ನವದೆಹಲಿ: ಪ್ರತಿಭಟನೆ (Protest) ನಡೆಸುವ ಹಕ್ಕಿನ ಹೆಸರಿನಲ್ಲಿ ಯಾವುದೇ ಸಾರ್ವಜನಿಕ ಸ್ಥಳ ಅಥವಾ ನಿವೇಶನವನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ಸ್ಥಳಗಳನ್ನು ಮುಕ್ತವಾಗಿ ಬಳಸುವ ನಾಗರಿಕರ ಹಕ್ಕು ಹಾಗೂ ಪ್ರತಿಭಟನಾಕಾರರ ಹಕ್ಕುಗಳ ನಡುವೆ ಸಮತೋಲನ ಇರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್ನಲ್ಲಿ ಹಾಗೂ ಇತ್ತೀಚೆಗೆ ಭಾರತೀಯ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ರಾಮಲೀಲಾ ಮೈದಾನದಲ್ಲಿ ನಡೆಸಿದ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಈಗಾಗಲೇ ಸರ್ಕಾರವು ಜಂತರ್ ಮಂತರ್ಗೆ ನೀಡಿದ್ದ 'ನಿಗದಿತ ಪ್ರತಿಭಟನಾ ಸ್ಥಳ' ಎಂಬ ಮಾನ್ಯತೆಯನ್ನು ರದ್ದುಗೊಳಿಸಿದ್ದು, ರಾಮಲೀಲಾ ಮೈದಾನ ಸೇರಿದಂತೆ ಮೂರು ಪರ್ಯಾಯ ಸ್ಥಳಗಳನ್ನು ಗುರುತಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಜುಲೈ 20 ರ ಪ್ರತಿಭಟನೆಗೆ ಕೇವಲ ಒಂದು ದಿನದ ಅನುಮತಿ ನೀಡಲಾಗಿತ್ತು. ಆದರೆ ಪ್ರತಿಭಟನಾಕಾರರು ಜಾಗ ಆಕ್ರಮಿಸಿದ್ದಲ್ಲದೆ ಸಂಸತ್ತಿನ ಕಡೆಗೆ ಮಾರ್ಚ್ ಮಾಡಿದರು" ಎಂದು ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, "ಸಂಸತ್ತು ಕೇವಲ ಮತ್ತೊಂದು ರಾಜಕೀಯ ಕಟ್ಟಡವಲ್ಲ. ಯಾರೂ ಸಂಸತ್ ಭವನ ಅಥವಾ ಸುಪ್ರೀಂ ಕೋರ್ಟ್ಗೆ ಮಾರ್ಚ್ ನಡೆಸುವಂತಿಲ್ಲ" ಎಂದು ಹೇಳಿದೆ.
ದೆಹಲಿಯಲ್ಲಿ ಹಸಿರು ಪಟಾಕಿಗೆ ಸುಪ್ರೀಂ ಷರತ್ತುಬದ್ಧ ಅನುಮತಿ; ನವೆಂಬರ್ 7, 8ರಂದು ಮಾತ್ರ ಸಿಡಿಸಲು ಅವಕಾಶ
ಹಬ್ಬದ ಸೀಸನ್ನಲ್ಲಿ ಪ್ರತಿಭಟನೆಗಳಿಂದ ಉಂಟಾಗುವ ವ್ಯಾಪಾರ ನಷ್ಟದ ಕುರಿತು ಅಖಿಲ ಭಾರತ ವರ್ತಕರ ಒಕ್ಕೂಟ (CAIT) ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ಆಲಿಸಿತು. ಪ್ರತಿಭಟನೆಯಿಂದಾಗಿ ಕನ್ನಾಟ್ ಪ್ಲೇಸ್ನ ಸುತ್ತಮುತ್ತಲಿನ ಲಕ್ಷಾಂತರ ಜನರ ದೈನಂದಿನ ಜೀವನ ಮತ್ತು ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ವರ್ತಕರ ಪರ ವಕೀಲರು ವಾದಿಸಿದರು. ನಷ್ಟಕ್ಕೆ ಕಾರಣರಾದ ಪ್ರತಿಭಟನಾ ಆಯೋಜಕರನ್ನು ಈ ಅರ್ಜಿಯಲ್ಲಿ ಜವಾಬ್ದಾರರನ್ನಾಗಿ ಮಾಡಲು ಕೋರ್ಟ್ ಸೂಚಿಸಿದೆ.