Jaya Bachchan: ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಬಂದ ವ್ಯಕ್ತಿಯನ್ನು ತಳ್ಳಿದ ಜಯಾ ಬಚ್ಚನ್; ವಿಡಿಯೊ ವೈರಲ್
Viral Video: ಹಿರಿಯ ನಟಿ, ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಸಾರ್ವಜನಿಕವಾಗಿ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡು ಕೂಗಾಡಿದ್ದಾರೆ. ತಮ್ಮ ಜತೆ ಸೆಲ್ಫಿ ಕ್ಲಿಕ್ಕಿಸಲು ಬಂದ ವ್ಯಕ್ತಿಯನ್ನು ಅವರು ತಳ್ಳಿದ್ದು, ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಅವರ ಈ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.


ದೆಹಲಿ: ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದ ಹುಟ್ಟು ಹಾಕುವ ಹಿರಿಯ ನಟಿ, ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ (Jaya Bachchan) ಇದೀಗ ಮತ್ತೊಮ್ಮೆ ದೇಶಾದ್ಯಂತ ಸುದ್ದಿಯಾಗಿದ್ದಾರೆ. ತಮ್ಮ ಜತೆ ಸೆಲ್ಫಿ ಕ್ಲಿಕ್ಕಿಸಲು ಬಂದ ವ್ಯಕ್ತಿಯನ್ನು ಅವರು ತಳ್ಳಿದ್ದು, ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಜಯಾ ಬಚ್ಚನ್ ತಳ್ಳಿ, ಆತನಿಗೆ ಬೈದಿರುವ ವಿಡಿಯೊ ವೈರಲ್ ಆಗಿದ್ದು (Viral Video), ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಈ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.
ಆಗಸ್ಟ್ 11ರಂದು ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ವಿಪಕ್ಷಗಳ ಸದಸ್ಯರು ಒಟ್ಟು ಸೇರಿದ್ದ ವೇಳೆ ಈ ಘಟನೆ ನಡೆದಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಕಚೇರಿಗೆ ವಿರೋಧ ಪಕ್ಷದ ಸಂಸದರು ಮೆರವಣಿಗೆ ನಡೆಸಲು ಒಟ್ಟು ಸೇರಿದ್ದರು. ಈ ವೇಳೆ ಓರ್ವ ವ್ಯಕ್ತಿ ಜಯಾ ಬಚ್ಚನ್ ಪಕ್ಕ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಜಯಾ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Jaya Bachchan: ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ಜಯಾ ಬಚ್ಚನ್ ಫುಲ್ ಗರಂ- ಇಲ್ಲಿದೆ ವಿಡಿಯೊ
ವಿಡಿಯೊದಲ್ಲಿ ಏನಿದೆ?
32 ಸೆಕೆಂಡ್‌ನ ವಿಡಿಯೊದಲ್ಲಿ ಜಯಾ ಬಚ್ಚನ್ ಸ್ಥಳಕ್ಕೆ ಆಗಮಿಸಿದ ವೇಳೆ ವ್ಯಕ್ತಿಯೊಬ್ಬ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಜಯಾ ಅಸಾಮಾಧಾನ ವ್ಯಕ್ತಪಡಿಸಿ ಏನು ಮಾಡುತ್ತಿದ್ದಿಯಾ? ಎಂದು ಪ್ರಶ್ನಿಸಿ ಆತನನ್ನು ದೂರ ತಳ್ಳುತ್ತಾರೆ. ಅದಾದ ಬಳಿಕ ಸಂಸದೆ, ಆರ್‌ಜೆಡಿ ನಾಯಕಿ ಮಿಸಾ ಭಾರತಿಯ ಜತೆ ಜಯಾ ಬಚ್ಚನ್ ನಡೆದುಕೊಂಡು ಹೋಗಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಜಯಾ ಬಚ್ಚನ್ ವರ್ತನೆಯನ್ನು ಹಲವರು ಖಂಡಿಸಿದ್ದಾರೆ. ʼʼಅವರ ಈ ರೀತಿಯ ವರ್ತನೆಯೇ ಅವರಿಗೆ ಮುಂದೊಂದು ದಿನ ಮುಳುವಾಗಲಿದೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಅಷ್ಟಕ್ಕೂ ಅವರೊಂದಿಗೆ ಯಾಕೆ ಸೆಲ್ಫಿ ತೆಗೆದುಕೊಳ್ಳಬೇಕು?ʼʼ ಎಂದು ಇನ್ನೊಬ್ಬರು ಕೇಳಿದ್ದಾರೆ. ಈ ಹಿಂದೆಯೂ ಹಲವು ಬಾರಿ ಜಯಾ ಬಚ್ಚನ್ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಾಳ್ಮೆ ಕಳೆದುಕೊಂಡು ಕೂಗಾಡಿರುವ ಘಟನೆ ನಡೆದಿದೆ.
ಕಂಗನಾ ರಾಣಾವತ್ ಕಿಡಿ
ಜಯಾ ಬಚ್ಚನ್ ವರ್ತನೆಗೆ ಬಿಜೆಪಿ ಸಂಸದೆ, ನಟಿ ಕಂಗನಾ ರಾಣಾವತ್ ಕೂಡ ಕಿಡಿಕಾರಿದ್ದಾರೆ. ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಯಾ ಬಚ್ಚನ್ ಅವರನ್ನು ಟೀಕಿಸಿದ್ದಾರೆ. ಅವರ ವರ್ತನೆಯನ್ನು ಕಟುವಾದ ಪದಗಳಲ್ಲಿ ಖಂಡಿಸಿದ್ದಾರೆ. "ಅಮಿತಾಬ್ ಬಚ್ಚನ್ ಪತ್ನಿ ಎಂಬ ಕಾರಣಕ್ಕಾಗಿ ಜನರು ಅವರ ಕೋಪವನ್ನು ಸಹಿಸಿಕೊಳ್ಳುತ್ತಾರೆ. ಎಂತಹ ಅವಮಾನ ಮತ್ತು ನಾಚಿಕೆಗೇಡು" ಎಂದು ಕಂಗನಾ ಬರೆದುಕೊಂಡಿದ್ದಾರೆ.
ಇದೀಗ ಜಯಾ ಬಚ್ಚನ್ ವರ್ತನೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಜಯಾ ವರ್ತನೆಗೆ ಸಮರ್ತನೆಯನ್ನೂ ನೀಡಿದ್ದಾರೆ. ಎಲ್ಲೆಂದರಲ್ಲಿ ಸೆಲ್ಫಿಗಾಗಿ ಪೀಡಿಸುವ ಪ್ರವೃತ್ತಿಗೆ ಇಂತಹ ವರ್ತನೆಯಿಂದ ಕಡಿವಾನ ಹಾಕಲು ಸಾಧ್ಯ ಎಂದಿದ್ದಾರೆ.