ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರಂಭದಲ್ಲಿ ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆಗೆಯ ಪ್ರಸ್ತಾವ ಮುಂದಿಟ್ಟಿದ್ದ ಕೇಂದ್ರ: ಬಳಿಕ ರಾಜೀನಾಮೆಗೆ ಸಿಜೆಪಿ ಒಪ್ಪಿಸಿದ್ದು ಹೇಗೆ?

Dharmendra Pradhan: ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ ಕಾಕ್ರೋಚ್ ಜನತಾ ಪಾರ್ಟಿಯ ನಿಯೋಗವು, ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬದಲು ಅವರ ಖಾತೆಯನ್ನು ಬದಲಾಯಿಸುವ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಈ ವಿಚಾರವನ್ನು ಸಿಜೆಪಿ ನಾಯಕರು ತಿಳಿಸಿದ್ದಾರೆ.

ಸಿಜೆಪಿ ನಾಯಕರನ್ನು ದೆಹಲಿ ಭೇಟಿಯಾಗಿದ್ದ ಕೇಂದ್ರ ಸಚಿವರು

ನವದೆಹಲಿ, ಜು. 28: ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆ ವೇಳೆ ನಡೆದ ಬೆಳವಣಿಗೆ ಬಗ್ಗೆ ಕಾಕ್ರೋಚ್‌ ಜನತಾ ಪಾರ್ಟಿಯ (Cockroach Janta Party) ನಾಯಕರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಕೇಂದ್ರವು ಪ್ರಧಾನ್‌ ಅವರ ಖಾತೆ ಬದಲಾವಣೆಯ ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ ಸಿಜೆಪಿ ನಾಯಕರು ಇದನ್ನು ಒಪ್ಪದೆ ರಾಜೀನಾಮೆಗೆ ಪಟ್ಟು ಹಿಡಿದಿತ್ತು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ (JP Nadda) ಮತ್ತು ಜಿತೇಂದ್ರ ಸಿಂಗ್ (Jitendra Singh) ಅವರನ್ನು ಭೇಟಿ ಮಾಡಿದ ಕಾಕ್ರೋಚ್ ಜನತಾ ಪಾರ್ಟಿಯ ನಿಯೋಗವು ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬದಲು ಅವರ ಖಾತೆಯನ್ನು ಬದಲಾಯಿಸುವ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ಹೇಳಲಾಗಿದೆ. ಸಚಿವರನ್ನು ಹುದ್ದೆಯಿಂದ ತೆಗೆದುಹಾಕುವುದು ಅಥವಾ ಅವರ ಖಾತೆಯನ್ನು ಬದಲಾಯಿಸುವುದು ಸಂಪೂರ್ಣವಾಗಿ ಪ್ರಧಾನ ಮಂತ್ರಿಯ ವಿವೇಚನೆಗೆ ಒಳಪಟ್ಟ ವಿಷಯ ಎಂದು ಕೇಂದ್ರದ ಮೂಲಗಳು ವಾದಿಸಿದ್ದವು ಎನ್ನಲಾಗಿದೆ.

ಆಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಪ್ರತಿನಿಧಿಸುವ ಸಿಜೆಪಿ ನಿಯೋಗವು ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ಶಿಕ್ಷಣ ಸಚಿವ ಪ್ರಧಾನ್ ಅವರ ರಾಜೀನಾಮೆಗೆ ಪರ್ಯಾಯವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಶನಿವಾರ (ಜುಲೈ 25) ಮಧ್ಯಾಹ್ನ ಕೇಂದ್ರ ಸಚಿವರೊಂದಿಗೆ ನಡೆದ ಮೂರನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಸಿಜೆಪಿ ನಾಯಕರು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ, ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರಿಂದ ಸಿಜೆಪಿ ತನ್ನ ಪ್ರತಿಭಟನೆ ಕೈಬಿಟ್ಟಿತು.

ಜುಲೈ 20ರಂದು ಜಂತರ್ ಮಂತರ್‌ನಿಂದ ಸಿಜೆಪಿ ನಡೆಸಿದ ಸಂಸತ್ ಚಲೋ ಮೆರವಣಿಗೆಯ ವೇಳೆ, ಸಿಜೆಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಅವರ ಫೋನ್‌ಗಳನ್ನು ಕಿತ್ತುಕೊಂಡು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಹೇಳಿದ್ದರು. ನಡ್ಡಾ ಅವರ ನಿವಾಸದಲ್ಲಿ 10 ನಿಮಿಷಗಳ ಸಭೆಗಾಗಿ ನಿಯೋಗವು ಎರಡು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಹೇಳಿತ್ತು. ಬಳಿಕ ಸಿಜೆಪಿ ನಿಯೋಗವು ಎರಡನೇ ಬಾರಿಗೆ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿತ್ತು.

ದೆಹಲಿ ಪ್ರತಿಭಟನೆಯಲ್ಲಿ ಕ್ರಿಮಿನಲ್ ದಾಖಲೆ ಹೊಂದಿರುವವರ ಮುಖ ಗುರುತಿಸಿದ AI

3 ಬೇಡಿಕೆಗಳ ಪಟ್ಟಿ

ನಡ್ಡಾ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸಿಜೆಪಿ ಮೂರು ಪ್ರಮುಖ ಬೇಡಿಕೆಗಳನ್ನು ಪಟ್ಟಿ ಮಾಡಿತ್ತು: ಜಂತರ್ ಮಂತರ್‌ನಿಂದ ಪೊಲೀಸರು ಬಂಧಿಸಿ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯುವಾಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವುದು; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವುದು ಮತ್ತು ನೀಟ್ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ 1 ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿತ್ತು.

ಒಂದು ದಿನದ ನಂತರ, ದೆಹಲಿ ಹೈಕೋರ್ಟ್ ಆದೇಶದ ಬಳಿಕ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಹರಿಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಸಂಸತ್ತಿನ ಮೆರವಣಿಗೆ ವೇಳೆ ಲಾಠಿಚಾರ್ಜ್, ಅಶ್ರುವಾಯು ಸಿಡಿಸಲಾಯಿತು. ಪ್ರತಿಭಟನೆ ನಿಲ್ಲದೆ ಮತ್ತಷ್ಟು ಹೆಚ್ಚಾಯಿತು.

ಈ ಮಧ್ಯೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ತೀವ್ರವಾಗಿ ಒತ್ತಾಯಿಸಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ರಾಜೀನಾಮೆ ನೀಡಿದ ನಂತರ ಸಹಾನುಭೂತಿ ವ್ಯಕ್ತಪಡಿಸಿದರು.