ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಸ್ತೆ ಅಪಘಾತದಲ್ಲಿ ಗಾಯಗೊಂಡ ಯುವತಿಗೆ ನೆರವಾದ ಚಿರಾಗ್ ಪಾಸ್ವಾನ್; ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ

Viral Video: ಪಂಜಾಬ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವತಿಯನ್ನು ಗಮನಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಮ್ಮ ವಿಐಪಿ ಬೆಂಗಾವಲು ನಿಲ್ಲಿಸಿ, ಅಧಿಕೃತ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿ ತಕ್ಷಣ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಂಡರು. ಚಿಕಿತ್ಸೆ ಆರಂಭವಾಗಿದೆ ಎಂಬ ದೃಢೀಕರಣ ಪಡೆದ ಬಳಿಕವೇ ಅವರು ತಮ್ಮ ಪ್ರಯಾಣ ಮುಂದುವರಿಸಿದರು.

ಗಾಯಾಳು ಯುವತಿಗೆ ನೆರವಾದ ಚಿರಾಗ್ ಪಾಸ್ವಾನ್

ಚಂಡೀಗಢ, ಜು. 20: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) (Janshakti Party (Ram Vilas) ಅಧ್ಯಕ್ಷ ಚಿರಾಗ್ ಪಾಸ್ವಾನ್ (Chirag Paswan) ಪಂಜಾಬ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವತಿಗೆ ತಕ್ಷಣ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ನೆಟ್ಟಿಗರ ಗಮನ ಸೆಳೆದಿದೆ.

ಭಾನುವಾರ (ಜುಲೈ 19) ಅಮೃತಸರದಿಂದ ಜಲಂಧರ್‌ಗೆ ತೆರಳುತ್ತಿದ್ದ ವೇಳೆ, ಜಲಂಧರ್‌ನಿಂದ ಸುಮಾರು 10ರಿಂದ 15 ಕಿಲೋ ಮೀಟರ್ ದೂರದಲ್ಲಿರುವ ಡೆರಾ ಸಚ್ಖಂಡ್ ಬಲ್ಲನ್ ಸಮೀಪ ರಸ್ತೆ ಬದಿಯಲ್ಲಿ ಅಪಘಾತದಿಂದ ಗಾಯಗೊಂಡು ಬಿದ್ದಿದ್ದ ಯುವತಿಯನ್ನು ಗಮನಿಸಿದ ಚಿರಾಗ್ ಪಾಸ್ವಾನ್, ಕೂಡಲೇ ತಮ್ಮ ಬೆಂಗಾವಲು ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು.

ಅಪರಿಚಿತ ಯುವತಿಗೆ ನೆರವಾದ ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌:



ಬಳಿಕ ತಮ್ಮ ತಂಡದ ಸದಸ್ಯರಿಗೆ ಗಾಯಾಳುವನ್ನು ತಮ್ಮ ಅಧಿಕೃತ ವಾಹನದಲ್ಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಯಾವುದೇ ವಿಳಂಬವಾಗದಂತೆ ತಕ್ಷಣ ಯುವತಿಗೆ ಚಿಕಿತ್ಸೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಅದಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಚಿರಾಗ್ ಪಾಸ್ವಾನ್ ಸ್ವತಃ ಸ್ಥಳದಲ್ಲೇ ನಿಂತು ರಕ್ಷಣಾ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವುದು ಹಾಗೂ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿರುವುದು ಕಾಣಿಸುತ್ತದೆ.

ಎಎನ್‌ಐ ವರದಿ ಪ್ರಕಾರ, ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭವಾಗಿದೆ ಎಂಬ ದೃಢೀಕರಣ ದೊರಕುವವರೆಗೂ ಚಿರಾಗ್ ಪಾಸ್ವಾನ್ ಅಲ್ಲಿಂದ ತೆರಳಲಿಲ್ಲ. ಚಿಕಿತ್ಸೆ ಆರಂಭವಾಗಿದೆ ಎಂಬ ಮಾಹಿತಿ ಪಡೆದ ಬಳಿಕವೇ ಅವರು ತಮ್ಮ ಜಲಂಧರ್ ಪ್ರವಾಸವನ್ನು ಮುಂದುವರಿಸಿದರು.

ಚಿರಾಗ್ ಪಾಸ್ವಾನ್ ಅವರ ಈ ಮಾನವೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಕಷ್ಟದಲ್ಲಿದ್ದ ವ್ಯಕ್ತಿಗೆ ನೆರವಾದ ಅವರ ಕಾರ್ಯವನ್ನು ಹಲವರು ಶ್ಲಾಘಿಸಿದ್ದಾರೆ.