ಗಡಿ ಬೇಲಿಯ ಸಂಪೂರ್ಣ ನಿಯಂತ್ರಣ ಬಿಎಸ್‌ಎಫ್‌ಗೆ: ಮೊದಲ ಸಂಪುಟ ಸಭೆಯಲ್ಲೇ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಘೋಷಣೆ
ಅಧಿಕಾರಕ್ಕೆ ಬಂದ ಮೇಲೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಪ್ರಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಗಡಿ ಭದ್ರತೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಗಡಿ ಬೇಲಿಯ ಸಂಪೂರ್ಣ ನಿಯಂತ್ರಣವನ್ನು ಬಿಎಸ್‌ಎಫ್‌ಗೆ ವಹಿಸುವುದಾಗಿ ಘೋಷಣೆ ಮಾಡಿರುವ ಅವರು, 45 ದಿನಗಳಲ್ಲಿ ಇದನ್ನು ಜಾರಿಗೆಗೊಳಿಸುವುದಾಗಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಭಾರತ ಮತ್ತು ಬಾಂಗ್ಲಾದೇಶದ ಗಡಿ ಭದ್ರತೆಯನ್ನು (Bangladesh border ) ಸಂಪೂರ್ಣವಾಗಿ ಗಡಿ ಭದ್ರತಾ ಪಡೆಗೆ (Border Security Force) ವಹಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ (CM Suvendu Adhikari) ಘೋಷಿಸಿದರು. ಸೋಮವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ (Cabinet meet) ಅವರು ಈ ಘೋಷಣೆ ಮಾಡಿದ್ದು 45 ದಿನಗಳಲ್ಲಿ ಇದನ್ನು ಜಾರಿಗೆಗೊಳಿಸುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಸಂಪೂರ್ಣ ಅನುಷ್ಠಾನಗೊಳಿಸುವುದಾಗಿ ಹೇಳಿದರು. ಈ ಮೂಲಕ ಅವರು ಚುನಾವಣೆ ಪೂರ್ವ ನೀಡಿರುವ ಭರವಸೆಯನ್ನು ಈಡೇರಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ವಿಧಾನ ಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ನಾಯಕ ಸುವೇಂದು ಅಧಿಕಾರಿ ರಾಜ್ಯ ಸಚಿವಾಲಯ ನಬನ್ನಾದಲ್ಲಿ ನಡೆದ ತಮ್ಮ ಮೊದಲ ಸಂಪುಟ ಸಭೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗದಲ್ಲಿ ಬೇಲಿ ಹಾಕುವುದನ್ನು ಪೂರ್ಣಗೊಳಿಸಲು ಬಿಎಸ್‌ಎಫ್‌ಗೆ ಭೂ ವರ್ಗಾವಣೆ ಪ್ರಕ್ರಿಯೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ಹಾಕಲು ಅಗತ್ಯವಿರುವ ಭೂಮಿಯ ಸಂಪೂರ್ಣ ನಿಯಂತ್ರಣವನ್ನು ಬಿಎಸ್‌ಎಫ್ ಪಡೆಯಲಿದೆ. ಇದಕ್ಕಾಗಿ ಗಡಿ ಭದ್ರತಾ ಪಡೆಗೆ ಸೋಮವಾರದಿಂದಲೇ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯು ಪ್ರಾರಂಭವಾಗಲಿದೆ ಎಂದು ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ಮೊದಲ ಸಚಿವ ಸಂಪುಟ ಸಭೆಯಲ್ಲೇ ನಾವು ಭೂಮಿಯನ್ನು ಬಿಎಸ್‌ಎಫ್‌ಗೆ ವರ್ಗಾಯಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದು ಸೋಮವಾರದಿಂದಲೇ ಪ್ರಾರಂಭವಾಗಿ ಮುಂದಿನ 45 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಇದರ ಬಳಿಕ ಬಿಎಸ್‌ಎಫ್ ಗಡಿ ಬೇಲಿಯನ್ನು ಪೂರ್ಣಗೊಳಿಸಲಿದೆ. ಇದರಿಂದ ಅಕ್ರಮ ಒಳನುಸುಳುವಿಕೆಯ ಸಮಸ್ಯೆಯನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹರಿಸಲಾಗುತ್ತದೆ ಎಂದರು.
ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಬಿಜೆಪಿ ಇದೇ ವಿಷಯವನ್ನು ಪ್ರಚಾರಕ್ಕಾಗಿ ಬಳಸಿಕೊಂಡಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಗಡಿ ಬೇಲಿಗೆ ಅಗತ್ಯವಿರುವ ಎಲ್ಲಾ ಭೂಮಿಯನ್ನು 45 ದಿನಗಳಲ್ಲಿ ಬಿಎಸ್‌ಎಫ್‌ಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದ್ದರು.
ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ 4,097 ಕಿ.ಮೀ. ಗಡಿಯನ್ನು ಹಂಚಿಕೊಂಡಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ ಈಗಾಗಲೇ ಸುಮಾರು 3,240 ಕಿ.ಮೀ. ಬೇಲಿ ಹಾಕಲಾಗಿದೆ. ಇನ್ನು 175 ಕಿ.ಮೀ. ಕಠಿಣ ಭೂಪ್ರದೇಶ ಸೇರಿದಂತೆ ಸುಮಾರು 850 ಕಿ.ಮೀ. ಬೇಲಿ ಹಾಕುವ ಯೋಜನೆ ಬಾಕಿ ಇದೆ. ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರ ಭೂಮಿ ಹಸ್ತಾಂತರಿಸುವಲ್ಲಿ ವಿಳಂಬ ಮಾಡಿದ್ದರಿಂದ ಬೇಲಿ ಹಾಕುವ ಪ್ರಕ್ರಿಯೆ ನಿಧಾನವಾಯಿತು ಎಂದು ಬಿಜೆಪಿ ಆರೋಪಿಸಿದೆ. ಆದರೆ ಬೇಲಿ ಹಾಕುವ ಮೊದಲು ಸ್ಥಳೀಯ ಭೂಮಿ ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಟಿಎಂಸಿ ಹೇಳಿದೆ.
ಮೊದಲ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಲ್ಲಿ ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಮತ್ತು ಇತರ ಬಾಕಿ ಇರುವ ಕೇಂದ್ರ ಯೋಜನೆಗಳ ಅನುಷ್ಠಾನ, ಪ್ರಧಾನ ಮಂತ್ರಿ ಉಜ್ವಲ ಯೋಜನೆ 3.0 ಸೇರಿದಂತೆ ಹಲವು ಕಲ್ಯಾಣ ಯೋಜನೆಗಳ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಕ್ರಮ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ಅಧಿಕಾರಿ ಘೋಷಿಸಿದರು.
ಜನಗಣತಿ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಹೇಳಿದ ಅಧಿಕಾರಿ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಹಿಂಸಾಚಾರದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ 321 ಬಿಜೆಪಿ ಕಾರ್ಯಕರ್ತರ ಕುಟುಂಬಗಳ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವುದಾಗಿ ಹೇಳಿದರು.