ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Border Trade: ಭಾರತ- ಚೀನಾ ಗಡಿಯಲ್ಲಿ ಮತ್ತೆ ವ್ಯಾಪಾರ ಆರಂಭ?

India-China border: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಹದಗೆಟ್ಟ ಬಳಿಕ ಇದೀಗ ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಣೆಯತ್ತ ಹೆಜ್ಜೆ ಇಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದೇಶಗಳ ಮೇಲೆ ಭಾರಿ ತೆರಿಗೆ ವಿಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವಾಗಲೇ ಭಾರತ ಮತ್ತು ಚೀನಾ ತಮ್ಮ ಸಂಬಂಧ ಸುಧಾರಣೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ನವದೆಹಲಿ: ಭಾರತ ಮತ್ತು ಚೀನಾ ಗಡಿಯ (India-china border) ನಿರ್ದಿಷ್ಟ ಪ್ರದೇಶಗಳಲ್ಲಿ ವ್ಯಾಪಾರ (Border trade) ಪುನರಾರಂಭಿಸುವ ಚಿಂತನೆ ಪ್ರಾರಂಭವಾಗಿದೆ. 2020ರಿಂದ ಸ್ಥಗಿತಗೊಂಡಿರುವ ಸ್ಥಳೀಯವಾಗಿ ತಯಾರಿಸಿದ ಸರಕುಗಳ (Locally made goods) ಗಡಿ ವ್ಯಾಪಾರವನ್ನು ಮತ್ತೆ ಪ್ರಾರಂಭಿಸಲು ಎರಡೂ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಇದು ಪ್ರಾರಂಭವಾದರೆ ಐದು ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ಚೀನಾದ ಗಡಿಯಲ್ಲಿ ವ್ಯಾಪಾರ ವಹಿವಾಟುಗಳು ಪುನರಾರಂಭವಾಗಲಿದೆ. ಇದರಿಂದ ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಕಡಿಮೆಯಾಗಬಹುದು ಎನ್ನುತ್ತಾರೆ ಭಾರತೀಯ ಅಧಿಕಾರಿಗಳು.

ಭಾರತ ಮತ್ತು ಚೀನಾ ಸ್ಥಳೀಯವಾಗಿ ತಯಾರಿಸಿದ ಸರಕುಗಳ ಗಡಿ ವ್ಯಾಪಾರವನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಮೂಲಕ ಭಾರತ ಮತ್ತು ಚೀನಾ ದೀರ್ಘಕಾಲದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಹೆಜ್ಜೆಯನ್ನು ಇಡುತ್ತಿದೆ. ಈಗಾಗಲೇ ಗಡಿಯಲ್ಲಿ ಗೊತ್ತುಪಡಿಸಿದ ಸ್ಥಳಗಳ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಎರಡೂ ಕಡೆಯವರು ಪ್ರಸ್ತಾಪಿಸಿದ್ದಾರೆ ಮತ್ತು ಈ ವಿಷಯವು ಪ್ರಸ್ತುತ ಎರಡು ರಾಷ್ಟ್ರಗಳ ನಡುವೆ ಚರ್ಚೆಯಲ್ಲಿದೆ.

ಈ ಕುರಿತು ಭಾರತದೊಂದಿಗೆ ಮಾತುಕತೆಗೆ ಸಿದ್ದವಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ. ಚೀನಾ ಮತ್ತು ಭಾರತ ನಡುವಿನ ಗಡಿ ವ್ಯಾಪಾರವು ಎರಡೂ ದೇಶಗಳ ಗಡಿ ಭಾಗದ ಜನರ ಜೀವನವನ್ನು ಸುಧಾರಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಲಿದೆ ಎಂದು ಅದು ತಿಳಿಸಿದೆ. ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತ ಮತ್ತು ಚೀನಾದ ಗಡಿ ಭಾಗಗಳಲ್ಲಿ ಈ ಹಿಂದೆ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಮಸಾಲೆ ಪದಾರ್ಥಗಳು, ಕಾರ್ಪೆಟ್‌ಗಳು, ಮರದ ಪೀಠೋಪಕರಣಗಳು, ದನಗಳ ಮೇವು, ಕುಂಬಾರಿಕೆ, ಔಷಧೀಯ ಸಸ್ಯಗಳು, ವಿದ್ಯುತ್ ವಸ್ತುಗಳು ಮತ್ತು ಉಣ್ಣೆ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಒಟ್ಟು 3,488 ಕಿಲೋಮೀಟರ್ ವಿವಾದಿತ ಹಿಮಾಲಯನ್ ಗಡಿಯಲ್ಲಿ ಮೂರು ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಈ ವ್ಯಾಪಾರ ಮೌಲ್ಯ ಮಾತ್ರ ತೀರಾ ಕಡಿಮೆ ಇತ್ತು. ಕೋವಿಡ್-19 ಸಾಂಕ್ರಾಮಿಕದ ವೇಳೆ ಇದನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಗಡಿ ಸಂಘರ್ಷ ಪ್ರಾರಂಭವಾಗಿತ್ತು. ಹೀಗಾಗಿ ಮತ್ತೆ ಇದನ್ನು ಪ್ರಾರಂಭಿಸುವ ಗೋಜಿಗೆ ಭಾರತ ಹೋಗಿರಲಿಲ್ಲ.

ಕಳೆದ ವರ್ಷದಿಂದ ಎರಡು ನೆರೆಹೊರೆಯ ರಾಷ್ಟ್ರಗಳು ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೀಗ ಗಡಿಯಲ್ಲಿ ವ್ಯಾಪಾರ ವಹಿವಾಟು ಪುನರ್ ಆರಂಭವಾದರೆ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಸುಧಾರಣೆಯಾಗುವ ಭರವಸೆಯನ್ನು ನೀಡಲಿದೆ. ಚೀನಾ ಮತ್ತು ಭಾರತ ಮುಂದಿನ ತಿಂಗಳಿನಲ್ಲಿ ನೇರ ವಿಮಾನ ಸಂಪರ್ಕಗಳನ್ನು ಪುನರಾರಂಭಿಸಲಿವೆ . ಇದರೊಂದಿಗೆ ಬೀಜಿಂಗ್ ಭಾರತಕ್ಕೆ ಕೆಲವು ರಸಗೊಬ್ಬರ ಸಾಗಣೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಸ್ಲೈಸ್‌ ನಿಂದ ಎರಡನೇ UPI ಚಾಲಿತ ಬ್ಯಾಂಕ್‌ ಶಾಖೆ ಪ್ರಾರಂಭ

ಅಲ್ಲದೆ ಬೀಜಿಂಗ್ ನೇತೃತ್ವದ ಪ್ರಾದೇಶಿಕ ಭದ್ರತಾ ಗುಂಪಿನ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಚೀನಾಕ್ಕೆ ತೆರಳುವ ಸಾಧ್ಯತೆ ಇದೆ.

ವಿದ್ಯಾ ಇರ್ವತ್ತೂರು

View all posts by this author