ನವದೆಹಲಿ (ಜು.24): ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಗುರುವಾರ ಮಧ್ಯರಾತ್ರಿ ಸುಮಾರು 3 ನಿಮಿಷಗಳ ಸೆಲ್ಫಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಗುರುವಾರ ಮಧ್ಯರಾತ್ರಿ ವೇಳೆಗೆ 2.56 ನಿಮಿಷಗಳ ಸೆಲ್ಫಿ ವಿಡಿಯೊ ಬಿಡುಗಡೆ ಮಾಡಿದ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ಶುಕ್ರವಾರ ಕೇಂದ್ರ ಸಚಿವ ಸಂಪುಟ ಕೈಗೊಳ್ಳಲಿದೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಹಾಗೂ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವುದೂ ಸೇರಿದಂತೆ ಕಠೋರ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮೋದಿ ಸೆಲ್ಫಿ ವಿಡಿಯೋದಲ್ಲಿ ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಸಾಧಾರಣ ವಿಷಯವಲ್ಲ ಎಂಬುದು ಗೊತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಇದೊಂದು ನೋವಿನ ಸಂಗತಿ. ಪ್ರಶ್ನೆಪತ್ರಿಕೆ ಸೋರಿಕೆಯಾದ ಬಳಿಕ ಎರಡೂವರೆ ತಿಂಗಳಿನಲ್ಲಿ ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತಪ್ಪು ಮಾಡಿದವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಸರ್ಕಾರ ತನ್ನ ಎಲ್ಲ ಸಾಮರ್ಥ್ಯ ಬಳಸಿ 22 ಲಕ್ಷ ವಿದ್ಯಾರ್ಥಿಗಳು ಅತ್ಯಂತ ಅಲ್ಪಾವಧಿಯಲ್ಲಿ ಮರುಪರೀಕ್ಷೆ ಬರೆಯುವಂತೆ ನೋಡಿಕೊಂಡಿದೆ ಎಂದು ವಿವರಿಸಿದರು.
26 ದಿನಗಳ ಉಪವಾಸ ಕೊನೆಗೊಳಿಸಿದ ಸೋನಮ್ ವಾಂಗ್ಚುಕ್; ಕೊನೆಗೂ ಕೇಂದ್ರ ಸರ್ಕಾರದ ಸಂಧಾನ ಯಶಸ್ವಿ
ಇಲಾಖೆಗಳು ಈ ತಡರಾತ್ರಿ ಹೊತ್ತಿನಲ್ಲಿ ನಿರ್ಣಯ ತಿಳಿಸಿವೆ. ಈ ನಿರ್ಣಯ ಹಾಗೂ ಅದರ ಜತೆಗೆ ಶೀಘ್ರಗತಿ ನ್ಯಾಯಾಲಯ ಮತ್ತು ಕಠಿಣ ಶಿಕ್ಷೆಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಚರ್ಚಿಸುತ್ತೇವೆ. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಪಡೆದು, ಅದನ್ನು ಅಂತಿಮಗೊಳಿಸಲಾಗುತ್ತದೆ. ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಎರಡನೇ ವಾರದ ಕಲಾಪದಲ್ಲಿ ಅದನ್ನು ಅಂಗೀಕರಿಸಲಾಗುತ್ತದೆ ಎಂದರು.
ಉಪವಾಸ ಅಂತ್ಯಗೊಳಿಸಿದ ಸೋನಮ್ ವಾಂಗ್ಚುಕ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ 26 ದಿನಗಳಿಂದ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಹರಿಯಾಣದ ಗುರುಗ್ರಾಮದ ಮೇದಾಂತ ಖಾಸಗಿ ಆಸ್ಪತ್ರೆಯಲ್ಲಿರುವ ಅವರನ್ನು ಭೇಟಿಯಾದ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮಧ್ಯರಾತ್ರಿ ಕೇಂದ್ರ ಸಚಿವರ ಸಮ್ಮುಖದಲ್ಲಿ ಸೋನಮ್ ತಮ್ಮ ಅನಿರ್ದಿಷ್ಟಾವಧಿಯ ಉಪವಾಸವನ್ನು ಕೊನೆಗೊಳಿಸಿ ಜೆ.ಪಿ. ನಡ್ಡಾ ನೀಡಿದ ಪಾನೀಯ ಸ್ವೀಕರಿಸಿದರು. ಈ ವೇಳೆ ಸೋನಮ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಉಪಸ್ಥಿತರಿದ್ದರು.