ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಟ್ಸಾಪ್ ಬಳಿಕ ಟೆಲಿಗ್ರಾಂ, ಸಿಗ್ನಲ್‌ಗೂ ಕೇಂದ್ರದ ನೋಟಿಸ್! ಯೂಸರ್‌ನೇಮ್ ಫೀಚರ್‌ ಭದ್ರತೆ ಬಗ್ಗೆ ವರದಿ ಕೇಳಿದ ಸರ್ಕಾರ

ಕೇಂದ್ರ ಸರ್ಕಾರವು ವಾಟ್ಸ್ಆಪ್, ಟೆಲಿಗ್ರಾಂ ಹಾಗೂ ಸಿಗ್ನಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಯೂಸರ್‌ನೇಮ್ (Username) ವೈಶಿಷ್ಟ್ಯದ ಕುರಿತು ಭದ್ರತಾ ಕಳವಳ ವ್ಯಕ್ತಪಡಿಸಿದೆ. ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೇ ಕೇವಲ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸುವ ವ್ಯವಸ್ಥೆಯಿಂದ ನಕಲಿ ಖಾತೆಗಳ ಸೃಷ್ಟಿ, ವ್ಯಕ್ತಿತ್ವ ಕಳವು, ಫಿಶಿಂಗ್, ಆನ್‌ಲೈನ್ ಹಣಕಾಸು ವಂಚನೆ ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' ಮಾದರಿಯ ಸೈಬರ್ ಅಪರಾಧಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಟೆಲಿಗ್ರಾಂ

ನವದೆಹಲಿ: ವಾಟ್ಸ್ಆಪ್‌ಗೆ ಯೂಸರ್‌ನೇಮ್ (Username) ವೈಶಿಷ್ಟ್ಯದ ಕುರಿತು ನೋಟಿಸ್ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದೀಗ ಟೆಲಿಗ್ರಾಂ (Telegram) ಹಾಗೂ ಸಿಗ್ನಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಗೂ ನೋಟಿಸ್ ಜಾರಿ ಮಾಡಿದೆ. ಯೂಸರ್‌ನೇಮ್ ಆಧಾರಿತ ಖಾತೆ ವ್ಯವಸ್ಥೆ ಕುರಿತು ಸಂಪೂರ್ಣ ಮಾಹಿತಿ, ಅದರ ಭದ್ರತಾ ಕ್ರಮಗಳು ಹಾಗೂ ದುರುಪಯೋಗವನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಟೆಲಿಗ್ರಾಂನಲ್ಲಿ ಈಗಾಗಲೇ ಯೂಸರ್‌ನೇಮ್ ಸೌಲಭ್ಯ ಲಭ್ಯವಿದ್ದು, ಸಿಗ್ನಲ್‌ನಲ್ಲಿ ಈ ವೈಶಿಷ್ಟ್ಯ ಐಚ್ಛಿಕ (Optional) ರೂಪದಲ್ಲಿ ಬಳಕೆಯಲ್ಲಿದೆ. ಇನ್ನು ವಾಟ್ಸ್ಆಪ್‌ನಲ್ಲಿ ಈ ವೈಶಿಷ್ಟ್ಯವನ್ನು ಇನ್ನೂ ಅಧಿಕೃತವಾಗಿ ಜಾರಿಗೊಳಿಸಲಾಗಿಲ್ಲ. ಸರ್ಕಾರದ ಸೂಚನೆಯಂತೆ, ಭದ್ರತಾ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವೈಶಿಷ್ಟ್ಯವನ್ನು ಜಾರಿಗೊಳಿಸದಂತೆ ವಾಟ್ಸ್ಆಪ್‌ಗೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಪ್ರಮುಖ ಆತಂಕವೆಂದರೆ, ಫೋನ್ ಸಂಖ್ಯೆಯನ್ನು ಮರೆಮಾಡಿ ಕೇವಲ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸುವ ವ್ಯವಸ್ಥೆ ಜಾರಿಗೆ ಬಂದರೆ ಸೈಬರ್ ಅಪರಾಧಿಗಳಿಗೆ ಅನುಕೂಲವಾಗಬಹುದು. ನಕಲಿ ಗುರುತು ಸೃಷ್ಟಿಸಿ ಇತರರ ಹೆಸರಿನಲ್ಲಿ ಖಾತೆ ತೆರೆಯುವುದು, ಸಾರ್ವಜನಿಕ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಅಥವಾ ಕಂಪನಿಗಳ ಹೆಸರಿನಲ್ಲಿ ವಂಚನೆ ನಡೆಸುವುದು, ಫಿಶಿಂಗ್, ಆನ್‌ಲೈನ್ ಹಣಕಾಸು ವಂಚನೆ ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' ಮಾದರಿಯ ಮೋಸ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, ಯೂಸರ್‌ನೇಮ್ ವೈಶಿಷ್ಟ್ಯವನ್ನು ಹೇಗೆ ಸುರಕ್ಷಿತವಾಗಿರಿಸಲಾಗುತ್ತದೆ? ನಕಲಿ ಖಾತೆಗಳನ್ನು ಹೇಗೆ ಪತ್ತೆಹಚ್ಚಲಾಗುತ್ತದೆ? ದುರುಪಯೋಗ ತಡೆಯಲು ಯಾವ ತಾಂತ್ರಿಕ ಕ್ರಮಗಳಿವೆ? ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ಕೇಳಿದೆ.

ವಾಟ್ಸಾಪ್‌ ಯೂಸರ್‌ನೇಮ್ ಫೀಚರ್‌ಗೆ ಕೇಂದ್ರದ ಬ್ರೇಕ್; ವಿವರಣೆ ಕೇಳಿ ಮೆಟಾಗೆ ಶೋಕಾಸ್ ನೋಟಿಸ್ ಜಾರಿ

ಈ ಬೆಳವಣಿಗೆಯ ನಡುವೆ Zoho ಸಹ-ಸ್ಥಾಪಕ ಹಾಗೂ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರು, "ನಿಯಂತ್ರಣಾತ್ಮಕ ಬದಲಾವಣೆಗಳಿಗೆ ಅನುಗುಣವಾಗಿ ನಮ್ಮ Arattai ಮೆಸೇಜಿಂಗ್ ಆ್ಯಪ್‌ನ ಯೂಸರ್‌ನೇಮ್ ಆಧಾರಿತ ಖಾತೆ ವೈಶಿಷ್ಟ್ಯವನ್ನು ಸ್ಥಗಿತಗೊಳಿಸುತ್ತೇವೆ" ಎಂದು ಸಾಮಾಜಿಕ ಜಾಲತಾಣ Xನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ವಾಟ್ಸ್ಆಪ್ ತನ್ನ ಪ್ರತಿಕ್ರಿಯೆಯಲ್ಲಿ ಭದ್ರತೆಗೆ ಹಲವು ಹಂತಗಳ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದೆ. ಪ್ರಮುಖ ಸಾರ್ವಜನಿಕ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಗಣ್ಯರ ಹೆಸರನ್ನು ದುರುಪಯೋಗವಾಗದಂತೆ ಕಾಯ್ದಿರಿಸಲಾಗಿದೆ. ಅದಲ್ಲದೆ, ನಕಲಿ ಖಾತೆಗಳನ್ನು ಗುರುತಿಸುವ ವ್ಯವಸ್ಥೆ, ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯುವ ತಂತ್ರಜ್ಞಾನ, ಹೊಸ ಖಾತೆಗಳು ಸಂಪರ್ಕಿಸಬಹುದಾದ ಬಳಕೆದಾರರ ಸಂಖ್ಯೆಗೆ ಮಿತಿ ಹಾಗೂ ಯೂಸರ್‌ನೇಮ್ ಊಹಿಸಿ ಹುಡುಕುವ ಪ್ರಯತ್ನಗಳನ್ನು ತಡೆಯುವ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕೇಂದ್ರ ಸರ್ಕಾರವು ಮೆಟಾದಿಂದ ಬರುವ ಅಧಿಕೃತ ಉತ್ತರ ಹಾಗೂ ಭದ್ರತಾ ತಜ್ಞರ ಸಲಹೆಗಳನ್ನು ಪರಿಶೀಲಿಸಿದ ಬಳಿಕ, ಯೂಸರ್‌ನೇಮ್ ವೈಶಿಷ್ಟ್ಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.