Supreme Court: ಮತಗಳವು ಪ್ರಕರಣ; ರಾಹುಲ್ ಗಾಂಧಿ ಆರೋಪಗಳ ಕುರಿತು SIT ತನಿಖೆಗೆ ಸುಪ್ರೀಂ ನಕಾರ
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಮತ ಕಳವು ಆರೋಪದ ಬಗ್ಗೆ ಮಾಜಿ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಆಗಸ್ಟ್ 7ರಂದು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ಆರೋಪಗಳ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.

ರಾಹುಲ್ ಗಾಂಧಿ -

ನವದೆಹಲಿ: ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul Gandhi) ಅವರ ಮತಗಳವು ಆರೋಪಗಳ ಸಂಬಂಧ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ (Surya Kant) ಮತ್ತು ಜೋಯ್‌ಮಾಲಾ ಬಗ್ಚಿ (Joymala Bagchi) ಅವರನ್ನು ಒಳಗೊಂಡ ಪೀಠವು ಈ ನಿರ್ಧಾರ ಕೈಗೊಂಡಿದ್ದು, ಅರ್ಜಿದಾರರು ಈ ಬಗ್ಗೆ ಭಾರತ ಚುನಾವಣಾ ಆಯೋಗ (Election Commission of India)ವನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.
ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ ಪೀಠವು ಈ ಅರ್ಜಿ ಸ್ವೀಕರಿಸಲು ನಿರಾಕರಿಸಿದ್ದು, "ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಲಾಗಿದೆ ಎನ್ನಲಾದ ಈ ರಿಟ್ ಅರ್ಜಿಯನ್ನು ಪರಿಗಣಿಸಲಾಗದು" ಎಂದು ಸ್ಪಷ್ಟಪಡಿಸಿದೆ. ಅಲ್ಲದೆ "ಅರ್ಜಿದಾರರು ಲಭ್ಯವಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದು" ಎಂದು ಕೋರ್ಟ್ ಹೇಳಿದೆ.
ಈ ಸುದ್ದಿಯನ್ನು ಓದಿ: Physical Assault: ಬಾಲಾಪರಾಧಿ ಗೃಹದಲ್ಲಿ ಪೈಶಾಚಿಕ ಕೃತ್ಯ! ಬಾಲಕರ ಮೇಲೆ ಮೇಲೆ ಲೈಂಗಿಕ ದೌರ್ಜನ್ಯ
ಲೋಕಸಭೆ (Lok Sabha) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ (BJP) ನೇತೃತ್ವದ ಎನ್‌ಡಿಎ(NDA) ಸರ್ಕಾರ ಮತಗಳ್ಳತನ ಮಾಡುತ್ತಿದೆ, ಚುನಾವಣಾ ಆಯೋಗವು ನರೇಂದ್ರ ಮೋದಿ (Narendra Modi) ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಹಲವು ಬಾರಿ ಆರೋಪಿಸಿದ್ದಾರೆ. ಆದರೆ ಈ ಎಲ್ಲ ಆರೋಪಿಗಳನ್ನು ತಳ್ಳಿಹಾಕಿರುವ ಚುನಾವಣಾ ಆಯೋಗವು, "ರಾಹುಲ್ ಗಾಂಧಿ ತಮ್ಮ ಆರೋಪಗಳನ್ನು ಸಾಬೀತುಪಡಿಸಲಿ" ಎಂದು ಹೇಳಿದೆ.
ಅದಾಗ್ಯೂ, ರಾಹುಲ್ ಗಾಂಧಿ ತಮ್ಮ ಆರೋಪಗಳಿಗೆ ಈಗಲೂ ಬದ್ಧರಾಗಿದ್ದು, "ಇಂದು ಮತಗಳ್ಳತನ ದೇಶದ ಪ್ರಮುಖ ಸಮಸ್ಯೆಯಾಗಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಕೂಡ ಫಿಕ್ಸಿಂಗ್ ಮಾಡಿಕೊಳ್ಳಲಾಗಿತ್ತು" ಎಂದಿದ್ದಾರೆ.
"ಮಹರಾಷ್ಟ್ರ ಮತ್ತು ಹರಿಯಾಣ ಚುನಾವಣೆಗಳಲ್ಲೂ ಮತಗಳ್ಳತನ ನಡೆದಿದ್ದು, ಇತ್ತೀಚೆಗೆ ಕರ್ನಾಟಕದಲ್ಲಿ ನಾವು ಅದನ್ನು ಸಾಬೀತು ಪಡಿಸಿದ್ದೇವೆ. ಆದ್ದರಿಂದಲೇ ಎಲ್ಲೆಡೆ ಜನರು ವೋಟ್ ಚೋರ್ (ಮತ ಕಳ್ಳ) ಎಂದು ಕೂಗುತ್ತಿದ್ದಾರೆ" ಎಂದು ಸೆಪ್ಟೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದರು.
ಇನ್ನು, ಬಿಜೆಪಿಯು ರಾಹುಲ್ ಗಾಂಧಿ ಅವರ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ಇವೆಲ್ಲವೂ 'ಆಧಾರಹಿತ' ಎಂದು ಹೇಳಿದೆ. "ವಾಸ್ತವವೆಂದರೆ 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ 48% ಮತಗಳೊಂದಿಗೆ 543ರಲ್ಲಿ 414 ಸ್ಥಾನಗಳ ಪಡೆದಿತ್ತು. ನಂತರದ 30 ವರ್ಷಗಳಲ್ಲಿ ಕಾಂಗ್ರೆಸ್ ತೀರ ಕಳಪೆ ಪ್ರದರ್ಶನ ತೋರಿದ್ದು, 2014ರಲ್ಲಿ 543ರಲ್ಲಿ ಕೇವಲ 44 ಸ್ಥಾನಗಳೊಂದಿಗೆ ಹೀನಾಯ ಸ್ಥಿತಿ ತಲುಪಿದೆ. ಹೀಗಾಗಿ ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ" ಎಂದು ಬಿಜೆಪಿ ತಿರುಗೇಟು ನೀಡಿದೆ.