ನವದೆಹಲಿ, ನ.24: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಹಾಗೂ ವಕ್ತಾರ ಸೌರವ್ ದಾಸ್ ಅವರನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಮಂಗಳವಾರ ಬೆಳಗಿನ ಜಾವ 1 ಗಂಟೆಯ ವಿಮಾನದಲ್ಲಿ ಪ್ರಯಾಣಿಸಲು ಸಜ್ಜಾಗಿದ್ದ ವೇಳೆ, ವಲಸೆ ತಪಾಸಣಾ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಫ್ಲ್ಯಾಗ್ ಮಾಡಲಾಗಿದೆ ಎಂದು ತಿಳಿಸಿ ಅಧಿಕಾರಿಗಳು ವಿಮಾನ ಹತ್ತದಂತೆ ತಡೆದಿದ್ದಾರೆ ಎಂದು ಸೌರವ್ ದಾಸ್ ಆರೋಪಿಸಿದ್ದಾರೆ.
ಆಕ್ಸ್‌ಫರ್ಡ್, ಕೇಂಬ್ರಿಡ್ಜ್ ಸೇರಿದಂತೆ ಇಂಗ್ಲೆಂಡ್‌ನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಕಾಕ್ರೋಚ್ ಚಳವಳಿ ಕುರಿತು ಮಾತನಾಡಲು ಭಾರತೀಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅವರು ತೆರಳುತ್ತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವಲಸೆ ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ತಡೆದು, ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸೌರವ್ ದಾಸ್ ಅವರ ವಿಡಿಯೊ ನೋಡಿ
ನಾನು ವಿಜಯ್ ಮಲ್ಯ ಆಗಿರಬೇಕಿತ್ತು...
ತಮ್ಮ ಪ್ರಯಾಣಕ್ಕೆ ತಡೆ ಒಡ್ಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸೌರವ್ ದಾಸ್, "ವಿದ್ಯಾವಂತ ಯುವಕನೊಬ್ಬ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡುವುದಕ್ಕೆ ಸರ್ಕಾರ ಏಕೆ ಇಷ್ಟೊಂದು ಹೆದರುತ್ತಿದೆ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, "ನಾನು ನೀರವ್ ಮೋದಿ ಅಥವಾ ವಿಜಯ್ ಮಲ್ಯ ಆಗಿರಬೇಕಿತ್ತು, ಆಗ ಆರಾಮವಾಗಿ ದೇಶ ಬಿಟ್ಟು ಹೋಗಬಹುದಿತ್ತು" ಎಂದು ವ್ಯಂಗ್ಯವಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಸೌರವ್ ದಾಸ್ ಅವರ ಈ ಪೋಸ್ಟ್ ಮತ್ತು ಆರೋಪಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಹಲವು ನೆಟ್ಟಿಗರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಸ್‌ಪೋರ್ಟ್ ಫ್ಲ್ಯಾಗ್ ಆಗಲು ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಜೆಪಿಯ ಭಾರತ ವಿರೋಧಿ ಅಭಿಯಾನಕ್ಕೆ ವಿದೇಶಿ ಹಣಕಾಸು ನೆರವು, ಪಾಕಿಸ್ತಾನದ ನಂಟು: ಸಾಕ್ಷಿ ಇದೆ ಎಂದ ಕೇಂದ್ರ