ನವದೆಹಲಿ, ಅ. 6: ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಾದ್ಯಂತ ಐದು ವಿಧಾನಸಭಾ ಸ್ಥಾನಗಳು ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಮಂಗಳವಾರ (ಅಕ್ಟೋಬರ್ 6) ಉಪಚುನಾವಣೆ (By polls) ನಡೆಸುತ್ತಿದ್ದು, ಅಕ್ಟೋಬರ್ 9ರಂದು ಮತ ಎಣಿಕೆ ನಡೆಯಲಿದೆ. ತಮಿಳುನಾಡಿನ ಮಧುರಾಂತಕಂ ಮತ್ತು ಧಾರಾಪುರಂ, ಪುದುಚೇರಿಯ ಥಟ್ಟಂಚವಾಡಿ, ಪಶ್ಚಿಮ ಬಂಗಾಳದ (West Bengal) ರೆಜಿನಗರ ಮತ್ತು ನಂದಿಗ್ರಾಮ್ ಮತ್ತು ಅಸ್ಸಾಂನ ನಾಗಾನ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ನಡುವಿನ ಭಿನ್ನಾಭಿಪ್ರಾಯಗಳ ವರದಿಗಳ ನಂತರ ಚುನಾವಣಾ ಆಯೋಗದ ನತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಈ ವಿಷಯವು ಸುಪ್ರೀಂ ಕೋರ್ಟ್‌ಗೂ ತಲುಪಿದ್ದು, ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ವಿಜಯ್‌ಗೆ ಮೊದಲ ಪ್ರಮುಖ ಚುನಾವಣಾ ಪರೀಕ್ಷೆ
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಅವರ ತಮಿಳಗ ವೆಟ್ರಿ ಕಳಗಂ (TVK)ಗೆ ಮೊದಲ ಪ್ರಮುಖ ಚುನಾವಣಾ ಪರೀಕ್ಷೆಯಾಗಿ ಮಧುರಾಂಟಕಂ ಮತ್ತು ಧಾರಾಪುರಂ ಉಪಚುನಾವಣೆ ಎದುರಾಗಿದ್ದು. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಎಐಎಡಿಎಂಕೆ ಶಾಸಕರಾದ ಮರಗತಮ್ ಕುಮಾರವೇಲ್ ಮತ್ತು ಪಿ. ಸತ್ಯಭಾಮ ರಾಜೀನಾಮೆ ನೀಡಿ ನಂತರ ಟಿವಿಕೆ ಸೇರಿದ ನಂತರ ಎರಡೂ ಸ್ಥಾನಗಳು ಖಾಲಿಯಾಗಿವೆ.
ಡಿಎಂಕೆ, ಎಐಎಡಿಎಂಕೆ ಮತ್ತು ಸಿಪಿಐ ಕೂಡ ಸ್ಪರ್ಧಿಸುತ್ತಿವೆ. ಮಧುರಾಂತಕಂನಲ್ಲಿ 27 ಮತ್ತು ಧಾರಾಪುರಂನಲ್ಲಿ 30 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭರವಸೆ
ಇನ್ನು ಪಶ್ಚಿಮ ಬಂಗಾಳದಲ್ಲಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸ್ಥಾನವನ್ನು ತೊರೆದ ನಂತರ ನಂದಿಗ್ರಾಮದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಗೆದ್ದ ನಂತರ ಅಧಿಕಾರಿ ಭವಾನಿಪುರವನ್ನು ಉಳಿಸಿಕೊಂಡಿದ್ದರು.
ಬಿಜೆಪಿಯು ಹಸಿರಾಣಿ ರಥ ಅವರನ್ನು ಕಣಕ್ಕಿಳಿಸಿದೆ. ಟಿಎಂಸಿ ತನ್ನ ಅಭ್ಯರ್ಥಿ ಹಿಂದೆ ಸರಿದ ನಂತರ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ. ಜತೆಗೆ ಸಿಪಿಐ ಮತ್ತು ಟಿಎಂಸಿ ಬಣ ಕೂಡ ಸ್ಪರ್ಧೆಗೆ ಇಳಿದಿದೆ. ರೆಜಿನಗರದಲ್ಲಿ ಟಿಎಂಸಿಯ ಮಾಜಿ ನಾಯಕ ಹುಮಾಯೂನ್ ಕಬೀರ್ ಅವರ ಮಗ ಗೋಲಂ ನಬಿ ಆಜಾದ್ ರೆಜಿನಗರದಿಂದ ಸ್ಪರ್ಧಿಸುತ್ತಿದ್ದಾರೆ.
ನಾಗಾಂವ್ ಚುನಾವಣೆ
ಅಸ್ಸಾಂನಲ್ಲಿ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಬಿಜೆಪಿಗೆ ಸೇರ್ಪಡೆಯಾದ ಬಳಿಕ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ನಗಾಂವ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಎದುರಾಗಿದೆ.
ಕಾಂಗ್ರೆಸ್ ಮಾಜಿ ಶಾಸಕ ಶಿವಮಣಿ ಬೋರಾ ಅವರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ದೇವಶಿಶ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಕೂಡ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ಮತದಾರರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಈ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
ಪುದುಚೇರಿ ಉಪಚುನಾವಣೆ ಎನ್‍ಡಿಎ ಸರ್ಕಾರಕ್ಕೆ ಅಗ್ನಿಪರೀಕ್ಷೆ
ಪುದುಚೇರಿಯ ಏಕೈಕ ವಿಧಾನಸಭಾ ಉಪಚುನಾವಣೆ ತಟ್ಟಂಚವಾಡಿಉದ್ದಾಗಿದ್ದು, ಮುಖ್ಯಮಂತ್ರಿ ಎನ್. ರಂಗಸಾಮಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳ ನಂತರ ಚುನಾವಣೆ ನಡೆಯುತ್ತಿದೆ. ರಂಗಸಾಮಿ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ತಟ್ಟಂಚಾವಡಿ ಮತ್ತು ಮಂಗಳಂ ಎರಡನ್ನೂ ಗೆದ್ದಿದ್ದರು. ಈ ಪೈಕಿ ಮಂಗಳಂ ಅನ್ನು ಉಳಿಸಿಕೊಂಡಿದ್ದಾರೆ.
ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಅಶೋಕ್ ಆನಂದ್ ಅವರನ್ನು ಕಣಕ್ಕಿಳಿಸಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಕೆ ಸೇತು ಸೆಲ್ವಂ ಮತ್ತು ಇ ವಿನಯಾಗಂ ಅವರನ್ನು ನಾಮನಿರ್ದೇಶನ ಮಾಡಿದೆ. 11 ಅಭ್ಯರ್ಥಿಗಳನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ಕಾಂಗ್ರೆಸ್ ಟಿವಿಕೆ ಬೆಂಬಲವನ್ನು ಹೊಂದಿದೆ.