ಕೋಲ್ಕತಾ, ಡಿ. 22: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳ ಸಾಗಣೆ (cattle smuggling) ಪ್ರಯತ್ನವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾಗ ಗೊತ್ತಿಲ್ಲದೆ, ಬಾಂಗ್ಲಾದೇಶಕ್ಕೆ (Bangladesh) ದಾಟಿದ್ದ ಗಡಿ ಭದ್ರತಾ ಪಡೆಯ (BSF) ಕಾನ್‌ಸ್ಟೇಬಲ್ ಭಾನುವಾರ (ಡಿಸೆಂಬರ್ 21) ಮಧ್ಯಾಹ್ನ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಪಶ್ಚಿಮ ಬಂಗಾಳದ (West Bengal) ಕೂಚ್ ಬೆಹಾರ್ ಜಿಲ್ಲೆಯ ಗಡಿಯಲ್ಲಿ ಈ ಘಟನೆ ನಡೆದಿದೆ.
ಬಿಎಸ್‌ಎಫ್‌ನ 174ನೇ ಬೆಟಾಲಿಯನ್ ಕಾನ್‌ಸ್ಟೇಬಲ್ ವೇದ್ ಪ್ರಕಾಶ್ ಭಾನುವಾರ ಮುಂಜಾನೆ ದನ ಕಳ್ಳ ಸಾಗಣೆದಾರರ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದರು. ಬೆಳಗಿನ ಜಾವ ಗಡಿ ಪ್ರದೇಶದಲ್ಲಿ ದಟ್ಟವಾದ ಮಂಜು ಕವಿದಿದ್ದರಿಂದ ಗೊತ್ತಿಲ್ಲದೆ ಅವರು ಬಾಂಗ್ಲಾದೇಶ ಪ್ರವೇಶಿಸಿದ್ದರು. ಮಂಜಿನಿಂದ ಏನೂ ಕಾಣಿಸದೇ ಇದ್ದುದರಿಂದ ತಪ್ಪಾಗಿ ಗಡಿ ದಾಟುವಂತಾಯಿತು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಾನೊಬ್ಬ ಭಾರತೀಯ ಎಂಬುದನ್ನು ಮರೆ ಮಾಚಿದೆ; ಬಾಂಗ್ಲಾದಿಂದ ತಪ್ಪಿಸಿಕೊಂಡವರು ಹೇಳಿದ್ದೇನು?
ಈ ವೇಳೆ ಕಾನ್‌ಸ್ಟೇಬಲ್ ನಿಯಮಿತ ಗಸ್ತು ಮತ್ತು ಕಾರ್ಯಾಚರಣೆಯಲ್ಲಿದ್ದರು. ಈ ವೇಳೆ ಶಂಕಿತ ಕಳ್ಳ ಸಾಗಣೆದಾರರನ್ನು ಬೆನ್ನಟ್ಟುವಾಗ ತನ್ನ ತಂಡದಿಂದ ಬೇರ್ಪಟ್ಟರು. ಭಾರಿ ಮಂಜಿನಿಂದಾಗಿ, ಕಾನ್‌ಸ್ಟೇಬಲ್ ಅಜಾಗರೂಕತೆಯಿಂದ ಬಾಂಗ್ಲಾದೇಶದ ಪ್ರವೇಶಿಸಿದರು. ಎರಡೂ ಕಡೆಯ ಪಡೆಗಳು ತಕ್ಷಣವೇ ಸಂಪರ್ಕವನ್ನು ಸ್ಥಾಪಿಸಿದವು. ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಭಾನುವಾರ ಮಧ್ಯಾಹ್ನದ ವೇಳೆಗೆ ಅವರನ್ನು ಬಿಎಸ್‌ಎಫ್‌ಗೆ ಹಸ್ತಾಂತರಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಹರಣದ ಊಹಾಪೋಹವನ್ನು ತಳ್ಳಿಹಾಕಿದ ಬಿಎಸ್‌ಎಫ್ ಅಧಿಕಾರಿಗಳು, ಕಾನ್‌ಸ್ಟೇಬಲ್ ಅವರನ್ನು ಕಳ್ಳ ಸಾಗಣೆದಾರರು ಅಪಹರಿಸಿಲ್ಲ ಎಂದು ಹೇಳಿದರು. ಅವರು ಗಡಿ ದಾಟಿದ ಕೂಡಲೇ ಸ್ಥಳೀಯ ನಿವಾಸಿಗಳು ಅವರನ್ನು ಹಿಡಿದು ನಂತರ ಬಾಂಗ್ಲಾದೇಶದ ಗಡಿ ಕಾವಲು ಪಡೆಯಾದ ಬಿಜಿಬಿಗೆ ಹಸ್ತಾಂತರಿಸಿದರು ಎಂದು ಹೇಳಲಾಗಿದೆ. ಬಿಎಸ್ಎಫ್, ಬಾಂಗ್ಲಾದೇಶದ ರಕ್ಷಣಾ ಪಡೆಯೊಂದಿಗೆ ಸಮನ್ವಯ ಸಾಧಿಸಿ ಅವರ ಸುರಕ್ಷಿತ ವಾಪಸಾತಿಗಾಗಿ ಸಹಕರಿಸಿದರು.
ಘಟನೆಯ ನಂತರ, ಕೂಚ್ ಬೆಹಾರ್ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್ ಭದ್ರತೆಯನ್ನು ಹೆಚ್ಚಿಸಿದೆ. ಗಡಿಯಾಚೆಗಿನ ಅಪರಾಧಗಳನ್ನು ನಿಗ್ರಹಿಸಲು ದುರ್ಬಲ ಪ್ರದೇಶಗಳಲ್ಲಿ ಹೆಚ್ಚಿದ ಸಂಘಟಿತ ಗಸ್ತು, ಕಣ್ಗಾವಲು ಮತ್ತು ಹೆಚ್ಚಿನ ನಿಯೋಜನೆ ಸೇರಿದಂತೆ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧಿಗಳು ಮತ್ತು ದುಷ್ಕರ್ಮಿಗಳು ಮಂಜಿನ ವಾತಾವರಣದ ಲಾಭ ಪಡೆಯುವುದನ್ನು ತಡೆಯಲು ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಚಳಿಗಾಲದಲ್ಲಿ ಗಡಿಯಾಚೆಗಿನ ಚಲನೆ ಮತ್ತು ಕಳ್ಳಸಾಗಣೆ ಪ್ರಯತ್ನಗಳನ್ನು ತಡೆಯಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾನುವಾರು ಕಳ್ಳ ಸಾಗಣೆಯು ಭಾರತೀಯ–ಬಾಂಗ್ಲಾದೇಶ ಗಡಿಯಲ್ಲಿ ನಿರಂತರ ಸಮಸ್ಯೆಯಾಗಿ ಮುಂದುವರಿದಿದೆ. ವಿಶೇಷವಾಗಿ ಚಳಿಗಾಲದಲ್ಲಿ, ಮುಂಜಾನೆ ಮಂಜಿನ ಕಾರಣದಿಂದ ಕಡಿಮೆ ಗೋಚರತೆಯ ಲಾಭವನ್ನು ಕಳ್ಳರು ಬಳಸಿಕೊಳ್ಳುತ್ತಿದ್ದಾರೆ. 4,096 ಕಿ.ಮೀ. ಉದ್ದದ ಭಾರತ–ಬಾಂಗ್ಲಾದೇಶ ಗಡಿಯನ್ನು ರಕ್ಷಿಸುವ ಹೊಣೆಗಾರಿಕೆ ಹೊಂದಿರುವ ಬಿಎಸ್‌ಎಫ್, ಈ ಅವಧಿಯಲ್ಲಿ ಕಳ್ಳ ಸಾಗಣೆ ಮತ್ತು ಇತರ ಗಡಿಯಾಚೆಗಿನ ಅಪರಾಧಗಳನ್ನು ತಡೆಯಲು ನಿಯಮಿತವಾಗಿ ತೀವ್ರ ಕಾರ್ಯಾಚರಣೆಗಳನ್ನು ನಡೆಸುತ್ತದೆ.