ನವದೆಹಲಿ, ಅ.12: ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಇಮೇಲ್‌ಗಳು ಬಂದಿದ್ದು, ಪೊಲೀಸರು ವ್ಯಾಪಕ ಭದ್ರತಾ ತಪಾಸಣೆಗಳನ್ನು ಆರಂಭಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಸೋಮವಾರ (ಅ.11) ಮುಂಜಾನೆ ಶಾಲಾ ಆಡಳಿತ ಮಂಡಳಿಗೆ ಬಾಂಬ್ ದಾಳಿ ಬೆದರಿಕೆ ಇಮೇಲ್‌ಗಳು ಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿತು. ಶಾಲೆಗಳು ತಕ್ಷಣವೇ ತುರ್ತು ಸಹಾಯವಾಣಿಯ ಮೂಲಕ ಪೊಲೀಸರಿಗೆ ಮಾಹಿತಿ ನೀಡಿತು. ನಂತರ ಭದ್ರತಾ ಪರಿಶೀಲನೆ ನಡೆಸಲು ಹಲವಾರು ತಂಡಗಳನ್ನು ಕಳುಹಿಸಲಾಯಿತು. “ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ವಿಧ್ವಂಸಕ ವಿರೋಧಿ ತಪಾಸಣಾ ತಂಡದ ಬಹು ತಂಡಗಳು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಶಾಲೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು” ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಸೇರಿದಂತೆ ಗೌತಮ್ ಬುದ್ಧ ನಗರದಾದ್ಯಂತ ಹಲವಾರು ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. “ನಾವು ಎಲ್ಲಾ ಶಾಲೆಗಳಲ್ಲಿ ಶೋಧ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ” ಎಂದು ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಭಯ್ ಕುಮಾರ್ ಮಿಶ್ರಾ ಹೇಳಿದರು.
ʼʼಪೊಲೀಸರು ಮೆಟ್ಟಿಲು ಮೂಲಕ ಎಳೆದೊಯ್ದರು, ಈಗಲೂ ಗೃಹ ಬಂಧನದಲ್ಲಿರಿಸಿದ್ದಾರೆʼʼ: ಧ್ರುವ್ ರಾಠಿ ಗಂಭೀರ ಆರೋಪ
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಉಂಟಾಗುವುದನ್ನು ತಡೆಯಲು, ಬೆದರಿಕೆ ಇಮೇಲ್‌ಗಳು ಬಂದಿರುವ ಶಾಲೆಗಳ ಬಗ್ಗೆ ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ, ಶಾಲೆಗಳ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ಕಡಿಮೆ ಮಾಡಲು ಮತ್ತು ಅನಗತ್ಯ ಆತಂಕವನ್ನು ತಪ್ಪಿಸಲು ತರಗತಿಗಳನ್ನು ಪುನರಾರಂಭಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ತನಿಖೆ ಮತ್ತು ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ, ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗದಂತೆ ಶಾಲೆಗಳಲ್ಲಿ ತರಗತಿಗಳನ್ನು ಪುನರಾರಂಭಿಸಲಾಗುತ್ತಿದೆ” ಎಂದು ಗ್ರೇಟರ್ ನೋಯ್ಡಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸಂತೋಷ್ ಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಆತಂಕ ಉಂಟಾಗುವುದನ್ನು ತಪ್ಪಿಸಲು, ಅಣಕು ಕಾರ್ಯಾಚರಣೆಗಳ ನೆಪದಲ್ಲಿ ಭದ್ರತಾ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿರುವ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಸ್ಥಳೀಯ ಪೊಲೀಸ್ ತಂಡಗಳು ಕಾರ್ಯಪ್ರವೃತ್ತವಾದವು. ಬಾಂಬ್ ನಿಷ್ಕ್ರಿಯ ದಳ, ಎಎಸ್‌ಸಿ ತಂಡ, ಶ್ವಾನದಳ ಮತ್ತು ಅಗ್ನಿಶಾಮಕ ದಳದ ಸಹಾಯದೊಂದಿಗೆ ಶಾಲೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಅಹಿತಕರ ಘಟನೆ ಬೆಳಕಿಗೆ ಬಂದಿಲ್ಲ. ನಿರಂತರವಾಗಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬೆದರಿಕೆ ಇಮೇಲ್‌ಗಳ ಕುರಿತು ಸೈಬರ್ ತಂಡವು ಅತ್ಯಂತ ಎಚ್ಚರಿಕೆಯಿಂದ ಮತ್ತು ಗಂಭೀರವಾಗಿ ತಾಂತ್ರಿಕ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಸಾರ್ವಜನಿಕರು ವದಂತಿಗಳಿಗೆ ಗಮನ ಕೊಡಬೇಡಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.