ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flight: ತಪ್ಪಿದ ಭಾರಿ ದುರಂತ; ವಿಂಡ್‌ಶೀಲ್ಡ್‌ನಲ್ಲಿ ಬಿರುಕುಬಿಟ್ಟರೂ ಇಂಡಿಗೋ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಪೈಲಟ್‌

ಟುಟಿಕೋರಿನ್‌ನಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ನೆಲಕ್ಕಿಳಿಸಲಾಯಿತು. ಕೂಡಲೇ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಕಾರಣ ಯಾವುದೇ ತುರ್ತು ಪರಿಸ್ಥಿತಿ ಘೋಷಿಸಲಾಗಿಲ್ಲ.

ಚೆನ್ನೈಯಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಸಾಂದರ್ಭಿಕ ಚಿತ್ರ -

Ramesh B Ramesh B Oct 13, 2025 10:19 PM

ಚೆನ್ನೈ, ಅ. 13: ಚೆನ್ನೈಯಲ್ಲಿ ಭಾರೀ ವಿಮಾನ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ಟುಟಿಕೋರಿನ್‌ನಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದ (IndiGo Flight) ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಳಿಕ ಅದನ್ನು ಸುರಕ್ಷಿತವಾಗಿ ನೆಲಕ್ಕಿಳಿಸಲಾಯಿತು. ಕೂಡಲೇ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಎಟಿಆರ್‌ ಫ್ಲೈಟ್‌ 6ಇ1607 ವಿಮಾನ 75 ಪ್ರಯಾಣಿಕರನ್ನು ಹೊತ್ತುಕೊಂಡು ಸಂಚಾರ ಆರಂಭಿಸಿದ ವೇಳೆ ಘಟನೆ ನಡೆದಿದೆ. ವಿಂಡ್‌ಶೀಲ್ಡ್‌ನಲ್ಲಿ ಕಂಡುಬಂದ ಬಿರುಕು ಗಮನಿಸಿದ ಪೈಲಟ್‌ ವಿಮಾನವನ್ನು ಸುರಕ್ಷಿತವಾಗಿ ಚೆನ್ನೈ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪಾಯವನ್ನರಿತ ಪೈಲಟ್‌ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಸುರಕ್ಷಿತ ಭೂಸ್ಪರ್ಶಕ್ಕಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಟ್ಯಾಂಡ್‌ಬೈ ಘೋಷಿಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಕಾರಣ ಯಾವುದೇ ತುರ್ತು ಪರಿಸ್ಥಿತಿ ಘೋಷಿಸಲಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. "ಯಾವುದೇ ತುರ್ತು ಪರಿಸ್ಥಿತಿ ಘೋಷಿಸಲಾಗಿಲ್ಲ. ವಿಮಾನವು ಸುರಕ್ಷಿತವಾಗಿ ಇಳಿಯಿತು" ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಆರಂಭ

ವಿಂಡ್‌ಶೀಲ್ಡ್‌ನಲ್ಲಿ ಕಾಣಿಸಿಕೊಂಡ ಬಿರುಕಿನ ಕಾರಣದ ತಿಳಿಯಲು ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. 4 ದಿನಗಳ ಅಂತರದಲ್ಲಿ ಇಂಡಿಗೋ ವಿಮಾನದಲ್ಲಿ ನಡೆದ 2ನೇ ಇಂತಹದ್ದೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಮಧುರೈ-ಚೆನ್ನೈ ವಿಮಾನವು ಪ್ರಯಾಣ ಆರಂಭಿಸಿದ ಬಳಿಕ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಂಡುಬಂದಿತ್ತು. ನಂತರ ಅದನ್ನುಚೆನ್ನೈನಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಲಾಯಿತು. ಎರಡೂ ಘಟನೆಗಳಲ್ಲಿ ಪ್ರಯಾಣಿಕರೆ ಯಾವುದೇ ರೀತಿಯ ಗಾಯಗಳಾಗಿಲ್ಲ ಮತ್ತು ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ.

ಈ ಸುದ್ದಿಯನ್ನೂ ಓದಿ: IndiGo Pilot: ಪೈಲಟ್‌ ಆಗಲು ನೀನು ಯೋಗ್ಯನಲ್ಲ,ಹೋಗಿ ಬೂಟು ಹೊಲಿ; ಹಿರಿಯ ಅಧಿಕಾರಿಗಳಿಂದ ಪೈಲಟ್‌ಗೆ ಕಿರುಕುಳ!

ದೆಹಲಿ-ಗೋವಾ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಮುಂಬೈ: ಕೆಲವು ದಿನಗಳ ಹಿಂದೆ ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿತ್ತು. ಭೂ ಸ್ಪರ್ಶ ಮಾಡುವ ಸಂದರ್ಭದಲ್ಲಿ ವಿಮಾನದ ಪೈಲಟ್ 'ಪ್ಯಾನ್ ಪ್ಯಾನ್ ಪ್ಯಾನ್' ಎಂದು ಘೋಷಿಸಿದ್ದರು. ಎಂಜಿನ್ ಸಂಖ್ಯೆ 1ರಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಪೈಲಟ್ 'ಪ್ಯಾನ್ ಪ್ಯಾನ್ ಪ್ಯಾನ್' ಎಂದು ಕೂಗಿದ್ದರು. ತಕ್ಷಣವೇ ವಿಮಾನವನ್ನು ಭೂಸ್ಪರ್ಶ ಮಾಡಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದರು.

ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಇಂಡಿಗೊ ವಿಮಾನವು, ಗಾಳಿಯಲ್ಲಿ ಎಂಜಿನ್ ವೈಫಲ್ಯದಿಂದಾಗಿ ಮುಂಬೈಗೆ ವಾಪಸ್ ಬಂದ ನಂತರ, ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ವಿಮಾನದಲ್ಲಿನ ಪ್ರಯಾನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಇಂಡಿಗೋ ತಿಳಿಸಿತ್ತು. ವಿಮಾನವು ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಅಗತ್ಯ ತಪಾಸಣೆ ಮತ್ತು ನಿರ್ವಹಣೆಗೆ ಒಳ ಪಡಿಸಲಾಯಿತು. ಪ್ರಯಾಣವನ್ನು ಪೂರ್ಣಗೊಳಿಸಲು ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಯಿತು. ಈ ವೇಳೆ ಏರ್‌ಬಸ್ A320 ನಿಯೋ ವಿಮಾನದಲ್ಲಿ 191 ಪ್ರಯಾಣಿಕರಿದ್ದರು.