ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾನುವಾರು ಕಳ್ಳಸಾಗಣೆದಾರರ ಗುಂಪನ್ನು ಬೆನ್ನಟ್ಟಿ ಹೋಗಿ ನದಿಯಲ್ಲಿ ಕೊಚ್ಚಿ ಹೋದ ಬಿಎಸ್‌ಎಫ್‌ ಸಿಬ್ಬಂದಿ; ಬಾಂಗ್ಲಾದೇಶ ಗಡಿಯಲ್ಲಿ ದುರಂತ: ಅಪಹರಣ ಶಂಕೆ

BSF jawan goes missing: ಜಾನುವಾರು ಕಳ್ಳಸಾಗಣೆದಾರರನ್ನು ಬೆನ್ನಟ್ಟಿ ಹೋದ ಬಿಎಸ್‌ಎಫ್‌ ಯೋಧರೊಬ್ಬರು ಬಾಂಗ್ಲಾದೇಶ ಗಡಿಯಲ್ಲಿನ ಬರಾಕ್‌ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ದಿಸ್‌ಪುರ, ನ. 23: ಅಸ್ಸಾಂನಲ್ಲಿ ಸೋಮವಾರ (ನವೆಂಬರ್‌ 23) ಹೃದಯವಿದ್ರಾವಕ ಘಟನೆ ನಡೆದಿದ್ದು, ಜಾನುವಾರು ಕಳ್ಳಸಾಗಣೆದಾರರನ್ನು (Cattle smugglers) ಬೆನ್ನಟ್ಟಿ ಹೋದ ಬಿಎಸ್‌ಎಫ್‌ ಯೋಧರೊಬ್ಬರು ಬಾಂಗ್ಲಾದೇಶ ಗಡಿಯಲ್ಲಿನ ಬರಾಕ್‌ ನದಿಯಲ್ಲಿ ಕೊಚ್ಚಿ ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ (BSF jawan goes missing). ಸ್ಮಗ್ಲರ್‌ ಜತೆ ಈ ಯೋಧ ಕೂಡ ನದಿಗೆ ಇಳಿದಿದ್ದು, ಬಳಿಕ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಕಚಾರ್ ಕಟಿಗೋರಾ ಪ್ರದೇಶದಲ್ಲಿರುವ ಹರಿನಗರ ಬಾರ್ಡರ್ ಔಟ್‌ಪೋಸ್ಟ್ (BOP) ಬಳಿ ಈ ಘಟನೆ ಸಂಭವಿಸಿದೆ. ಇಲ್ಲಿ ನಾಲ್ಕರಿಂದ ಐವರು ಶಂಕಿತ ಜಾನುವಾರು ಕಳ್ಳಸಾಗಣೆದಾರರಿದ್ದಾರೆ ಎನ್ನುವ ಬಗ್ಗೆ ಬಿಎಸ್‌ಎಫ್ ಸಿಬ್ಬಂದಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಬಿಎಸ್‌ಎಫ್‌ ಸಿಬ್ಬಂದಿ ನಾಪತ್ತೆ:



ಹೆಡ್‌ ಕಾನ್ಸ್‌ಟೇಬಲ್‌ ಜಿತೇಂದ್ರ ಯಾದವ್‌ ಮತ್ತು ಕಾನ್ಸ್‌ಟೇಬಲ್‌ ಕೆ. ವೇಣು ಅವರನ್ನು ಕಾರ್ಯಾಚರಣೆಗೆ ನೇಮಿಸಲಾಯಿತು. ಇವರು ಬೆನ್ನಟ್ಟಿದಾಗ ಶಂಕಿತ ಸ್ಮಗ್ಲರ್‌ಗಳು ಬರಾಕ್‌ ನದಿಗೆ ಹಾರಿದರು. ಅವರನ್ನು ಹಿಡಿಯಲು ಇಬ್ಬರು ಬಿಎಸ್‌ಎಫ್‌ ಸಿಬ್ಬಂದಿಯೂ ಧುಮುಕಿದರು. ಈ ಪೈಕಿ ಜಿತೇಂದ್ರ ಯಾದವ್‌ ಹಿಂದಿರುಗಿದರೆ ವೇಣು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದಾದ ಬಳಿಕ ಅವರು ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ.

ಗಡಿ ಬೇಲಿಯ ಸಂಪೂರ್ಣ ನಿಯಂತ್ರಣ ಬಿಎಸ್‌ಎಫ್‌ಗೆ: ಮೊದಲ ಸಂಪುಟ ಸಭೆಯಲ್ಲೇ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಘೋಷಣೆ

ಆಂಧ್ರ ಪ್ರದೇಶ ಮೂಲದ ವೇಣು

ನಾಪತ್ತೆಯಾಗಿರುವ ವೇಣು ಆಂಧ್ರ ಪ್ರದೇಶ ಮೂಲದವರು. ಸದ್ಯ ಅವರ ಪತ್ತೆಗೆ ಎಸ್‌ಡಿಆರ್‌ಎಫ್‌ ಧಾವಿಸಿದ್ದು, ನದಿ ಉದ್ದಕ್ಕೂ ಪರಿಶೀಲನೆ ನಡೆಸಿದೆ. ಬಿಎಸ್‌ಎಫ್‌ ಸಿಬ್ಬಂದಿ ಮತ್ತು ಕಟಿಗೋರ ಪೊಲೀಸರು ಈ ಹುಡುಕಾಟಕ್ಕೆ ಕೈಜೋಡಿಸಿದ್ದಾರೆ.

ಘಟನೆ ಬಗ್ಗೆ ಅಧಿಕಾರಿಗಳು ವಿವರಿಸಿ, ʼʼಹರಿನಗರ ಗಡಿ ಪ್ರದೇಶದ ಮೂಲಕ ನಾಲ್ಕರಿಂದ ಐವರು ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಶಂಕಿತ ಕಳ್ಳಸಾಗಣೆದಾರರನ್ನು ತಡೆಯಲು ಇಬ್ಬರು ಸಿಬ್ಬಂದಿ ಮುಂದಾದರು. ಆರೋಪಿಗಳನ್ನು ಪ್ರಶ್ನಿಸಿದಾಗ ಅವರು ನದಿಗೆ ಹಾರಿದರು. ಅವರನ್ನು ಬೆನ್ನಟ್ಟಿ ಇಬ್ಬರು ಬಿಎಸ್‌ಎಫ್‌ ಸಿಬ್ಬಂದಿಯೂ ನೀರಿಗೆ ಇಳಿದರುʼʼ ಎಂದಿದ್ದಾರೆ.

ಬಾಂಗ್ಲಾದೇಶದ ಅಪರಿಚಿತ ವ್ಯಕ್ತಿಗಳು ಬಿಎಸ್‌ಎಫ್‌ ಸಿಬ್ಬಂದಿ ವೇಣು ಅವರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಬಿಎಸ್‌ಎಫ್ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.

ಬಾಂಗ್ಲಾದೇಶದ ಕಿತಾಪತಿ

ಈ ವರ್ಷದ ಜನವರಿಯಲ್ಲಿ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಗಡಿಯ ಜೀರೋ ಪಾಯಿಂಟ್‌ನಿಂದ ಭಾರತೀಯ ರೈತರೊಬ್ಬರನ್ನು ಬಾಂಗ್ಲಾದೇಶೀಯರ ಗುಂಪೊಂದು ಅಪಹರಿಸಿತ್ತು. ಎರಡೂ ಕಡೆಯ ಅಧಿಕಾರಿಗಳ ನಡುವೆ ನಡೆದ ಮಾತುಕತೆಯ ನಂತರ 65 ವರ್ಷದ ರಂಜಿತ್ ದಾಸ್ ಅವರನ್ನು ಸುಮಾರು 12 ಗಂಟೆಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.

ಆಕಸ್ಮಿಕ ಗಡಿ ದಾಟಿದ ಬಿಎಸ್‌ಎಫ್‌ ಯೋಧನ ಬಿಡುಗಡೆ ಮಾಡಿದ ಪಾಕ್‌

ಅಲ್ಲದೆ ನವೆಂಬರ್ 17ರಂದು ಮೇಘಾಲಯದ ಸಿಲ್ಹೆಟ್ ಜಿಲ್ಲೆಯಲ್ಲಿರುವ ಗಡಿಯ ಮೂಲಕ ಆಕಸ್ಮಿಕವಾಗಿ ಬಿಎಸ್‌ಎಫ್ ಯೋಧರೊಬ್ಬರು ತಮ್ಮ ಸೇವಾ ಶಸ್ತ್ರಾಸ್ತ್ರ ಮತ್ತು ಸಂವಹನ ಉಪಕರಣಗಳೊಂದಿಗೆ ಬಾಂಗ್ಲಾದೇಶದೊಳಗೆ ಪ್ರವೇಶಿಸಿದ್ದರು. ಈ ಯೋಧನನ್ನು ಬಾಂಗ್ಲಾದೇಶ ಗಡಿ ರಕ್ಷಕ ಪಡೆ (BGB) ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರ ಬಂದಿಲ್ಲ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author