ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಶೇ. 70ರಷ್ಟು ಇಳಿಕೆ ಸಾಧ್ಯತೆ: ರೋಗಿಗಳಿಗೆ ವಾರ್ಷಿಕ 2,500 ಕೋಟಿ ರೂ. ಉಳಿತಾಯ!

ದೇಶದಲ್ಲಿ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಹಾಗೂ ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಅತ್ಯಂತ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ದೇಶದಲ್ಲಿ ಕ್ಯಾನ್ಸರ್ ನಿರೋಧಕ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೇ. 20 ರಿಂದ ಶೇ. 70 ರಷ್ಟು ಅಗ್ಗವಾಗುವ ಸಾಧ್ಯತೆಯಿದೆ.

ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಹಾಗೂ ಅವರ ಕುಟುಂಬಗಳಿಗೆ (Cancer drugs price reduction) ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಅತ್ಯಂತ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ದೇಶದಲ್ಲಿ ಕ್ಯಾನ್ಸರ್ ನಿರೋಧಕ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೇ. 20 ರಿಂದ ಶೇ. 70 ರಷ್ಟು ಅಗ್ಗವಾಗುವ ಸಾಧ್ಯತೆಯಿದೆ. ಕ್ಯಾನ್ಸರ್ ಔಷಧಗಳ ಮೇಲಿನ ಭಾರಿ ವ್ಯಾಪಾರದ ಲಾಭಾಂಶಕ್ಕೆ (Trade Margin) ಕಡಿತ ಹಾಕುವ ಪ್ರಸ್ತಾಪಕ್ಕೆ ಪ್ರಾಧಿಕಾರವು ತತ್ವತಃ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಹೊಸ ದರಗಳು ಜಾರಿಗೆ ಬರಲಿವೆ.

ದೇಶಾದ್ಯಂತ ಇರುವ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕವಾಗಿ ಸುಮಾರು 2,500 ರೂ. ಕೋಟಿಗೂ ಅಧಿಕ ಹಣ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಯು ಅತ್ಯಂತ ದುಬಾರಿಯಾಗಿದ್ದು, ಔಷಧಗಳ ಬೆಲೆ ಇಳಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಇದು ಸಹಕಾರಿಯಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನಿಗದಿತವಲ್ಲದ (Non-scheduled) ಕ್ಯಾನ್ಸರ್ ಔಷಧಗಳ ಮೇಲೆ ಔಷಧ ತಯಾರಕರು ಮತ್ತು ವಿತರಕರು ಶೇ. 170 ರಿಂದ ಹಿಡಿದು ಶೇ. 700 ರವರೆಗೆ ಭಾರಿ ಪ್ರಮಾಣದ ಲಾಭಾಂಶವನ್ನು ಪಡೆಯುತ್ತಿದ್ದರು.

ಇದರಿಂದಾಗಿ ಮೂಲ ಬೆಲೆಗಿಂತ ಹತ್ತಾರು ಪಟ್ಟು ಹೆಚ್ಚಿನ ದರಕ್ಕೆ ರೋಗಿಗಳು ಔಷಧ ಖರೀದಿಸಬೇಕಾಗಿತ್ತು. ಆದರೆ ಈಗ NPPA ಈ ವ್ಯಾಪಾರದ ಲಾಭಾಂಶವನ್ನು ಗರಿಷ್ಠ ಶೇ. 30 ಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ. ಅಂದರೆ, ಯಾವುದೇ ಕಾರಣಕ್ಕೂ ಕಂಪನಿಗಳು ಮತ್ತು ವಿತರಕರು ಶೇ. 30 ಕ್ಕಿಂತ ಹೆಚ್ಚು ಲಾಭಾಂಶವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದರಲ್ಲಿ, ಕೇವಲ 2,700 ರೂ. ಗೆ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುವ ಜೀವರಕ್ಷಕ ಔಷಧವನ್ನು ಗ್ರಾಹಕರಿಗೆ 27,000 ಸಾವಿರ MRP ನಿಗದಿಪಡಿಸಿ ಮಾರಾಟ ಮಾಡುತ್ತಿರುವುದನ್ನು ನ್ಯಾಯಾಲಯ ತೀವ್ರವಾಗಿ ಪ್ರಶ್ನಿಸಿತ್ತು. ಜೀವ ರಕ್ಷಕ ಔಷಧಗಳ ಹೆಸರಿನಲ್ಲಿ ನಡೆಯುತ್ತಿರುವ ಈ ದೋಚುವಿಕೆಯನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಾಲಯದ ಈ ಕಳವಳದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು NPPA ಜಂಟಿಯಾಗಿ ಈ ಬಿಗಿ ಕ್ರಮಕ್ಕೆ ಮುಂದಾಗಿವೆ.

ಮುಂಬೈನಲ್ಲಿ ಕ್ಯಾನ್ಸರ್‌ನಿಂದ ಕಣ್ಮುಚ್ಚಿದ ಬಂಗಾಳಿ ಚಿತ್ರರಂಗದ ಹಿರಿಯ ನಟಿ ಮಿಥು ಮುಖರ್ಜಿ

ಆರೋಗ್ಯ ಸಚಿವಾಲಯದ ತಜ್ಞರ ಸಮಿತಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತು ಬೆಲೆ ಕಡಿತಕ್ಕೆ ಒಳಪಡಬೇಕಾದ ಕ್ಯಾನ್ಸರ್ ಔಷಧಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಈ ಪಟ್ಟಿ ತಯಾರಾದ ತಕ್ಷಣವೇ NPPA ವತಿಯಿಂದ ಅಧಿಕೃತ ಗಜೆಟ್ ಅಧಿಸೂಚನೆ ಹೊರಬೀಳಲಿದ್ದು, ದೇಶಾದ್ಯಂತ ಹೊಸ ಮತ್ತು ಅಗ್ಗದ ದರಗಳು ಜಾರಿಗೆ ಬರಲಿವೆ.

Vishakha Bhat Heggar

View all posts by this author