ಚೆನ್ನೈ, ಅ. 24: ವಿಮಾನ ಇಂಧನದ (Aviation Turbine Fuel – ATF) ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (VAT) ಕಡಿತಗೊಳಿಸುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಮಾನ ಪ್ರಯಾಣವನ್ನು ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಕಾರ ಅತ್ಯಗತ್ಯ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ ತಿಳಿಸಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆಯಡಿ, ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಇಂಧನದ ಮೇಲಿನ VAT ಅನ್ನು ಶೇ. 29ರಿಂದ ಶೇ. 16ಕ್ಕೆ ಇಳಿಸಲಾಗಿದೆ. ತಮಿಳುನಾಡಿನ ಇತರ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಈ ತೆರಿಗೆಯನ್ನು ಶೇ. 1ಕ್ಕೆ ಕಡಿತಗೊಳಿಸಲಾಗಿದೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ರಾಮ್ ಮೋಹನ್ ನಾಯ್ಡು, ವಿಮಾನಯಾನ ಕ್ಷೇತ್ರಕ್ಕೆ (Aviation Sector) ಇದು ಸಕಾರಾತ್ಮಕ ಹೆಜ್ಜೆ ಎಂದು ಹೇಳಿದ್ದಾರೆ. ವಿಮಾನ ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುವುದರ ಜತೆಗೆ ಪ್ರಯಾಣಿಕರ ಹಿತಾಸಕ್ತಿಗೆ ಆದ್ಯತೆ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮಾನ್ಯ ಗುರಿಯಾಗಬೇಕು ಎಂದು ಅವರು ತಿಳಿಸಿದ್ದಾರೆ.
ಗೋವಾದಲ್ಲೂ ವಿಮಾನ ಇಂಧನ ತೆರಿಗೆ ಕಡಿತ
ಇತ್ತೀಚೆಗೆ ಗೋವಾ ಸರ್ಕಾರವೂ ವಿಮಾನ ಇಂಧನದ ಮೇಲಿನ VAT ಅನ್ನು ಶೇ. 7ಕ್ಕೆ ಇಳಿಸಿದೆ. ಪರಿಷ್ಕೃತ ತೆರಿಗೆ ದರ ಅಕ್ಟೋಬರ್ 24ರಿಂದ ಜಾರಿಗೆ ಬಂದಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರದ ಈ ನಿರ್ಧಾರವನ್ನೂ ರಾಮ್ ಮೋಹನ್ ನಾಯ್ಡು ಸ್ವಾಗತಿಸಿದ್ದಾರೆ. ಇಂಧನ ವೆಚ್ಚ ಕಡಿಮೆಯಾಗುವುದರಿಂದ ವಿಮಾನಯಾನ ಸಂಸ್ಥೆಗಳಿಗೆ ಅನುಕೂಲವಾಗುವುದರ ಜೊತೆಗೆ, ವಿಮಾನ ಸಂಪರ್ಕ ಸುಧಾರಿಸಲಿದೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಗೈಡ್ಲೈನ್ ಸಿದ್ಧಪಡಿಸಿದ ಕರ್ನಾಟಕ ಹೈಕೋರ್ಟ್
ಗೋವಾ ನಿರ್ಧಾರಕ್ಕೆ ಏರ್ ಇಂಡಿಯಾ, ಇಂಡಿಗೋ ಬೆಂಬಲ
ಗೋವಾ ಸರ್ಕಾರದ ತೆರಿಗೆ ಕಡಿತದ ನಿರ್ಧಾರಕ್ಕೆ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ (Air India) ಮತ್ತು ಇಂಡಿಗೋ (IndiGo) ಕೂಡ ಬೆಂಬಲ ವ್ಯಕ್ತಪಡಿಸಿವೆ. ಗೋವಾದ ಕಡಲತೀರಗಳು, ಸಂಸ್ಕೃತಿ ಮತ್ತು ಆತಿಥ್ಯವನ್ನು ಅನುಭವಿಸಲು ಬಯಸುವ ಪ್ರವಾಸಿಗರಿಗೆ ರಾಜ್ಯವನ್ನು ತಲುಪುವುದು ಈ ನಿರ್ಧಾರದಿಂದ ಸುಲಭವಾಗಲಿದೆ ಎಂದು ಏರ್ ಇಂಡಿಯಾ ಅಭಿಪ್ರಾಯಪಟ್ಟಿದೆ. ಇತರ ರಾಜ್ಯಗಳೂ ಇದೇ ರೀತಿಯ ಕ್ರಮ ಕೈಗೊಳ್ಳುವ ಮೂಲಕ ದೇಶದಲ್ಲಿ ವಿಮಾನ ಪ್ರಯಾಣಕ್ಕೆ ಉತ್ತೇಜನ ನೀಡಬೇಕು ಎಂದು ಸಂಸ್ಥೆ ಆಶಿಸಿದೆ.
ಅಕ್ಟೋಬರ್ 23ರಂದು ಗೋವಾ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದ ಇಂಡಿಗೋ, ತೆರಿಗೆ ಕಡಿತವು ವಿಮಾನಯಾನ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ವಿಮಾನ ಸಂಪರ್ಕ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಿತ್ತು.
ವಿಮಾನ ಇಂಧನ ತೆರಿಗೆ ಕಡಿತದಿಂದ ಏನು ಲಾಭ?
ವಿಮಾನ ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ ಕಡಿಮೆಯಾದರೆ ವಿಮಾನಯಾನ ಸಂಸ್ಥೆಗಳ ಇಂಧನ ವೆಚ್ಚ ತಗ್ಗುವ ಸಾಧ್ಯತೆಯಿದೆ. ಇದರಿಂದ ಸಂಸ್ಥೆಗಳ ನಿರ್ವಹಣಾ ವೆಚ್ಚ ಕಡಿಮೆಯಾಗಬಹುದು.
ಭಾರತದಲ್ಲಿ ವಿಮಾನ ಇಂಧನವು ಸರಕು ಮತ್ತು ಸೇವಾ ತೆರಿಗೆಯ (GST) ವ್ಯಾಪ್ತಿಯಿಂದ ಹೊರಗಿರುವುದರಿಂದ, ರಾಜ್ಯ ಸರ್ಕಾರಗಳು ವಿಧಿಸುವ VAT ದರಗಳು ವಿಭಿನ್ನವಾಗಿವೆ. ಹೆಚ್ಚಿನ ಇಂಧನ ಬೆಲೆ ಮತ್ತು ತೆರಿಗೆ ದರಗಳು ವಿಮಾನಯಾನ ಸಂಸ್ಥೆಗಳ ಆರ್ಥಿಕ ಸ್ಥಿತಿಯ ಮೇಲೆ ಒತ್ತಡ ಉಂಟುಮಾಡುತ್ತವೆ ಎಂದು PRS ಲೆಜಿಸ್ಲೇಟಿವ್ ರಿಸರ್ಚ್ ತಿಳಿಸಿದೆ.
ತೆರಿಗೆ ಕಡಿತದಿಂದ ಕಡಿಮೆ ಪ್ರಯಾಣಿಕರಿರುವ ಮಾರ್ಗಗಳಲ್ಲಿಯೂ ವಿಮಾನ ಸೇವೆಗಳನ್ನು ನಿರ್ವಹಿಸುವುದು ಆರ್ಥಿಕವಾಗಿ ಕಾರ್ಯಸಾಧ್ಯವಾಗಬಹುದು. ವಿಮಾನಗಳ ಸಂಚಾರದ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಪ್ರಮುಖ ನಗರಗಳ ಹೊರಗಿನ ವಿಮಾನ ನಿಲ್ದಾಣಗಳಿಂದ ಸೇವೆಗಳನ್ನು ಆರಂಭಿಸಲು ಇದು ಉತ್ತೇಜನ ನೀಡುವ ಸಾಧ್ಯತೆಯಿದೆ.