ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಯೋತ್ಪಾಕದ ಸಂಘಟನೆ ಸೇರಿ ಸರಿಯಾಗಿ ಒಂದು ವರ್ಷಕ್ಕೆ ಲಷ್ಕರ್ ಉಗ್ರ ಲತೀಫ್ ಭಟ್ ಎನ್‌ಕೌಂಟರ್‌

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ (LeT) ಉಗ್ರ ಲತೀಫ್ ಭಟ್ ಹತನಾಗಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿದ್ದ ಏಕೈಕ ಸ್ಥಳೀಯ ಉಗ್ರನಾಗಿದ್ದ ಈತನ ಹತ್ಯೆಯು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸಾಗಿದೆ.

ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ (LeT) ಉಗ್ರ ಲತೀಫ್ ಭಟ್ (Terrorist Lateef Bhat) ಹತನಾಗಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿದ್ದ ಏಕೈಕ ಸ್ಥಳೀಯ ಉಗ್ರನಾಗಿದ್ದ ಈತನ ಹತ್ಯೆಯು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸಾಗಿದೆ. ವಿಶೇಷವೆಂದರೆ, 2025ರ ನವೆಂಬರ್ 18ರಂದು ಉಗ್ರ ಸಂಘಟನೆ ಸೇರಿದ್ದ ಈತ, ಸರಿಯಾಗಿ ಒಂದು ವರ್ಷದ ನಂತರ ಅಂದರೆ 2026ರ ನವೆಂಬರ್ 18ರಂದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

ಕುಲ್ಗಾಮ್‌ನ ಮಸೀದಿಯೊಂದರಲ್ಲಿ ಲತೀಫ್ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಸುತ್ತುವರಿದಿದ್ದವು. ಆತನನ್ನು ಜೀವಂತವಾಗಿ ಸೆರೆಹಿಡಿಯುವ ಉದ್ದೇಶದಿಂದ ಭದ್ರತಾ ಪಡೆಗಳು ವಿಡಿಯೋ ಕರೆ ಮಾಡಿ ಶರಣಾಗುವಂತೆ ಸೂಚಿಸಿದ್ದವು. ಆದರೆ ಆತ ಅದಕ್ಕೆ ನಿರಾಕರಿಸಿದ್ದ. ನಸುಕಿನ 2:45ರ ಸುಮಾರಿಗೆ ಲತೀಫ್ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಆರಂಭಿಸಿದನು. ತಕ್ಷಣವೇ ಪ್ರತಿದಾಳಿ ನಡೆಸಿದ ಯೋಧರು, ಮಸೀದಿಗೆ ಯಾವುದೇ ರೀತಿಯ ಹಾನಿಯಾಗದಂತೆ ಅತ್ಯಂತ ಸಂಯಮ ಮತ್ತು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಆತನನ್ನು ಹೊಡೆದುರುಳಿಸಿದ್ದಾರೆ.

ನವೆಂಬರ್ 11ರಂದು ಕುಲ್ಗಾಮ್‌ನ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಈ ದಾಳಿಗೂ ಮುನ್ನ ಲತೀಫ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಸ್ಥಳ ಪರಿಶೀಲನೆ (ರೆಕ್ಕಿ) ನಡೆಸಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಕಳೆದ ಐದಾರು ತಿಂಗಳಿನಿಂದ ಲತೀಫ್‌ಗೆ ಆಶ್ರಯ ಮತ್ತು ಲಾಜಿಸ್ಟಿಕ್ಸ್ ನೆರವು ನೀಡುತ್ತಿದ್ದ ಸ್ಥಳೀಯ ನಿವಾಸಿ ಉಮರ್ ನಿಸಾರ್ ದಾರ್, ನವೆಂಬರ್ 16ರಂದು ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದನು. ಅಂದು ಲತೀಫ್ ಭಟ್ ತಪ್ಪಿಸಿಕೊಂಡಿದ್ದನು.

ಮಸೀದಿಯಲ್ಲಿ ಅಡಗಿದ್ದ ಮೋಸ್ಟ್‌ ವಾಂಟೆಂಡ್‌ ಉಗ್ರ ಲತೀಫ್‌ ಭಟ್‌ ಎನ್‌ಕೌಂಟರ್‌; ಸೇನಾ ಕಾರ್ಯಾಚರಣೆ ಹೇಗಿತ್ತು?

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿವಾಸಿಯಾದ 22 ವರ್ಷದ ಲತೀಫ್ ಭಟ್, ಭಾನ್ ಮತ್ತು ಅಶ್ಮುಜಿ ಶಾಲೆಗಳಲ್ಲಿ 12ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದನು. ಬಳಿಕ ಕುಲ್ಗಾಮ್‌ನ ಸರ್ಕಾರಿ ಪದವಿ ಕಾಲೇಜಿಗೆ ಸೇರಿದರೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಡಗಿ ಕೆಲಸ ಮಾಡುತ್ತಿದ್ದನು. 2025ರ ನವೆಂಬರ್ 18ರಂದು ಮನೆಯಿಂದ ನಾಪತ್ತೆಯಾಗಿ ಲಷ್ಕರ್ ಸಂಘಟನೆ ಸೇರಿದ್ದನು. ಕುಲ್ಗಾಮ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾದ ಸ್ಥಳೀಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ, ಲಷ್ಕರ್‌ನ ಅಂಗಸಂಸ್ಥೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಮತ್ತು 'ಕಾಶ್ಮೀರ್ ರೆವಲ್ಯೂಷನರಿ ಆರ್ಮಿ' (KRA) ಜೊತೆಗೂ ನಿಕಟ ಸಂಪರ್ಕ ಹೊಂದಿದ್ದನು.

Vishakha Bhat Heggar

View all posts by this author