ಮುಂಬೈ, ಏ. 7: ಶಾರ್ಟ್ ಕಟ್ ತೆಗೆದುಕೊಳ್ಳಲು ಹೋಗಿ ಕುಟುಂಬವೊಂದು ದುರ್ಮರಣಕ್ಕೀಡಾದ ಮನಕಲುಕುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ. ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಮೃತಪಟ್ಟಿದ್ದಾರೆ. ಕಾರು ಬಾವಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ (Accident). ಮೃತರಲ್ಲಿ ಆರು ಮಂದಿ ಮಕ್ಕಳು ಸೇರಿದ್ದಾರೆ.
ಒಂದೇ ಕುಟುಂಬದ ಮೂವರು ವಯಸ್ಕರು ಮತ್ತು ಆರು ಮಕ್ಕಳು ದಿಂಡೋರಿಯಲ್ಲಿರುವ ತರಬೇತಿ ಕೇಂದ್ರವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿ ಮರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೃತರಲ್ಲಿ ಸುನಿಲ್ ದರ್ಗುಡೆ (32), ಅವರ ಪತ್ನಿ ರೇಷ್ಮಾ (27), ಮಗಳು ಗುಣವಂತಿ (11), ಸುನಿಲ್ ಅವರ ಅತ್ತಿಗೆ ಆಶಾ (32), ಮಕ್ಕಳಾದ ಶ್ರೇಯಶ್ (11), ಶ್ರಾವಣಿ (11), ಶ್ರದ್ಧಾ (13) ಮತ್ತು ಸೃಷ್ಟಿ (14), ಮತ್ತು ಸಂಬಂಧಿಕರ ಮಗು ಸಮೃದ್ಧಿ (7) ಸೇರಿದ್ದಾರೆ.
ಮಹಾರಾಷ್ಟ್ರದಲ್ಲಿ ಬಾವಿಗೆ ಬಿದ್ದ ಕಾರು:
ಕಾರ್ಯಕ್ರಮಕ್ಕೆ ಹಾಜರಾದ ನಂತರ, ಒಂಬತ್ತು ಮಂದಿ ಸುಮಾರು 10 ಕಿ.ಮೀ. ದೂರದಲ್ಲಿರುವ ತಮ್ಮ ಹಳ್ಳಿಗೆ ವಾಪಸಾಗುತ್ತಿದ್ದರು. ಮಾರುತಿ ಸುಜುಕಿ XL6 ಕಾರನ್ನು ಚಲಾಯಿಸುತ್ತಿದ್ದ ಸುನಿಲ್, ಶಾರ್ಟ್‌ಕಟ್ ತೆಗೆದುಕೊಳ್ಳಲು ನಿರ್ಧರಿಸಿದರು. ಇದು ದುರಂತಕ್ಕೆ ಕಾರಣವಾಯಿತು.
ಕರಾವಳಿಗೆ ಪ್ರವಾಸ ಬಂದಿದ್ದ ಬೆಂಗಳೂರಿನ ಕುಟುಂಬದ ಇಬ್ಬರು ಅಪಘಾತಕ್ಕೆ ಬಲಿ
ಕಾರು ರಸ್ತೆ ಬದಿಯ ಬಾವಿಯ ಗೋಡೆಗೆ ಡಿಕ್ಕಿ ಹೊಡೆದು ಅದರೊಳಗೆ ಉರುಳಿದೆ. ಆಳವಾದ ಬಾವಿಯಲ್ಲಿ 40 ಅಡಿ ಎತ್ತರದವರೆಗೆ ನೀರಿತ್ತು. ಶಬ್ಧ ಕೇಳಿದ ಸ್ಥಳೀಯ ನಿವಾಸಿಗಳು ಬಾವಿಯ ಬಳಿ ಧಾವಿಸಿ, ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ನಿವಾಸಿಗಳು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಲು ಪ್ರಯತ್ನಿಸಿದರೂ ಕತ್ತಲೆ ಇದ್ದರಿಂದ ಮತ್ತು ಬಾವಿಯು ಆಳವಾಗಿದ್ದರಿಂದ ಸಾಧ್ಯವಾಗಲಿಲ್ಲ.
ಅಗ್ನಿಶಾಮಕ ದಳದವರು ವಾಹನವನ್ನು ಪತ್ತೆಹಚ್ಚಲು ದೀಪ ಬಳಸಿದರು. ಸ್ಥಳಕ್ಕೆ ಧಾವಿಸಿದ ಮುಳುಗುತಜ್ಞರು ಹಗ್ಗಗಳನ್ನು ಬಳಸಿ ಕಾರನ್ನು ಬಾವಿಯಿಂದ ಹೊರತೆಗೆದರು. ಆದರೆ ಆಗಲೇ ತುಂಬಾ ತಡವಾಗಿತ್ತು. ಕಾರಿನಲ್ಲಿದ್ದವರೆಲ್ಲರೂ ಮೃತಪಟ್ಟಿದ್ದರು. ವಾಹನದ ಹೊರಗೆ ಮಕ್ಕಳಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿತ್ತು.
ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದ ಸಾವು ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರಲ್ಲಿ ಒಬ್ಬರಾದ ಸುನಿಲ್ ದರ್ಗುಡೆ ವಿರುದ್ಧ ಅತಿವೇಗದ ಚಾಲನೆ ಆರೋಪ ಹೊರಿಸಲಾಗಿದೆ. ಬಾವಿಯ ಮಾಲೀಕ ರಾಜೇಂದ್ರ ರಾಜೆ ವಿರುದ್ಧವೂ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ. ಸುನಿಲ್ ದರ್ಗುಡೆ ಮುಖ್ತರಸ್ತೆಯನ್ನು ಬಿಟ್ಟು ಈ ಶಾರ್ಟ್‌ಕಟ್ ರೂಟ್ ಹಿಡಿದಿದ್ದು ಒಂಭತ್ತು ಮಂದಿಯ ಪ್ರಾಣ ಕಸಿದಿದೆ.
ವರದಿಗಳ ಪ್ರಕಾರ, ಬಾವಿಯ ಪಕ್ಕದ ರಸ್ತೆಯನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಬಾವಿಯನ್ನು ಮುಚ್ಚಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.