ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajasthan Fire Tragedy: ರಾಜಸ್ಥಾನದಲ್ಲಿ ಬಸ್‌ ಬೆಂಕಿಗೆ ಆಹುತಿ; 19 ಮಂದಿ ಸಾವು?

ರಾಜಸ್ಥಾನದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರ (ಅ. 14) ಜೈಸಲ್ಮೇರ್​​ನಿಂದ ಜೋಧ್‌ಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ

ರಾಜಸ್ಥಾನದಲ್ಲಿ ಬೆಂಕಿಗೆ ಆಹುತಿಯಾದ ಬಸ್‌

-

Ramesh B Ramesh B Oct 14, 2025 8:54 PM

ಜೈಪುರ, ಅ. 14: ರಾಜಸ್ಥಾನದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ವರದಿಯೊಂದರೆ ಪ್ರಕಾರ 19 ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ (ಅ. 14) ಜೈಸಲ್ಮೇರ್​​ನಿಂದ ಜೋಧ್‌ಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ (Rajasthan Fire Tragedy). ಬಸ್‌ ಜೈಸಲ್ಮೇರ್​​ನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಥೈಯಾಟ್‌ ಗ್ರಾಮಕ್ಕೆ ತಲುಪಿದಾಗ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಬಸ್‌ ಅಪರಾಹ್ನ ಸುಮಾರು 3 ಗಂಟೆಗೆ ಜೈಸಲ್ಮೇರ್​​ನಿಂದ ಜೋಧ್‌ಪುರಕ್ಕೆ ಹೊರಟಿತು. ಈ ವೇಳೆ ಬಸ್‌ನಲ್ಲಿ 57 ಪ್ರಯಾಣಿಕರಿದ್ದರು. ಥೈಯಾಟ್‌ ಗ್ರಾಮಕ್ಕೆ ಬಸ್‌ ತಲುಪುತ್ತಿದ್ದಂತೆ ಬಸ್‌ನ ಹಿಂಭಾಗದಿಂದ ಹೊಗೆ ಬರುತ್ತಿರುವುದನ್ನು ಕೆಲವರು ಗಮನಿಸಿದರು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಇಡೀ ಬಸ್‌ಗೆ ಬೆಂಕಿ ವ್ಯಾಪಿಸಿತು.

ಗಾಬರಿಗೊಂಡ ಹಲವು ಪ್ರಯಾಣಿಕರು ಕಿಟಿಕಿ ಮತ್ತು ಬಸ್‌ನಿಂದ ಹೊರಗೆ ಜಿಗಿಯಲು ಆರಂಭಿಸಿದರು. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೂಡಲೇ ನೆರವಿಗೆ ಧಾವಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸುವ ಮೊದಲೇ ಕಾರ್ಯಾಚರಣೆ ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದಲ್ಲಿ ನಡೆದ ಬೆಂಕಿ ಅವಘಡ:



ಈ ಸುದ್ದಿಯನ್ನೂ ಓದಿ: Viral Video: ಶೋ ರೂಂ ಹೊರಗೇ ನಿಂತು ಓಲಾ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ; ಅಷ್ಟಕ್ಕೂ ಆಗಿದ್ದೇನು?

ಘಟನೆಯಲ್ಲಿ ಸುಮಾರು 15 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಜೈಸಲ್ಮೇರ್​​ನ ಜವಹಾರ್‌ ಆಸ್ಪತ್ರೆಗೆ ಆಂಬುಲೆನ್ಸ್‌ ಮೂಲಕ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸುಟ್ಟ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋಧಾಪುರಕ್ಕೆ ಸಾಗಿಸಲಾಗಿದೆ. ಯೋಧರು ಕೂಡ ಘಟನೆಯ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.



ಅಗ್ನಿ ಶಾಮಕ ದಳದ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಿಲಾಗಿದ್ದು, ಬಸ್‌ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ಶಾರ್ಟ್‌ ಸರ್ಕ್ಯೂಟ್‌ನಿಂದ ಅಥವಾ ಎಂಜಿನ್‌ ಅತಿಯಾಗಿ ಬಿಸಿಯಾದ ಬಳಿಕ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದರು. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.



ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘಟನೆಯ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, "ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ತಿಳಿದು ದುಃಖವಾಗಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂಬುದಾಗಿ ಬರೆದುಕೊಂಡಿದ್ದಾರೆ.

ದುರಂತದ ಭೀಕರ ಚಿತ್ರಣ:



ಪೋಖ್ರಾನ್ ಶಾಸಕ ಮಹಾಂತ್ ಪ್ರತಾಪ್ ಪುರಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಅಪಘಾತ ಸ್ಥಳ ಮತ್ತು ಜವಾಹರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಪ್ರಯಾಣಿಕರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡುವುದಾಗಿ ಘೋಷಿಸಿದರು.