ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದ ಬಿಲ್ಡರ್; ಆತನನ್ನು ರಕ್ಷಿಸಲು ಹಾರಿದ ಐವರು: ಕೊನೆಗೆ ಆರು ಮಂದಿಯೂ ಸಾವು!

ನಿರ್ಮಾಣ ಹಂತದ ಸೆಪ್ಟಿಕ್ ಟ್ಯಾಂಕ್ ಒಳಗೆ ಉಸಿರುಗಟ್ಟಿ ಆರು ಮಂದಿ ಮೃತಪಟ್ಟ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟಿಕ್ ಟ್ಯಾಂಕ್ ಒಳಗೆ ಬಿಲ್ಡರ್ ಬಿದ್ದಿದ್ದು, ಆತನನ್ನು ರಕ್ಷಿಸಲು ಐವರು ಹಾರಿದ್ದಾರೆ. ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದ ಎಲ್ಲರನ್ನೂ ಕೂಡಲೇ ಮದನ್‌ಪುರ ರಾಂಪುರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಪ್ರಯೋಜನವಾಗಲಿಲ್ಲ.

ಸಾಂದರ್ಭಿಕ ಚಿತ್ರ

ಭುವನೇಶ್ವರ, ಮೇ 26: ನಿರ್ಮಾಣ ಹಂತದ ಸೆಪ್ಟಿಕ್ ಟ್ಯಾಂಕ್ (Septic Tank) ಒಳಗೆ ಉಸಿರುಗಟ್ಟಿ ಆರು ಮಂದಿ ಮೃತಪಟ್ಟ ಘಟನೆ ಒಡಿಶಾದ (Odisha) ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ. ಆರಂಭದಲ್ಲಿ ಸೆಪ್ಟಿಕ್ ಟ್ಯಾಂಕ್ ಒಳಗೆ ಬಿಲ್ಡರ್ ಬಿದ್ದಿದ್ದು, ಆತನನ್ನು ರಕ್ಷಿಸಲು ಐವರು ಹಾರಿದ್ದಾರೆ. ಮದನ್‌ಪುರ-ರಾಂಪುರ ಪೊಲೀಸ್ ಠಾಣೆ ಪ್ರದೇಶದ ಗೌಡ ಕಾರ್ಲಖುಂಟ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಓರ್ವ ಅಸ್ವಸ್ಥನಾಗಿದ್ದಾನೆ ಎಂದು ತಿಳಿದು ಬಂದಿದೆ. ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದ ಎಲ್ಲರನ್ನೂ ಮದನ್‌ಪುರ ರಾಂಪುರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆರು ಜನರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮೃತರು ಮೂವರು ಮೇಸ್ತ್ರಿಗಳು, ಒಬ್ಬ ಕಾರ್ಮಿಕ, ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವವರು ಮತ್ತು ಅವರ ಮಗ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಮಾಣ ಸಂಬಂಧಿತ ಕೆಲಸಕ್ಕಾಗಿ ಸೆಪ್ಟಿಕ್ ಟ್ಯಾಂಕ್‌ನ ಒಂದು ಭಾಗವನ್ನು ತೆರೆದಾಗ ಈ ಘಟನೆ ಸಂಭವಿಸಿದ್ದು, ಬಿಲ್ಡರ್ ಆಕಸ್ಮಿಕವಾಗಿ ಒಳಗೆ ಬಿದ್ದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವರನ್ನು ರಕ್ಷಿಸಲು, ಇತರರು ಟ್ಯಾಂಕ್‌ಗೆ ಧುಮುಕಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ನಿಮಾಯ್ ಪಾಲ್ (48) ಮತ್ತು ಅವರ ಪುತ್ರ ಆಕಾಶ್ ಪಾಲ್ (28), ಅಡಲ್ ಮಾಝಿ (55), ಮನೋರಂಜನ್ ಹತಿ (27), ಛಂದ ಜಲ್ (32) ಮತ್ತು ಬಿಪುಲ್ ಜಾಲ್ (30) ಎಂದು ಗುರುತಿಸಲಾಗಿದೆ. 32 ವರ್ಷದ ಪಂಕಜ್ ಯಾನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಕ್ರೇನ್ ಡ್ರೋನ್ ದಾಳಿಗೆ ರಷ್ಯಾದಲ್ಲಿ ಒಡಿಶಾ ವ್ಯಕ್ತಿ ಸಾವು

ಇನ್ನು, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರುಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ. ʼʼಕಳಹಂಡಿ ಜಿಲ್ಲೆಯ ಮದನಪುರ-ರಾಂಪುರದ ನಿರ್ಮಾಣ ಸ್ಥಳದಲ್ಲಿ ಆರು ಮಂದಿ ಬಲಿಯಾಗಿರುವ ಘಟನೆ ತಿಳಿದು ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿʼʼ ಎಂದು ಸಿಎಂ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರುಪಾಯಿ ಪರಿಹಾರವನ್ನು ಅವರು ಘೋಷಿಸಿದ್ದಾರೆ.

ಮೃತರ ಅಂತ್ಯಕ್ರಿಯೆಗಾಗಿ ಜಿಲ್ಲಾಡಳಿತವು ತಲಾ 30,000 ರುಪಾಯಿ ಬಿಡುಗಡೆ ಮಾಡಿದೆ ಎಂದು ಕಲಾಹಂಡಿ ಜಿಲ್ಲಾಧಿಕಾರಿ ಸಚಿನ್ ಪಾವರ್ ತಿಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವ ಪೃಥಿವಿರಾಜ್ ಹರಿಚಂದನ್ ಹೇಳಿದ್ದಾರೆ. ಸಾವಿಗೆ ನಿಜವಾದ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.