ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಮಹತ್ತರ ಬದಲಾವಣೆ; ಬುಕಿಂಗ್ ಅಂತರ 25 ದಿನಗಳಿಗೆ ಏರಿಕೆ
ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬುಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ. ಅದೇ ರೀತಿ ಕೇಂದ್ರ ಸರ್ಕಾರವು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸಂಸ್ಕರಣಾಗಾರಗಳಿಗೆ ಆದೇಶಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಮಾ. 9: ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿದ್ದು, ದೇಶದಲ್ಲಿ ಅಡುಗೆ ಅನಿಲ, ಇಂಧನ ಪೂರೈಕೆಗೆ ಅಡಚಣೆ ಎದುರಾಗುವ ಭೀತಿ ಮೂಡಿದೆ. ಈ ಮಧ್ಯೆ ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬುಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ (LPG Cylinder booking gap). ಅದೇ ರೀತಿ ಸರ್ಕಾರವು ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸಂಸ್ಕರಣಾಗಾರಗಳಿಗೆ ಆದೇಶಿಸಿದೆ. ಸಂಘರ್ಷದ ಭೀತಿಯ ಹಿನ್ನೆಲೆಯಲ್ಲಿ ಕೆಲವು ಗ್ರಾಹಕರು ಸಾಮಾನ್ಯಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಅಡುಗೆ ಅನಿಲಗಳ ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಿಜವಾದ ಗೃಹ ಬಳಕೆದಾರರಿಗೆ ಅನಿಯಂತ್ರಿತ ಪೂರೈಕೆಯನ್ನು ಮುಂದುವರಿಸುವ ಉದ್ದೇಶದಿಂದ ಈ ನಿಯಮ ಪರಿಚಯಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
"ಈ ಹಿಂದೆ 55 ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡುತ್ತಿದ್ದ ಗ್ರಾಹಕರು ಇದೀಗ 15 ದಿನಗಳಿಗೆ ಬೇಡಿಕೆ ಇಡುತ್ತಿದ್ದಾರೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈಗ ಸಿಲಿಂಡರ್ ಬುಕ್ ಮಾಡಿದ ನಂತರ, ನೀವು ಎರಡನೆಯ ಸಿಲಂಡರ್‌ಗಾಗಿ ಕನಿಷ್ಠ 25 ದಿನಗಳು ಕಾಯಬೇಕಾಗುತ್ತದೆ.
ಕೇಂದ್ರದ ಸೂಚನೆ:
Govt Sources say -
— ANI (@ANI) March 9, 2026
On LPG:
*In order to stop hoarding and black marketing, LPG booking period has been increased from 21 to 25 days
*There were instances where people who were earlier booking LPG cylinders in 55 Days has started booking LPG cylinders in 15 days.
*Govt has… pic.twitter.com/NMaEJTqADy
ಉತ್ಪಾದನೆ ಹೆಚ್ಚಿಸಲು ಸೂಚನೆ
ಬುಕಿಂಗ್ ನಿಯಮಗಳನ್ನು ಬಿಗಿಗೊಳಿಸುವುದರ ಜತೆಗೆ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಸಂಸ್ಕರಣಾಗಾರಗಳಿಗೆ ನಿರ್ದೇಶನ ನೀಡಿದೆ. ʼʼದೇಶೀಯ ಗ್ರಾಹಕರೇ ಪ್ರಮುಖ ಆದ್ಯತೆʼʼ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಡುಗೆ ಉದ್ದೇಶಗಳಿಗಾಗಿ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ವಾಣಿಜ್ಯ ಸಂಪರ್ಕಗಳಿಗಿಂತ ಗೃಹ ಬಳಕೆಯ ಎಲ್‌ಪಿಜಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ತೈಲ ಕಂಪನಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ, ನಾರ್ವೆ ಮುಂತಾದ ದೇಶಗಳು ಭಾರತಕ್ಕೆ ಎಲ್‌ಪಿಜಿ ಮಾರಾಟ ಮಾಡಲು ಮುಂದೆ ಬಂದಿವೆ ಎಂದು ಕೇಂದ್ರ ಹೇಳಿದೆ.
ಇರಾನ್ ಇಸ್ರೇಲ್ ಯುದ್ಧ ಎಫೆಕ್ಟ್: ಅಡುಗೆ ಎಣ್ಣೆ ಬೆಲೆ ತೀವ್ರ ಏರಿಕೆ
ಇಂಧನ ಬೆಲೆ ಏರಿಕೆ ಸದ್ಯಕ್ಕಿಲ್ಲ
ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರದ ಹೊರತು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಕ್ಷಣದ ಏರಿಕೆಯನ್ನು ಕಾಣುವ ಸಾಧ್ಯತೆಯಿಲ್ಲ ಎಂದು ಮೂಲಗಳು ಹೇಳಿವೆ. ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಸದ್ಯ ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಪುನರುಚ್ಚರಿಸಿವೆ. ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 130 ಡಾಲರ್ ತಲುಪುವವರೆಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿಲ್ಲ. ಭಾರತದಲ್ಲಿ ಮುಂದಿನ 6-8 ವಾರಗಳಿಗೆ ಸಾಕಾಗುವಷ್ಟು ಸ್ಟಾಕ್ ಇರುವುದರಿಂದ ಇಂಧನ ಬೆಲೆಗಳು ಹೆಚ್ಚಾಗುವುದಿಲ್ಲ ಎನ್ನಲಾಗಿದೆ.
ಭಯ ಪಡಬೇಕಾಗಿಲ್ಲ
ಎಲ್‌ಪಿಜಿ ಮರುಪೂರಣದ ಬುಕಿಂಗ್ ಅವಧಿ ಕನಿಷ್ಠ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿರುವುದು ಕಾಳಸಂತೆಯನ್ನು ತಡೆಗಟ್ಟುವ ಉದ್ದೇಶವೇ ಹೊರತು ಕೊರತೆಯಿಂದಲ್ಲ. ಗ್ರಾಹಕರು ಭಯ ಪಡಬೇಕಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.