ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. ತಮಿಳುನಾಡು (Tamil Nadu) ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠ ನಡೆಸಲಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ ಎಂದು ಕಳೆದ ವಿಚಾರಣೆ ಸಮಯದಲ್ಲಿ ಕರ್ನಾಟಕ ತಿಳಿಸಿತ್ತು.
ಕರ್ನಾಟಕ ನೀರು ಹರಿಸುತ್ತಿಲ್ಲ ಎಂಬ ತಮಿಳುನಾಡಿನ ಆರೋಪವನ್ನು ಸುಳ್ಳು ಎಂದು ವಾದಿಸಿದ್ದ ರಾಜ್ಯ ಸರ್ಕಾರಕ್ಕೆ, ಒಂದು ವಾರದಲ್ಲಿ ಹರಿದ ನೀರಿನ ನಿಖರ ಅಂಕಿ-ಅಂಶಗಳೊಂದಿಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಇಂದು ಸಮಗ್ರ ದಾಖಲೆ ಹಾಗೂ ಅಂಕಿ-ಅಂಶಗಳನ್ನು ನ್ಯಾಯಪೀಠದ ಮುಂದೆ ಮಂಡಿಸಲಿದೆ.
108 ಅಡಿಗಿಳಿದ ಕೆಆರ್‌ಎಸ್ ಡ್ಯಾಂ
ತ.ನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 108 ಅಡಿಗಿಳಿದಿದೆ. ಕಳೆದ ಒಂದು ವಾರದಿಂದ 109 ಅಡಿ ಇದ್ದ ಜಲಾಶಯದಿಂದ ನಿರಂತರ ನೀರು ಹರಿಸುತ್ತಿರುವುದರಿಂದ ಒಂದು ಅಡಿ ಕಡಿಮೆಯಾಗಿದೆ. ಭಾನುವಾರ ಜಲಾಶಯದ ನೀರಿನ ಮಟ್ಟ 108.48 ಅಡಿ ಇತ್ತು. ಒಳಹರಿವು 1367 ಕ್ಯೂಸೆಕ್ ಇದ್ದರೆ, ಹೊರಹರಿವು ೪೮೨೪ ಕ್ಯೂಸೆಕ್ ಇದೆ. ಇದರಲ್ಲಿ ಕುಡಿಯುವ ನೀರು ಹಾಗೂ ನಾಲೆಗೆ ಎಂದು ನೀರಾವರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ನಾಲೆಗೆ ನೀರು ನಿಲ್ಲಿಸಲಾಗಿದ್ದು, ನದಿಗೆ ಹರಿದು ಹೋಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 30.222 ಟಿಎಂಸಿ ನೀರು ಸಂಗ್ರಹವಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯು ನಾಳೆ ದೆಹಲಿಯಲ್ಲಿ ನಡೆಯಲಿದ್ದು, ನೀರು ಹರಿಸುವಿಕೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ಬದಲಿಗೆ ಕೇವಲ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಅನುಮತಿ ನೀಡಬೇಕೆಂದು ಕರ್ನಾಟಕವು ಈಗಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮನವಿ ಸಲ್ಲಿಸಿದೆ. ರಾಜ್ಯದಲ್ಲಿನ ಜಲಾಶಯಗಳ ನೀರಿನ ಕೊರತೆಯನ್ನು ಮುಂದಿಟ್ಟುಕೊಂಡು, ನಾಳಿನ CWRC ಸಭೆಯಲ್ಲಿಯೂ ಈ ವಿಚಾರದತ್ತ ಸಮಿತಿಯ ಗಮನ ಸೆಳೆಯಲು ಕರ್ನಾಟಕ ಸಜ್ಜಾಗಿದೆ.