ಡೆಹ್ರಾಡೂನ್, ಜು. 8: ಭಾರಿ ಪ್ರವಾಹಕ್ಕೆ 2018ರಲ್ಲಿ ಸೇತುವೆ ಕೊಚ್ಚಿಹೋಯಿತು (Bridge Washed Away). ಸ್ಥಳೀಯ ನಿವಾಸಿಗಳು ಎಷ್ಟೇ ಒತ್ತಾಯಿಸಿದರೂ ಸೇತುವೆ ಮರು ನಿರ್ಮಾಣ ಕಾರ್ಯ ಇದುವರೆಗೂ ನಡೆದಿಲ್ಲ. ಹೀಗಾಗಿ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಟ್ರಾಲಿಯನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಉತ್ತರಾಖಂಡದ (Uttarakhand) ಬಾಗೇಶ್ವರ ಜಿಲ್ಲೆಯ ಹಳ್ಳಿಯೊಂದರ ದುಸ್ಥಿತಿ. 100ಕ್ಕೂ ಹೆಚ್ಚು ಶಾಲಾ ಮಕ್ಕಳು ರಾಮಗಂಗಾ ನದಿಯನ್ನು ದಾಟಿ ನೆರೆಯ ಪಿಥೋರಗಢದ ಶಾಲೆ ತಲುಪಲು ಟ್ರಾಲಿಯನ್ನೇ ಅವಲಂಬಿಸಿದ್ದಾರೆ.
ಮಕ್ಕಳು ಇದೀಗ ತಮ್ಮ ಹಳ್ಳಿಗಳಿಂದ ನದಿಯ ದಡಕ್ಕೆ ಸುಮಾರು 2 ಕಿ.ಮೀ. ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ನಂತರ ಅವರ ಪೋಷಕರು ಟ್ರಾಲಿಯಲ್ಲಿ ನದಿಯನ್ನು ದಾಟಿಸುತ್ತಾರೆ ಎಂದು ನಾಚ್ನಿ ಪ್ರದೇಶದ ಸಮಾಜ ಸೇವಕ ಸುಂದರ್ ಸಿಂಗ್ ಬತ್ಯಾಲ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಟ್ರಾಲಿಯನ್ನು ಕೈಯಾರೆ ಎಳೆಯಬೇಕು. ಅದನ್ನು ನಿರ್ವಹಿಸಲು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಿಬ್ಬಂದಿಯನ್ನೂ ಸ್ಥಳದಲ್ಲಿ ನಿಯೋಜಿಸಿಲ್ಲ ಎಂದು ಬತ್ಯಾಲ್ ಹೇಳಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಟ್ರಾಲಿ ಸಂಬಂಧಿತ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ. ಇದು ಮಳೆಗಾಲದಲ್ಲಿ ನಿವಾಸಿಗಳ ಕಳವಳಕ್ಕೆ ಕಾರಣ.
ಚಳಿಗಾಲದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ನದಿಗೆ ಅಡ್ಡಲಾಗಿ ತಾತ್ಕಾಲಿಕ ಮರದ ಸೇತುವೆಯನ್ನು ನಿರ್ಮಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದರು. ಆದರೆ ಮಳೆಗಾಲದಲ್ಲಿ ಟ್ರಾಲಿಯನ್ನು ಅವಲಂಬಿಸಬೇಕಾಗುತ್ತದೆ. ಬಾಗೇಶ್ವರದಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರಾಂತೀಯ ವಿಭಾಗವು ಈ ಟ್ರಾಲಿಯನ್ನು ಸ್ಥಾಪಿಸಿದೆ.
ತಮ್ಮ ಇಬ್ಬರು ಮಕ್ಕಳು ನಾಚ್ನಿಯ ಜಿಐಸಿಯಲ್ಲಿ ವ್ಯಾಸಂಗ ಮಾಡುತ್ತಾರೆ. ಅವರು ಪ್ರತಿದಿನ ನದಿಯನ್ನು ದಾಟುತ್ತಾರೆ ಎಂದು ಬಾಗೇಶ್ವರ ಜಿಲ್ಲೆಯ ಭಕುನಾ ಗ್ರಾಮದ ನಿವಾಸಿ ದಿವಾನ್ ಸಿಂಗ್ ಕರ್ಕಿ ಹೇಳಿದ್ದಾರೆ. “ಮಾನ್ಸೂನ್ ಪ್ರಾರಂಭವಾಗಿ ನೀರಿನ ಮಟ್ಟ ಏರುತ್ತಿರುವಾಗ, ಅವರು ಒಂಟಿಯಾಗಿ ಪ್ರಯಾಣಿಸಲು ಭಯಪಡುತ್ತಿರುವುದರಿಂದ, ನಾವು ಅವರೊಂದಿಗೆ ನದಿಯ ದಡಕ್ಕೆ ಹೋಗಿ ಟ್ರಾಲಿಯನ್ನು ಹತ್ತಲು ಮತ್ತು ಇಳಿಯಲು ಸಹಾಯ ಮಾಡುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಜೀವ ಕೈಯಲ್ಲಿ ಹಿಡಿದು ನದಿ ದಾಟುವ ಮಕ್ಕಳು
ಮಳೆಗಾಲದಲ್ಲಿ ಟ್ರಾಲಿಯನ್ನು ಬಳಸುವುದು ನಿವಾಸಿಗಳಿಗೆ ವಾರ್ಷಿಕ ಕಠಿಣ ಪರೀಕ್ಷೆಯಿದ್ದಂತೆ ಎಂದು ಬಾಗೇಶ್ವರದ ಖೇತಿ ಗ್ರಾಮದ ಮೋಹನ್ ಸಿಂಗ್ ವಿವರಿಸಿದ್ದಾರೆ. ಪಿಥೋರಗಢದ ನಾಚ್ನಿಯಲ್ಲಿರುವ ಜ್ಞಾನದೀಪ್ ಪಬ್ಲಿಕ್ ಶಾಲೆಯಲ್ಲಿ ತಮ್ಮ ಪುತ್ರಿ ವ್ಯಾಸಂಗ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. “ನಾವು ಪ್ರತಿ ವರ್ಷ ನಮ್ಮ ಮಕ್ಕಳ ಸುರಕ್ಷತೆಯನ್ನು ಪಣಕ್ಕಿಡುತ್ತೇವೆ. 2018ರ ಪ್ರವಾಹದಲ್ಲಿ ಸೇತುವೆ ಕೊಚ್ಚಿ ಹೋಯಿತು. ಆ ಬಳಿಕ ಮತ್ತೆ ನಿರ್ಮಿಸಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಆ ಸ್ಥಳದಲ್ಲಿ 110 ಮೀಟರ್ ಉದ್ದದ ಸೇತುವೆಗಾಗಿ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಸ್ತಾವನೆಯು ಅನುಮೋದನೆಗಾಗಿ ಕಾಯುತ್ತಿದೆ. ಅನುಮೋದನೆ ಪಡೆದ ನಂತರ, ಸೇತುವೆಯ ನಿರ್ಮಾಣವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಬಾಗೇಶ್ವರದಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರಾಂತೀಯ ವಿಭಾಗದ ಎಂಜಿನಿಯರ್ ಕೃಷ್ಣ ಪಿಪ್ಲಿಯಾ ಹೇಳಿದರು.