India-Pak ceasefire:ಕದನ ವಿರಾಮದ ಬೆನ್ನಲ್ಲೇ ಪಾಕ್ ಪುಂಡಾಟ; ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಅಟ್ಯಾಕ್
Ceasefire violation in Kashmir: ಸತತ ದಾಳಿ-ಪ್ರತಿದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಇಂದು ಕದನ ವಿರಾಮ ಘೋಷಿಸಿತ್ತು. ಸ್ವತಃ ಪಾಕ್ ಮುಂದಾಗಿ ಭಾರತದ ಜೊತೆ ಒಪ್ಪಂದ ಮಾಡಿಕೊಂಡು ಯುದ್ಧಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ತನ್ನ ಛಾಳಿ ಬಿಡದ ಪಾಕಿಸ್ತಾನ ಕದನ ವಿರಾಮ ಘೋಷಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ದಾಳಿ ನಡೆಸಿದೆ.


ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಇಂದು ಸಂಜೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ವಾತಾವರಣಕ್ಕೆ ತಾತ್ಕಾಲಿಕ ಅಂತ್ಯ ಹಾಡಿತ್ತು. ಆದರೆ ತನ್ನ ಚಾಳಿ ಬಿಡದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುವ ಮೂಲಕ ಕಿತಾಪತಿ ಮಾಡಿದೆ. ಜಮ್ಮು-ಕಾಶ್ಮೀರದ ವಿವಿಧ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿಕ ಪಾಕ್ ಸೇನೆ ಅಪ್ರಚೋದಿತ ದಾಳಿ ನಡೆಸಿದೆ. ಅಖ್ನೂರ್, ರಜೌರಿ ಮತ್ತು ಪೂಂಛ್‌ನಲ್ಲಿ ಈ ದಾಳಿ ನಡೆದಿರುವ ವರದಿಯಾಗಿದೆ.
ಕದನ ವಿರಾಮ ಜಾರಿಗೆ ಬಂದ ಕೇವಲ 3 ಗಂಟೆ ಅವಧಿಯಲ್ಲಿ ಪಾಕಿಸ್ತಾನದ ಇದನ್ನು ಉಲ್ಲಂಘಿಸಿದೆ. ಜಮ್ಮು ಕಾಶ್ಮೀರದ ಹಲವೆಡೆಗಳಲ್ಲಿ ದಾಳಿ ನಡೆಸಿದೆ. ಶ್ರೀನಗರ ಮೇಲೆ ಪಾಕ್‌ನ ಹಲವು ಡ್ರೋನ್‌ಗಳು ಹಾರಾಡುತ್ತಿದ್ದು, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇದನ್ನು ಖಚಿತಪಡಿಸಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ(Pahalgam Terror attack) ಮೆರೆದು ಅಮಾಯಕ 26 ಪ್ರವಾಸಿಗರನ್ನು ಬಲಿ ಪಡೆದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಕ್ಷುಬ್ದತೆ ಮತ್ತಷ್ಟು ಹೆಚ್ಚಾಗಿತ್ತು. ಪ್ರತೀಕಾರದ ಪಣ ತೊಟ್ಟಿದ್ದ ಭಾರತ, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಯನ್ನು ಗುರಿಯಾಗಿಸಿ ಒಂಬತ್ತು ಭಯೋತ್ಪಾಕ ಶಿಬಿರಗಳನ್ನು ಪುಡಿಗಟ್ಟಿತ್ತು. ಇದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ಒಂದು ರೀತಿಯ ಯುದ್ಧೋನ್ಮಾದದ ವಾತಾವರಣ ಸೃಷ್ಟಿಯಾಗಿತ್ತು. ಕದನ ವಿರಾಮ ಉಲ್ಲಂಘಿಸಿ ಪಾಕ್ ಜಮ್ಮು, ಪಂಜಾಬ್, ರಾಜಸ್ತಾನ, ಗುಜರಾತ್ ಗಡಿ ಪ್ರದೇಶಗಳಲ್ಲಿಗುಂಡಿನ ಚಕಮಕಿ, ಕ್ಷಿಪಣಿ, ಡ್ರೋನ್ ದಾಳಿ ನಡೆಸಿ ಪುಂಡಾಟ ಮೆರೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿರುವ ವಾಯನೆಲೆ, ಸೇನಾ ನೆಲೆಯನ್ನು ಪುಡಿಗಟ್ಟಿತ್ತು. ಹೀಗೆ ಕ್ಷಣ ಕ್ಷಣಕ್ಕೂ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ವಾತಾವರಣ ಭೀತಿಯನ್ನುಂಟು ಮಾಡುವಷ್ಟು ಹೆಚ್ಚಾಗುತ್ತಲೇ ಇತ್ತು. ಈ ಎಲ್ಲದರ ನಡುವೆ ಅನಿರೀಕ್ಷಿತ ಬೆಳವಣಿಗೆಯೊಂದು ಇಂದು ನಡೆದಿದ್ದು, ಉಭಯ ರಾಷ್ಟ್ರಗಳು ಅಚ್ಚರಿ ಎಂಬಂತೆ ಕದನ ವಿರಾಮ(India-Pak ceasefire) ಘೋಷಿಸಿದ್ದವು.