ರಾಂಚಿ, ಸೆ. 24: ಜಾರ್ಖಂಡ್‌ನ (Jharkhand) ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಷಾ ಪ್ರಯಾಣಿಸುತ್ತಿದ್ದ ಕಾರ್ ನಿಂತಿದ್ದ ಟ್ರಕ್‌ಗೆ ಡಿಕ್ಕಿ (Accident) ಹೊಡೆದ ಪರಿಣಾಮ ಅವರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಸೋನಾರಿ ಪೊಲೀಸ್ ಠಾಣೆ ಪ್ರದೇಶದ ಮೆರೈನ್ ಡ್ರೈವ್ ರಸ್ತೆಯಲ್ಲಿ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಠಾಕೂರ್ ತಿಳಿಸಿದ್ದಾರೆ.
“ರಸ್ತೆ ಅಪಘಾತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಷಾ ಸಿಂಗ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಮೂವರನ್ನು ಸಾರ್ಥಕ್ ಅಗರ್ವಾಲ್, ನಮನ್ ಗುಪ್ತಾ ಮತ್ತು ವಂಶಿಕಾ ಖಂಡೇಲ್ವಾಲ್ ಎಂದು ಗುರುತಿಸಲಾಗಿದೆ” ಎಂದು ಸೋನಾರಿ ಪೊಲೀಸ್ ಠಾಣಾಧಿಕಾರಿ ಸಂಜಯ್ ಸುಮನ್ ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೇನ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ. “ಜಾರ್ಖಂಡ್ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ಜೆಮ್ಶೆಡ್‌ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ” ಎಂದು ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಾರ್ಕಳದಲ್ಲಿ ಮಾಜಿ ಸಚಿವ ರಮಾನಾಥ ರೈ ಕಾರು- ಬಸ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ
“ಜೆಮ್ಶೆಡ್‌ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಹ ಸಚಿವೆ ಮತ್ತು ಸಹೋದರಿ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ಮತ್ತು ಇತರ ಮೂವರು ನಿಧನರಾಗಿದ್ದು, ಅತ್ಯಂತ ದುಃಖವಾಗಿದೆ” ಎಂದು ಸಿಎಂ ಸೊರೆನ್ ಹೇಳಿದರು.
“ಒಬ್ಬರ ಮಗುವನ್ನು ಕಳೆದುಕೊಳ್ಳುವ ನೋವು ಪದಗಳಿಗೆ ಮೀರಿದ್ದು. ಯಾವುದೇ ಪೋಷಕರು ಮತ್ತು ಕುಟುಂಬಕ್ಕೆ ಅದು ಅಸಹನೀಯವಾಗಿದೆ. ಈ ಅತ್ಯಂತ ಕಷ್ಟದ ಸಮಯದಲ್ಲಿ, ಸಹೋದರಿ ದೀಪಿಕಾ ಅವರು ಮತ್ತು ಮೃತಪಟ್ಟ ಇತರ ಮೂವರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಸರಿಪಡಿಸಲಾಗದ ನಷ್ಟವನ್ನು ಹೇಳಲು ಪದಗಳಿಲ್ಲ” ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.