ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆಯ ಪ್ರಮುಖ ಶೂಟರ್‌ ಅರೆಸ್ಟ್‌; ಹೊಂಚುಹಾಕಿ ಟೋಲ್‌ ಪ್ಲಾಜಾದಲ್ಲಿ ಸೆರೆ ಹಿಡಿದ ಸಿಬಿಐ ಅಧಿಕಾರಿಗಳು

Chandranath Rath Murder Case: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್‌ ರಥ್‌ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಬಿಐಗೆ ಯಶಸ್ಸು ಸಿಕ್ಕಿದ್ದು, ಪ್ರಮುಖ ಶೂಟರ್‌ನನ್ನು ಬಂಧಿಸಲಾಗಿದೆ. ಬಂಧಿತನನ್ನು ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ರಾಜ್‌ಕುಮಾರ್‌ ಸಿಂಗ್‌ ಎಂದು ಗುರುತಿಸಲಾಗಿದೆ.

ರಾಜ್‌ಕುಮಾರ್‌ ಸಿಂಗ್‌ ಮತ್ತು ಚಂದ್ರನಾಥ್‌ ರಥ್‌

ಕೋಲ್ಕತ್ತಾ, ಮೇ 18: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್‌ ರಥ್‌ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಬಿಐಗೆ ಯಶಸ್ಸು ಸಿಕ್ಕಿದ್ದು, ಪ್ರಮುಖ ಶೂಟರ್‌ನನ್ನು ಬಂಧಿಸಲಾಗಿದೆ (Chandranath Rath Murder Case). ಬಂಧಿತನನ್ನು ರಾಜ್‌ಕುಮಾರ್‌ ಸಿಂಗ್‌ (Rajkumar Singh) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ಈತ ಕೆಲವು ಸಮಯಗಳಿಂದ ಮುಜಫರ್‌ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಸ್ಥಳೀಯ ಪೊಲೀಸರ ಸಹಕಾರದಿಂದ ಈತನ ಹೆಡೆಮುರಿ ಕಟ್ಟಲಾಗಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ಈ ತಿಂಗಳಾರಂಭದಲ್ಲಿ ನಡೆದ ಹೈಪ್ರೊಫೈಲ್‌ ಕೇಸ್‌ನಲ್ಲಿ ಸಿಬಿಐ ಮಹತ್ವದ ಪ್ರಗತಿ ಸಾಧಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಮೇ 10ರಂದು ಮತ್ತೋರ್ವ ಆರೋಪಿ ರಾಜ್‌ ಸಿಂಗ್‌ನನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೆರೆ ಹಿಡಿಯಲಾಗಿತ್ತು. ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಘೋಷಣೆಯಾದ 2 ದಿನಗಳ ನಂತರ ಅಂದರೆ ಮೇ 6ರಂದು ಚಂದ್ರನಾಥ್‌ ರಥ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು ಆರಂಭದಿಂದಲೂ ಹತ್ಯೆಯ ಹಿಂದೆ ರಾಜ್‌ಕುಮಾರ್‌ ಸಿಂಗ್‌ನ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಆತನ ಬಂಧನವಾಗಿದೆ.

ಚಂದ್ರನಾಥ್‌ ರಥ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ:



ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದ ಬೆನ್ನಲ್ಲೇ ನಡೆದ ರಥ್‌ ಹತ್ಯೆ ಸುವೇಂದು ಅಧಿಕಾರಿಗೆ ಭಾರಿ ಆಘಾತ ನೀಡಿತ್ತು. ಮೇ 6ರ ರಾತ್ರಿ ರಥ್‌ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿದ್ದರು. ಕೋಲ್ಕತ್ತಾದ ಹೊರವಲಯದಲ್ಲಿರುವ ಮಧ್ಯಮ ಗ್ರಾಮದಲ್ಲಿ ಕಾರ್‌ ಅನ್ನು ತಡೆದು ನಿಲ್ಲಿಸಿ ಶೂಟ್‌ ಮಾಡಲಾಗಿತ್ತು. ರಥ್‌ ಎದೆಗೆ 3 ಗುಂಡು ತಗುಲಿ ಸ್ಥಳದಲ್ಲೇ ಅಸುನೀಗಿದ್ದರು.

ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ ರಥ್‌ ಹತ್ಯೆಗೆ ಮುನ್ನ ಆಗಿದ್ದೇನು?

ಬಲೆಗೆ ಬಿದ್ದಿದ್ದು ಹೇಗೆ?

ರಥ್‌ ಹತ್ಯೆ ಪ್ರಕರಣ ತನಿಖೆ ಆರಂಭಿಸಿದಸ್ದ ಸಿಬಿಐ ಇಂಚಿಂಚು ಮಾಹಿತಿ ಕಲೆ ಹಾಕಿದೆ. ಅದರಂತೆ ರಾಜ್‌ಕುಮಾರ್‌ ಸಿಂಗ್‌ ಹರಿದ್ವಾರದಲ್ಲಿರುವ ತನ್ನ ಕುಟುಂಬಸ್ಥರನ್ನು ಭೇಟಿಯಾಗಿ ಮರಳುತ್ತಿರುವ ಬಗ್ಗೆ ಗೊತ್ತಾಯಿತು. ಹೀಗಾಗಿ ಮುಜಫರ್‌ನಗರದ ಛಪ್ಪರ್‌ ಪೊಲೀಸ್‌ ಠಾಣೆಯ ಟೋಲ್‌ ಫ್ಲಾಜಾದ ಬಳಿ ಅಧಿಕಾರಿಗಳು ಹೊಂಚು ಹಾಕಿ ಕೂತಿದ್ದರು. ಸೋಮವಾರ (ಮೇ 18) ಮುಂಜಾನೆ ರಾಜ್‌ಕುಮಾರ್‌ ಸಿಂಗ್‌ ಇದ್ದ ವಾಹನ ಟೋಲ್‌ ಗೇಟ್‌ ಬಳಿ ಬರುತ್ತಿದ್ದಂತೆ ಸ್ಥಳೀಯ ಪೊಲೀಸರ ಸಹಾಯದಿಂದ ಬಂಧಿಸಿದರು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈಗಾಗಲೇ ಚಂದ್ರನಾಥ್ ರಥ್‌ ಹತ್ಯೆಗೈದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಚಂದ್ರನಾಥ್ ರಥ್ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು; ಕೊಲೆಗೆ ಬಳಸಿದ ದ್ವಿಚಕ್ರ ವಾಹನದ ಮಾಲಕ ಪತ್ತೆ

ಯಾರು ಈ ಚಂದ್ರನಾಥ ರಥ್‌?

1984ರ ಆಗಸ್ಟ್ 11ರಂದು ಪುರ್ಬಾ ಮೇದಿನಿಪುರ ಜಿಲ್ಲೆಯ ಚಂಡಿಪುರದಲ್ಲಿ ಜನಿಸಿದ ಚಂದ್ರನಾಥ ರಥ್‌ 1990ರ ದಶಕದ ಅಂತ್ಯದಿಂದಲೂ ಸುವೇಂದು ಅಧಿಕಾರಿ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ರಥ್‌ ಮತ್ತು ಸುವೇಂದು ಅದಿಕಾರಿ ಇಬ್ಬರೂ ಟಿಎಂಸಿಯಲ್ಲಿದ್ದರು. ಅಧಿಕಾರಿ 2020ರ ಅಂತ್ಯದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಚಂದ್ರನಾಥ ರಥ್‌ ಅವರ ತಾಯಿ ಹಸಿ ರಥ್ ಪಂಚಾಯತ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು ಮತ್ತು ಸುವೇಂದು ಅಧಿಕಾರಿಯೊಂದಿಗೆ ಅವರೂ ಬಿಜೆಪಿಗೆ ಸೇರಿದ್ದರು. ಸುವೇಂದು ಅಧಿಕಾರಿ ಮುಖ್ಯಮಂತ್ರಿ ಪಟ್ಟಕ್ಕೇರುವ ಮುನ್ನವೇ ಚಂದ್ರನಾಥ್‌ ರಥ್‌ ಅವರನ್ನು ಹತ್ಯೆ ಮಾಡಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author