Members of Parliament: 5 ಬೆಡ್ ರೂಮ್, ಜಿಮ್; ದೆಹಲಿಯಲ್ಲಿ ಸಂಸದರಿಗೆ ನಿರ್ಮಿಸಿದ ಐಷಾರಾಮಿ ಮನೆ ಹೇಗಿದೆ ನೋಡಿ
ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸದರಿಗಾಗಿ ನಿರ್ಮಿಸಲಾದ ಆಧುನಿಕ ವಸತಿ ಸಂಕೀರ್ಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಈ ಯೋಜನೆಯು ಕೃಷ್ಣ, ಗೋದಾವರಿ, ಕೋಸಿ ಮತ್ತು ಹೂಗ್ಲಿ ಎಂಬ ನಾಲ್ಕು 23-ಅಂತಸ್ತಿನ ಗೋಪುರಗಳಲ್ಲಿ 184 ಟೈಪ್-VII ಫ್ಲ್ಯಾಟ್‌ಗಳನ್ನು ಒಳಗೊಂಡಿದೆ

ನೂತನವಾಗಿ ನಿರ್ಮಾಣವಾದ ಸಮುಚ್ಚಯ ಕಟ್ಟಡ

ನವದೆಹಲಿ: ನವದೆಹಲಿಯ (New Delhi) ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸದರಿಗಾಗಿ (Members of Parliament) ನಿರ್ಮಿಸಲಾದ ನೂತನ ವಸತಿ ಸಮುಚ್ಛಯ ಕಟ್ಟಡವನ್ನು ಪ್ರಧಾನ ಮಂತ್ರಿ (Prime Minister) ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಈ ಅಪಾರ್ಟಮೆಂಟ್ ಕೃಷ್ಣ, ಗೋದಾವರಿ, ಕೋಸಿ ಮತ್ತು ಹೂಗ್ಲಿ ಎಂಬ ನಾಲ್ಕು 23-ಅಂತಸ್ತನ್ನು ಹೊಂದಿದ್ದು, 184 ಟೈಪ್-VII ಫ್ಲ್ಯಾಟ್‌ಗಳನ್ನು ಒಳಗೊಂಡಿದೆ. ಈ ಫ್ಲ್ಯಾಟ್‌ಗಳು ಲುಟಿಯನ್ಸ್ ದೆಹಲಿಯ ಟೈಪ್-VIII ಬಂಗಲೆಗಳಿಗಿಂತಲೂ ವಿಶಾಲವಾಗಿದ್ದು, ಪ್ರತಿ ಫ್ಲ್ಯಾಟ್ ಸುಮಾರು 5,000 ಚದರ ಅಡಿಯಲ್ಲಿ ನಿರ್ಮಾಣವಾಗಿದೆ.
ಪ್ರತಿ ಫ್ಲ್ಯಾಟ್ ಗಳು ಐಷಾರಾಮಿಯಾಗಿದ್ದು, ಇದರಲ್ಲಿ ಡ್ರಾಯಿಂಗ್ ಮತ್ತು ಡೈನಿಂಗ್ ಕೊಠಡಿ, ಫ್ಯಾಮಿಲಿ ಲಾಂಜ್, ಪೂಜಾ ಕೊಠಡಿ ಮತ್ತು ಐದು ಬೆಡ್ ರೂಮ್‌ಗಳಿವೆ. ಪ್ರತಿ ಕೋಣೆಗೆ ಡ್ರೆಸ್ಸಿಂಗ್ ಏರಿಯಾ ಮತ್ತು ಅಟ್ಯಾಚ್ ಬಾತ್ ರೂಮ್ ಇದೆ. ಆಧುನಿಕ ಜೀವನ ಶೈಲಿಗೆ ತಕ್ಕಂತೆ ಅಡುಗೆ ಮನೆಯ ಇಂಟೀರಿಯರ್ ಅನ್ನು ಡಿಸೈನ್ ಮಾಡಿದ್ದು, ಕುಕ್ಕಿಂಗ್ ಹಬ್, ವಿಶಾಲ ಶೇಖರಣಾ ಸ್ಥಳವನ್ನು ಒಳಗೊಂಡಿದೆ. ಎಲ್ಲ ಕೊಠಡಿಗಳಲ್ಲಿ ಮಾಡ್ಯುಲರ್ ವಾರ್ಡ್‌ರೋಬ್‌ಗಳಿವೆ.
ಪ್ರತಿ ಕೊಠಡಿ ಮತ್ತು ಕಚೇರಿಯಿಂದ ಬಾಲ್ಕನಿಗಳನ್ನು ವಿಸ್ತರಿಸಲಾಗಿದೆ. ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿಯ ಸಂಚಾರ ಇರುತ್ತದೆ. ಕಚೇರಿ ಮತ್ತು ಮಾಸ್ಟರ್ ಬೆಡ್‌ರೂಮ್‌ನಲ್ಲಿ ಮರದ ಫಲಕಗಳಿಂದ ಕೂಡಿದ ಫ್ಲೋರಿಂಗ್ ಇದ್ದರೆ, ಬೇರೆ ಕಡೆ ವೆಟ್ರಿಫೈಡ್ ಟೈಲ್ಸ್ ಬಳಸಲಾಗಿದೆ. ಡಬಲ್-ಗ್ಲೇಜ್ಡ್ UPVC ಕಿಟಕಿಗಳು ಶಾಖ ನಿರೋಧನವನ್ನು ಸುಧಾರಿಸುತ್ತವೆ. VRV ಸಿಸ್ಟಮ್ ಮೂಲಕ ಏರ್-ಕಂಡಿಷನಿಂಗ್ ಒದಗಿಸಲಾಗಿದೆ. ವಿಡಿಯೊ ಡೋರ್ ಫೋನ್, ವೈ-ಫೈ, ಕೇಂದ್ರೀಕೃತ ಕೇಬಲ್ ಟಿವಿ, EPABX ಟೆಲಿಫೋನ್, ಪೈಪ್‌ಲೈನ್ ನೈಸರ್ಗಿಕ ಗ್ಯಾಸ್, RO ವಾಟರ್ ಫಿಲ್ಟರ್, ರೆಫ್ರಿಜರೇಟರ್ ಮತ್ತು ಅಡಿಗೆ ಗೀಸರ್‌ನಂತಹ ಸೌಕರ್ಯಗಳಿದ್ದು, ಸಂಸದರಿಗೆ ಎಲ್ಲ ಸೌಲಭ್ಯವಿದೆ.
ವಸತಿ ಸಂಕೀರ್ಣದಲ್ಲಿ ಕ್ಯಾಂಟೀನ್, ಜಿಮ್, ಯೋಗ ಕೇಂದ್ರ, ಕಮ್ಯುನಿಟಿ ಹಾಲ್, ಔಷಧಾಲಯ, ಸೇವಾ ಕೇಂದ್ರ, ಅತಿಥಿಗೃಹ, ಅಂಗಡಿಗಳು, ಮತ್ತು ಕ್ಲಬ್ ಸೌಕರ್ಯಗಳಿವೆ. ಎರಡು ನೆಲಮಾಳಿಗೆಯ ಪಾರ್ಕಿಂಗ್ ಸ್ಥಳ 612 ವಾಹನಗಳಿಗೆ ಸಾಕಷ್ಟು ಜಾಗವನ್ನು ಒದಗಿಸುತ್ತದೆ. ಇದರಿಂದ ಸಂಸದರಿಗೆ ಮತ್ತು ಅವರ ಸಿಬ್ಬಂದಿಗೆ ಸುಗಮ ಸೌಕರ್ಯ ಒದಗುತ್ತದೆ.
ಈ ಸುದ್ದಿಯನ್ನು ಓದಿ: Viral News: ಮಾವ, ಭಾವನಿಂದಲೇ ಅತ್ಯಾಚಾರ; ತನಗೆ ಮಕ್ಕಳಾಗಲ್ಲ ಎಂದು ಕೃತ್ಯಕ್ಕೆ ಸಾಥ್ ನೀಡಿದ ಪಾಪಿ ಪತಿರಾಯ!
ಉದ್ಘಾಟನೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಈ ಆಧುನಿಕ ವಸತಿಗೃಹಗಳು ಸಂಸದರ “ಜೀವನ ಸೌಕರ್ಯ”ವನ್ನು ಹೆಚ್ಚಿಸುವುದರ ಜತೆಗೆ, ಸರ್ಕಾರದ ಬಾಡಿಗೆ ವಸತಿ ವೆಚ್ಚವನ್ನು ಕಡಿಮೆಗೊಳಿಸುತ್ತದೆ ಎಂದು ಒತ್ತಿ ಹೇಳಿದರು. “ಏಕ ಭಾರತ, ಶ್ರೇಷ್ಠ ಭಾರತ”ದ ಏಕತೆಯ ಸಂಕೇತವಾಗಿರುವ ಈ ಸಂಕೀರ್ಣದಲ್ಲಿ, ಸಂಸದರು ದೇಶದ ವಿವಿಧ ಪ್ರಾದೇಶಿಕ ಸಂಸ್ಕೃತಿಗಳನ್ನು ಒಗ್ಗೂಡಿಸಿ ಆಚರಿಸಬೇಕೆಂದು ಸಲಹೆ ನೀಡಿದರು. ಸ್ವಚ್ಛತೆಯನ್ನು ಕಾಪಾಡಲು ಸ್ನೇಹಪೂರ್ಣ ಸ್ಪರ್ಧೆಗಳನ್ನು ಆಯೋಜಿಸುವಂತೆಯೂ ಒತ್ತಾಯಿಸಿದರು.
ಸಂಸತ್ ಭವನ, ರಾಷ್ಟ್ರಪತಿ ಭವನ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಸಮೀಪದಲ್ಲಿರುವ ಈ ಸಂಕೀರ್ಣವು ಸಂಸದರ ಕೆಲಸ ಕಾರ್ಯಕ್ಕೆ ಸುಲಭವಾಗಿದೆ. ಈ ಸ್ಥಳವು ರಾಜಕೀಯ ಕೇಂದ್ರದ ಹೃದಯ ಭಾಗದಲ್ಲಿ ಇದ್ದು, ಆಧುನಿಕ ಸೌಕರ್ಯಗಳೊಂದಿಗೆ ಸಂಸದರ ಕಾರ್ಯ ನಿರ್ವಹಣೆಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ.