕೀಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಗೆದಷ್ಟು ವಿಚಾರಗಳು ಬಹಿರಂಗವಾಗುತ್ತಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾಗಿರುವ ಡಾ. ಶಾಹೀನ್ ಶಾಹಿದ್ ತನ್ನ ಗೆಳತಿಯಲ್ಲ, ಆಕೆ ತನ್ನ ಪತ್ನಿ ಎಂದು ಬಂಧಿತ ಆರೋಪಿ ಉಗ್ರ ಮುಝಮ್ಮಿಲ್ ಅಹ್ಮದ್ ಗನೈ ಹೇಳಿದ್ದ. ಸೆಪ್ಟೆಂಬರ್ 2023 ರಲ್ಲಿ ಇಬ್ಬರೂ ಔಪಚಾರಿಕವಾಗಿ ವಿವಾಹವಾಗಿದ್ದಾಗಿ ಹೇಳಿದ್ದಾನೆ. ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ತೀವ್ರ ಕಾರ್ಯಾಚರಣೆಯನ್ನು ಕೈಗೊಂಡಿದೆ. ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮತ್ತು ಮಾರಾಟ ಮಾಡುವಲ್ಲಿ ಭಾಗಿಯಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಮಾಡ್ಯೂಲ್‌ಗಳ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ನಡುವೆ ಒಡಿಶಾದ ಭುವನೇಶ್ವರದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.