ನವದೆಹಲಿ, ಅ.13: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ (Jantar Mantar protest) ನಡೆಸಲು ಅನುಮತಿ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಮರುದಿನವೇ, ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮಂಗಳವಾರ (ಅ.13) ಬೆಳಗ್ಗೆ ಪ್ರತಿಭಟನೆ ನಡೆಸಲು ಆಗಮಿಸಿದರು. ಜಂತರ್ ಮಂತರ್‌ನಲ್ಲಿ ನಡೆದ ದಿಢೀರ್ ಪ್ರತಿಭಟನೆಯ ವಿಡಿಯೊವನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಭಟನೆಗಾಗಿ ಜಂತರ್ ಮಂತರ್ ಪ್ರವೇಶಿಸಲು ಸಿಜೆಪಿ ಕಾರ್ಯಕರ್ತರು ಕಬ್ಬಿಣದ ಗೇಟ್ ಮತ್ತು ಪೊಲೀಸ್ ಬ್ಯಾರಿಕೇಡ್‌ಗಳನ್ನು ಏರಿದ್ದಾರೆ. ಬಳಿಕ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದೀಪ್ಕೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಸಿಜೆಪಿ ನಾಯಕ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಸೇರಿದಂತೆ ಕೆಲವು ಕಾರ್ಯಕರ್ತರು ಕೈಯಲ್ಲಿ ಧ್ವಜಗಳನ್ನು ಹಿಡಿದು ಗೇಟ್ ಹಾರಿ ಒಳಪ್ರವೇಶಿಸಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ. ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಅವರನ್ನು ಬೆನ್ನಟ್ಟಿದಾಗ, ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ.
ಭಾರತ್ ಮಾತಾ ಕಿ ಜೈ ಮತ್ತು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ, ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದಿದ್ದಾರೆ.
ಇಲ್ಲಿದೆ ವಿಡಿಯೊ:
ಜಂತರ್ ಮಂತರ್ ಅನ್ನು ಪ್ರತಿಭಟನೆ ನಡೆಸುವ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರ್ಕಾರದ ಆದೇಶವನ್ನು ವಿರೋಧಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಯ ಮನೋಭಾವವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇನ್ನು ಮುಂದೆ ದೇಶದಾದ್ಯಂತ ಹಲವು ಜಂತರ್ ಮಂತರ್‌ಗಳು ಹುಟ್ಟಿಕೊಳ್ಳಲಿವೆ ಎಂದು ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿಯ ಅತ್ಯಂತ ಭದ್ರತೆಯಿರುವ ಕೇಂದ್ರ ಭಾಗದಲ್ಲಿರುವ ಜಂತರ್ ಮಂತರ್, ಇದುವರೆಗೆ ಅಧಿಕೃತ ಪ್ರತಿಭಟನಾ ಸ್ಥಳವಾಗಿತ್ತು. ಆದರೆ, ಇನ್ನು ಮುಂದೆ ಪ್ರತಿಭಟನಾ ಉದ್ದೇಶಕ್ಕಾಗಿ ಅದನ್ನು ಬಳಸಲಾಗುವುದಿಲ್ಲ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗಳು ಮತ್ತು ಧರಣಿಗಳಿಗೆ ಗೊತ್ತುಪಡಿಸಿದ ಸ್ಥಳಗಳಾಗಿ ಮೂರು ಹೊಸ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಪೂರ್ವ ದೆಹಲಿಯಲ್ಲಿರುವ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನದ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಎಸ್ಐಆರ್ ವಿವಾದದ ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕೇಂದ್ರ ದೆಹಲಿಯಲ್ಲಿ ವಿರೋಧ ಪಕ್ಷದ ಬಣ ಇಂಡಿಯಾ ಮತ್ತು ಸಿಜೆಪಿ ನಡೆಸಿದ ಪ್ರತಿಭಟನೆಗಳ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಅಕ್ಟೋಬರ್ 10 ರಿಂದ ದೆಹಲಿ ಪೊಲೀಸರು, ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪ್ರತಿಭಟನಾಕಾರರು ಆ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ.